
ಕಲಬುರಗಿ,ಏ.4-ನಗರದಲ್ಲಿ ಆಟೋ ಎಲ್‍ಪಿಜಿ ಪೆಟ್ರೋಲ್ ಪಂಪ್‍ಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಕೆಲವು ಪಂಪ್‍ಗಳು ಮನಬಂದಂತೆ ದರ ನಿಗದಿಪಡಿಸಿವೆ. ಆದ್ದರಿಂದ ಇದನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಕಲ್ಯಾಣ ಕರ್ನಾಟಕ ಆಟೀ ಚಾಲಕರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಇಂದು ಪ್ರತಿಭಟನೆ ನಡೆಸಲಾಯಿತು.
ಈ ಹಿಂದೆ ನಗರದಲ್ಲಿ ಎಲ್‍ಪಿಜಿ ದರ 55 ರೂ.ಇದ್ದದ್ದನ್ನು ಏಕಾಏಕಿಯಾಗಿ 110ರೂ. ತಲುಪಿದೆ. ನಗರದಲ್ಲಿರುವ 14 ಆಟೋ ಎಲ್‍ಪಿಜಿ ಪಂಪ್‍ಗಳು ಬಂದ್ ಆಗಿರುವುದರಿಂದ ಆಟೋ ಚಾಲಕರು ಜೀವನ ನಡೆಸುವುದು ಕಷ್ಟವಾಗಿದೆ. ಆದ್ದರಿಂದ 14 ಆಟೋ ಎಲ್‍ಪಿಜಿ ಪಂಪ್‍ಗಳು ಕಾರ್ಯನಿರ್ವಹಿಸುವಂತೆ ಮಾಡಬೇಕು ಮತ್ತು ದರ ನಿಗದಿ ಪರಿಶೀಲಿಸಿ ಆಟೋ ಚಾಲಕರಿಗೆ ಆಗುತ್ತಿರುವ ತೊಂದರೆ ಸರಿ ಪಡಿಸಬೇಕು ಎಂದು ಆಗ್ರಹಿಸಲಾಯಿತು.
ಕಲ್ಯಾಣ ಕರ್ನಾಟಕ ಆಟೋ ಚಾಲಕರ ಸಂಘ ಹಾಗೂ ವಿವಿಧ ಆಟೋ ಸಂಘಗಳು ಜಂಟಿಯಾಗಿ ನಡೆಸಿದ ಈ ಪ್ರತಿಭಟನೆಯಲ್ಲಿ ಆಟೋ ಚಾಲಕರು ಭಾಗವಹಿಸಿದ್ದರು.





















