ಬಾಗಲಕೋಟೆ ಉದ್ವಿಗ್ನ

ಬಾಗಲಕೋಟೆ,ಫೆ.೨೦- ಶಿವಾಜಿ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಕಿಡಿಗೇಡಿಗಳ ಕಲ್ಲು ತೂರಾಟದಿಂದ ಬಾಗಲಕೋಟೆ ಉದ್ವಿಗ್ನಗೊಂಡಿದ್ದು, ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.


ನಿನ್ನೆ ರಾತ್ರಿ ಶಿವಾಜಿ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ದುಷ್ಕರ್ಮಿಗಳು ಕಲ್ಲು, ಚಪ್ಪಲಿ ತೂರಾಟ ನಡೆಸಿದ್ದರಿಂದ ಉಂಟಾದ ಗಲಭೆಯಿಂದ ಬಾಗಲಕೋಟೆಯಲ್ಲಿ ಸಂಪೂರ್ಣ ಉದ್ವಿಗ್ನಗೊಂಡಿತ್ತು. ಇಂದು ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಹಳೆ ಬಾಗಲಕೋಟೆ, ನವನಗರ, ವಿದ್ಯಾಗಿರಿ ಈ ಮೂರು ಕಡೆ ಬಿಎನ್‌ಎಸ್ ೧೬೩ ಅಡಿ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದ್ದು ಫೆ. ೧೯ರ ಮಧ್ಯರಾತ್ರಿಯಿಂದ ಫೆ. ೨೪ರ ಮಧ್ಯರಾತ್ರಿಯವರೆಗೆ ನಿಷೇಧಾಜ್ಞೆ ವಿಧಿಸಿ ಬಾಗಲಕೋಟೆ ಉಪವಿಭಾಗಾಧಿಕಾರಿ ಸಂತೋಷ್ ಜಾಗಲಾತ್ಕರ್ ಆದೇಶ ಹೋರಾಡಿಸಿದ್ದಾರೆ.


ಶಿವಾಜಿ ಜಯಂತಿ ಮೆರವಣಿಗೆ ಬಾಗಲಕೋಟೆ ಕಿಲ್ಲಾ ಓಣಿಯ ಬಂಕಾ ಮಸೀದಿ ಬಳಿ ಬರುತ್ತಿದ್ದಂತೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ.

ಈ ವೇಳೆ ಬಾಗಲಕೋಟೆ ಎಸ್‌ಪಿ ಸಿದ್ಧಾರ್ಥ ಗೋಯಲ್ ಅವರ ತಲೆಗೂ ಗಾಯವಾಗಿದೆ. ಜೊತೆಗೆ ಇಂದು ಕಾರ್ಯಕರ್ತರ ಪ್ರಕಾಶ್ ಅರಕೆರೆ ಅವರಿಗೆ ಗಾಯವಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲ್ಲು ತೂರಿದ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಸೇರಿದ್ದ ಯುವಕರು ವಾಗ್ವಾದಕ್ಕಿಳಿದು ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.

ಯುವಕರನ್ನು ಚದುರಿಸಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಸದ್ಯ ಬಾಗಲಕೋಟೆಯಲ್ಲಿ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ನಿಷೇಧಾಜ್ಞೆ ಜಾರಿ ಮಾಡಿ, ಯಾರು ಗುಂಪು ಸೇರದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಜೊತೆಗೆ ಸಭೆ, ಸಮಾರಂಭ ಪ್ರತಿಭಟನೆ ಮಾಡುವುದನ್ನು ನಿಷೇಧಿಸಲಾಗಿದೆ.


ಶಿವಾಜಿ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಮಸೀದಿಯಿಂದ ಕಲ್ಲು ತೂರಾಟ ನಡೆದಿದೆ ಎಂದು ಹಿಂದೂ ಮುಖಂಡರುಗಳು, ಆರೋಪಿಸಿದ್ದು. ಜಿಲ್ಲಾ ಎಸ್ ಪಿ ಸೇರಿದಂತೆ ಪೊಲೀಸರ ಮೇಲೆ ಕಲ್ಲು ಬಿದ್ದಿದೆ ಎಂದು ಹಿಂದೂ ಮುಖಂಡರು ತಿಳಿಸಿದ್ದಾರೆ.


ಈ ಘಟನೆಯನ್ನು ಖಂಡಿಸಿ ಕೆಲ ಯುವಕರು ರಸ್ತೆಯಲ್ಲೇ ಪ್ರತಿಭಟನೆಗೆ ಮುಂದಾಗಿದ್ದು ಕಲ್ಲು ಎಸೆದವರನ್ನು ಬಂಧಿಸಬೇಕು ಮತ್ತು ಐಜಿಪಿ ಘಟನಾ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದಿದ್ದು ಪೋಲಿಸರು ಯುವಕರ ಮನವೊಲಿಸಿ ಪ್ರತಿಭಟನೆ ತೀವ್ರ ಸ್ವರೂಪ ತಾಳದಂತೆ ಕ್ರಮ ವಹಿಸಿದರು.


ಶಿವಾಜಿ ಜಯಂತಿಯ ಮೆರವಣಿಗೆಯ ಮೇಲೆ ಕಲ್ಲು ತೂರಿದವರನ್ನು ಬಂಧಿಸಬೇಕು. ಇಲ್ಲದಿದ್ದರೆ ಬಾಗಲಕೋಟೆ ಬಂದ್ ನಡೆಂಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಕಲ್ಲು ತೂರಾಟದ ಮೇಲೆ ತರಕಾರಿ ಮಾರುಕಟ್ಟೆಯ ೩ ತಳ್ಳುಗಾಡಿಗಳಿಗೂ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದ್ದು, ಸ್ಥಳದಲ್ಲಿದ್ದ ಪೋಲಿಸರು ಕೂಡಲೇ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.


ಬಿಗಿ ಭದ್ರತೆ


ಬಾಗಲಕೊಟೆಯ ಆಯಕಟ್ಟಿನ ಹಾಗೂ ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದ್ದು ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ.

ಮುತಾಲಿಕ್ ಖಂಡನೆ


ಬಾಗಲಕೋಟೆಯ ಶಿವಾಜಿ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ನಡೆದಿರುವ ಕಲ್ಲು ತೂರಾಟವನ್ನು ಖಂಡಿಸಿರುವ ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ ನಡೆಸಿರುವುದನ್ನು ದೇಶದ್ರೋಹಿ ಕೆಲಸ ಎಂದಿದ್ದಾರೆ.


ಈ ಪ್ರಕರಣಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರವೇ ಕಾರಣ. ಮಸೀದಿ ಎದುರು ಮೆರವಣಿಗೆ ಬಂದಾಗ ಕಲ್ಲು, ಚಪ್ಪಲಿ ಎಸೆಯಲಾಗಿದೆ. ಹಿಂದೂಗಳ ಮೇಲೆ ಅನ್ಯಧರ್ಮಿಯರಿಂದ ದೌರ್ಜನ್ಯವಾಗಿದೆ. ಇದನ್ನು ಖಂಡಿಸಿವೆ ಎಂದರು.


ಜಿಲ್ಲಾ ಎಸ್ ಪಿ ಮೇಲೆ ಕಲ್ಲು ಬಿದ್ದಿದೆ. ಒಂದು ವೇಳೆ ಯಾರದೋ ಕಲ್ಲು ಬಿದ್ದಿದ್ದರೆ, ಕಲ್ಲು ಬಿದ್ದೇ ಇಲ್ಲ ಎಂದು ಸರ್ಕಾರ ಹೇಳುತ್ತಿತ್ತು. ಈ ಘಟನೆಗಳಿಗೆ ಜಿಹಾದಿ ಕೊಡುವ ಕುಮ್ಮಕ್ಕೆ ಕಾರಣ ಇಂತಹ ಮಾನಸಿಕತೆ ಉಳ್ಳವರನ್ನು ಮಟ್ಟ ಹಾಕಬೇಕಿದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.


ಎಸ್ ಪಿಗೆ ಕಲ್ಲೇಟು


ಗಲಭೆ ವೇಳೆ ಉದ್ರಿಕ್ತ ಜನರನ್ನು ನಿಯಂತ್ರಿಸುವ ಕರ್ತವ್ಯದಲ್ಲಿ ನಿರತರಾಗಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸಿದ್ಧಾರ್ಥ್ ಗೋಯಲ್ ಅವರ ತಲೆಗೆ ಕಲ್ಲೇಟು ಬಿದ್ದಿದ್ದು, ತಲೆಯಿಂದ ರಕ್ತ ಸುರಿಯುತ್ತಿದ್ದರೂ, ಅವರು ಶಾಂತಿ ಸ್ಥಾಪನೆಯ ತಮ್ಮ ಕರ್ತವ್ಯವನ್ನು ಮುಂದುವರೆಸಿ ಪರಿಸ್ಥಿತಿಯನ್ನು ತಹಬದಿಗೆ ತರುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.