Home ಮುಖಪುಟ ಸುದ್ದಿ ಕೆಎಚ್‌ಎಂ ನಿವಾಸಕ್ಕೆ ಆಟೋ ಚಾಲಕರ ಮುತ್ತಿಗೆ

ಕೆಎಚ್‌ಎಂ ನಿವಾಸಕ್ಕೆ ಆಟೋ ಚಾಲಕರ ಮುತ್ತಿಗೆ

ಶೀಘ್ರ ಪರಿಹಾರ ಸಚಿವರ ಭರವಸೆ

ಬೆಂಗಳೂರು, ಏ. ೬- ಆಟೋಗಳಿಗೆ ಎಲ್‌ಪಿಜೆ ಸಿಗದೆ ಸಂಕಷ್ಟದಲ್ಲಿರುವ ಆಟೋ ಚಾಲಕರು ಇಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪರವರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದು, ಈ ತಿಂಗಳ ೧೦ ರೊಳಗೆ ಆಟೋ ಎಲ್‌ಪಿಜಿ ಸಮಸ್ಯೆಗೆ ಪರಿಹಾರ ದೊರಕಿಸುವುದಾಗಿ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಆಟೋ ಚಾಲಕರಿಗೆ ಭರವಸೆ ನೀಡಿದ್ದಾರೆ.


ಬೆಂಗಳೂರಿನ ಸಂಜಯ್ ನಗರದಲ್ಲಿರುವ ಆಹಾರ ಸಚಿವ ಮುನಿಯಪ್ಪನವರ ನಿವಾಸಕ್ಕೆ ಆಗಮಿಸಿದ ಪೀಸ್ ಆಟೋ ಸಂಘಟನೆ, ಡಾ. ಅಂಬೇಡ್ಕರ್ ಆಟೋ ಚಾಲಕರ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ಆಟೋ ಚಾಲಕರು ಆಟೋ ಎಲ್‌ಪಿಜಿ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿದರು.


ಆಟೋ ಗ್ಯಾಸ್ ಸಿಗದೆ ಆಟೋ ಚಾಲಕರು ಸಂಕಷ್ಟದಲ್ಲಿದ್ದಾರೆ. ಖಾಸಗಿ ಬಂಕ್‌ಗಳಲ್ಲಿ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆಟೋ ಚಾಲಕರು ಸಚಿವರ ಮುಂದೆ ಅಳಲು ತೋಡಿಕೊಂಡರು.


ಈ ತಿಂಗಳ ೧೦ ರಂದು ಅಧಿಕಾರಿಗಳ ಸಭೆ ಕರೆದಿದ್ದೇವೆ. ನಿಮ್ಮ ಸಮಸ್ಯೆ ಶಾಶ್ವತ ಪರಿಹಾರ ಕೊಡಿಸುತ್ತೇವೆ. ಖಾಸಗಿ ಬಂಕ್‌ಗಳ ಮಾಲೀಕರ ಜತೆ ಮಾತನಾಡಿ ಹೆಚ್ಚು ದರ ವಸೂಲಿ ಮಾಡದಂತೆ ಸೂಚನೆ ನೀಡುತ್ತೇನೆ ಎಂದು ಆಹಾರ ಸಚಿವ ಮುನಿಯಪ್ಪ ಆಟೋ ಚಾಲಕರಿಗೆ ಭರವಸೆ ನೀಡಿದರು.


ಎಲ್‌ಪಿಜಿ ಪೂರೈಕೆಗೆ ಗರಿಷ್ಠ ಪ್ರಯತ್ನಗಳು ನಡೆದಿವೆ. ನಿತ್ಯ ಸುಮಾರು ೩ ಸಾವಿರ ಸಿಲಿಂಡರ್ ಪೂರೈಕೆ ಮಾಡುತ್ತಿದ್ದೇವೆ. ಪೂರೈಕೆಯಲ್ಲಿ ದೊಡ್ಡ ವ್ಯತ್ಯಾಸ ಇಲ್ಲ. ಆದರೆ ಸ್ಥಳೀಯ ಸಮಸ್ಯೆ ಇದೆ. ಲಭ್ಯ ಇರುವ ಎಲ್‌ಪಿಜಿಯನ್ನು ಆಟೋ ಚಾಲಕರಿಗೆ ನೀಡಲು ಬಂಕ್‌ಗಳಿಗೆ ಸೂಚನೆ ನೀಡುವುದಾಗಿಯೂ ಅವರು ಹೇಳಿದರು.


ಇಂದು ಮಧ್ಯಾಹ್ನವೂ ಅಧಿಕಾರಿಗಳ ಸಹ ಮಾತನಾಡುತ್ತೇನೆ. ಈ ತಿಂಗಳ ೧೦ ರೊಳಗೆ ಆಟೋ ಚಾಲಕರ ಸಮಸ್ಯೆ ಬಗೆಹರಿಸುತ್ತೇನೆ ಎಂದು ಸಚಿವರು ಹೇಳಿದರು.
ಸಚಿವರ ಭರವಸೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪೀಸ್ ಆಟೋ ಚಾಲಕರ ಸಂಘಟನೆಯ ಅಧ್ಯಕ್ಷ ರಘು ಅವರು, ಈ ತಿಂಗಳ ೧೦ ರೊಳಗೆ ಸಮಸ್ಯೆ ಬಗೆಹರಿಸುವುದಾಗಿ ಸಚಿವರು ಹೇಳಿದ್ದಾರೆ. ಒಂದು ವೇಳೆ ಸಮಸ್ಯೆ ಬಗೆಹರಿಯದಿದ್ದರೆ ಸಚಿವರು ಹಾಗೂ ಸಂಸದರ ವಿರುದ್ಧ ಕಪ್ಪು ಬಾವುಟ, ಅವರ ನಿವಾಸ ಮುತ್ತಿಗೆ ಕಾರ್ಯಕ್ರಮವನ್ನು ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.