Home ಜಿಲ್ಲೆ ಕಲಬುರಗಿ ದೇಶಕ್ಕೆ ಬಾಬೂಜಿಯವರ ಕೊಡುಗೆ ಅಪಾರ

ದೇಶಕ್ಕೆ ಬಾಬೂಜಿಯವರ ಕೊಡುಗೆ ಅಪಾರ

ಕಲಬುರಗಿ :ಏ.5: ‘ಬಾಬೂಜಿ’ ಎಂದು ಖ್ಯಾತಿ ಹೊಂದಿರುವ ಡಾ.ಬಾಬು ಜಗಜೀವನರಾಂ ಅವರು ಭಾರತದ ಸ್ವಾತಂತ್ರ್ಯ ಹೋರಾಟಗಾರ, ಮಹಾನ್ ದಲಿತ ನಾಯಕ ಮತ್ತು ಮಾಜಿ ಉಪ ಪ್ರಧಾನಿ. ಹಸಿರು ಕ್ರಾಂತಿಯ ಹರಿಕಾರರಾಗಿ ಮತ್ತು ಸುದೀರ್ಘ ಕಾಲ ಸಂಸತ್ ಸದಸ್ಯರಾಗಿ (34 ವರ್ಷ) ದೇಶಸೇವೆ ಸಲ್ಲಿಸುವ ಮೂಲಕ ದೇಶಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು. ನಗರದ ಆಳಂದ ರಸ್ತೆಯ ಸಂತೋಷ ಕಾಲನಿ ಕ್ರಾಸ್ ಸಮೀಪದ ‘ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ‘ಡಾ.ಬಾಬು ಜಗಜೀವನರಾಂ ಅವರ 119ನೇ ಜಯಂತಿ’ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಚಿಂತಕ ಡಾ.ರಾಜಶೇಖರ ಪಾಟೀಲ ಮಾತನಾಡಿ, ಡಾ.ಬಾಬೂಜಿಯವರ ಜನ್ಮದಿನವನ್ನು ‘ಸಮತಾ ದಿವಸ್’ ಎಂದು ಆಚರಿಸಲಾಗುತ್ತದೆ. ಏಕೆಂದರೆ ಅವರು ಸಾಮಾಜಿಕ ಸಮಾನತೆಗಾಗಿ ನಿರಂತರವಾಗಿ ಹೋರಾಡಿದ್ದಾರೆ. ಅವರಲ್ಲಿರುವ ದೇಶ, ಸಮಾಜಪರ ಕಾಳಜಿ ಮಾದರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ದತ್ತು ಹಡಪದ, ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್. ಬಿರಾದಾರ, ಪ್ರಮುಖರಾದ ದಿನೇಶ್ ಮಿಶ್ರಾ, ಪ್ರವೀಣ ತಿವಾರಿ ಸೇರಿದಂತೆ ಇನ್ನಿತರರಿದ್ದರು.