
ಕಲಬುರಗಿ: ಗೋಹತ್ಯೆ ನಿಷೇಧವಾಗಬೇಕು ಗೋ ಆಧಾರಿತ ಕೃಷಿ ಮರು ಆರಂಭವಾಗಬೇಕೆಂಬ ಹರಕೆಯೊಂದಿಗೆ ಜನವರಿ ತಿಂಗಳ 3 ರಂದು ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಬಳಗಾನೂರ ಗ್ರಾಮದ 27 ವರ್ಷದ ಯುವಕ ಕೇದಾರನಾಥ ಅವರು 55 ಕೆ.ಜಿ ಭಾರದ ಜೋಳದ ಚೀಲಹೊತ್ತು ಸುಕ್ಷೇತ್ರ ಅಯೋಧ್ಯಾ ಪ್ರಭು ಶ್ರೀರಾಮನದರ್ಶನಕ್ಕೆ ಪಾದಯಾತ್ರೆಗೆ ತೆರಳಿದ್ದರು. ಶುಕ್ರವಾರ ಶ್ರೀ ರಾಮನ ದರ್ಶನ ಮಾಡುವುದರೊಂದಿಗೆ ಸುದೀರ್ಘ 40 ದಿನಗಳ ಪಾದಯಾತ್ರೆ ಸಂಪನ್ನಗೊಳಿಸಿ ಜೋಳದ ಮೂಟೆ ದೇವಸ್ಥಾನಕ್ಕೆ ಸಮರ್ಪಣೆ ಮಾಡಿದರು
ಅಯೋಧ್ಯೆಯಲ್ಲಿ ವಿಶ್ವ ಹಿಂದು ಪರಿಷತ್ತಿನ ಕೇಂದ್ರೀಯ ಕಾರ್ಯದರ್ಶಿ ಗೋಪಾಲ ನಾಗರಕಟ್ಟಿ ಅವರು ಸ್ವಾಗತ ಮಾಡಿದರು. ನಂತರ ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತರಾಯ ಅವರನ್ನು ಭೇಟಿಮಾಡಿ ತಮ್ಮ ಹರಕೆಯ ಉದ್ದೇಶ ತಿಳಿಸಿ ಆಶೀರ್ವಾದ ಪಡೆದರು.
ಅಂದಾಜು 1450 ಕಿ.ಮೀ ದೂರದ ಅಯೋಧ್ಯೆಗೆ 40 ದಿನಗಳಲ್ಲಿ ತಲುಪಿದರು. ಇವರೊಂದಿಗೆ ಸಹೋದರ ಸಂಬಂಧಿಗಳಾದ ವಿವೇಕಾನಂದ ಕುಂಬಾರ, ರೇವಣಸಿದ್ದ ಕೊಪ್ಪ ಹಾಗೂ ಗ್ರಾಮದ ನೂರಸಾಬ ನದಾಫ್ ಕೂಡ ಪಾದಯಾತ್ರೆ ಮೂಲಕ ಹೆಜ್ಜೆ ಹಾಕಿದ್ದು ವಿಶೇಷ. ಜೊತೆಗೆ ಅರವಿಂದ ಪುರದಾಳ ಅಗತ್ಯ ವಸ್ತುಗಳೊಂದಿಗೆ ದ್ವಿಚಕ್ರವಾಹನದಲ್ಲಿ ತೆರಳಿದರು.
ಬಡ ಕೂಲಿ ಕಾರ್ಮಿಕನಾಗಿರುವ ಕೇದಾರರನಾಥ ಕುಂಬಾರ ಇದಕ್ಕೂ ಮೊದಲು ಶ್ರೀಶೈಲಗೆ ಎರಡು ಬಾರಿ 61 ಕೆ.ಜಿ. ತೂಕದ ಮೂಟೆಯೊಂದಿಗೆ ಹದಿನೈದು ದಿನಗಳ ಪಾದಯಾತ್ರೆ ಮಾಡಿದ್ದರು. ಮತ್ತು ಎರಡು ಬಾರಿ ಹುಲಿಜಂತಿಗೆ ತೆರಳಿದ್ದರು.
- ಗುರುರಾಜ ಪಟ್ಟಣಶೆಟ್ಟಿ

























