
ಕಲಬುರಗಿ,ಸೆ.1-ಕಳೆದ ತಿಂಗಳು 24 ರಂದು ನಗರದ ಹೀರಾಪುರ ರುದ್ರಭೂಮಿಯಲ್ಲಿ ನಡೆದ ಮೈನಾಳ ಗ್ರಾಮದ ಮರೆಪ್ಪಾ ತಂದೆ ಭೀಮರಾಯ ಕಟ್ಟಿಮನಿ (23) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕನಗರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಹೀರಾಪುರದ ಪವನ್ ಅಲಿಯಾಸ್ ಪ್ರವೀಣ್ ತಂದೆ ಮಲ್ಲಿಕಾರ್ಜುನ ಮುತ್ತಗಿ (29), ಸಂಜಯ್ ಅಲಿಯಾಸ್ ಕರಿಯ ತಂದೆ ಹಣಮಂತ ಸಾವರೇಕರ್ (23), ರಾಹುಲ್ ತಂದೆ ಹಣಮಂತ ಸಾವರೇಕರ್ (23), ಲಕ್ಷ್ಮೀಕಾಂತ ತಂದೆ ಸುರೇಶ ಮೇಲಮನಿ (23), ಆದರ್ಶ ತಂದೆ ರಾಜೇಂದ್ರ ರುದ್ರವಾಡಿ (21) ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಚಾಲಕನಾಗಿ ಕೆಲಸ ಮಾಡುತ್ತಿದ್ದ ಮೈನಾಳ ಗ್ರಾಮದ ಮರೆಪ್ಪಾ ಕಟ್ಟಿಮನಿಯನ್ನು ಹೀರಾಪುರದ ರುದ್ರಭೂಮಿಯಲ್ಲಿ ಆಗಸ್ಟ್ 24 ರಂದು ರಾತ್ರಿ ತಲವಾರದಿಂದ ಹೊಡೆದು ಕೊಲೆ ಮಾಡಲಾಗಿತ್ತು. ಈ ಸಂಬಂಧ ಆನಂದ ಕಟ್ಟಿಮನಿ ಎಂಬುವವರು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಅನ್ವಯ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ಹೆಚ್.ನಾಯಕ್ ಅವರ ಮಾರ್ಗದರ್ಶನದಲ್ಲಿ ಕಲಬುರಗಿ ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶರಣಬಸಪ್ಪ ಹೆಚ್.ಸುಬೇದಾರ ಅವರ ನೇತೃತ್ವದಲ್ಲಿ ಅಶೋಕನಗರ ಪೊಲೀಸ್ ಠಾಣೆ ಪಿಐ ಅರುಣಕುಮಾರ, ಸಿಬ್ಬಂದಿಗಳಾದ ವೈಜನಾಥ, ಮಲ್ಲಿಕಾರ್ಜುನ ಮೇತ್ರೆ, ಶಿವಪ್ರಕಾಶ, ನೀಲಕಂಠರಾಯ, ಮುಜಾಹಿದ್, ಚಂದ್ರಶೇಖರ ಮತ್ತು ಹರಿಕಿಶೋರ್ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಐವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ.
ಕೊಲೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಎಸ್.ಡಿ.ಅವರು ಶ್ಲಾಘಿಸಿದ್ದಾರೆ.
……
ಹುಡುಗಿ ವಿಷಯಕ್ಕೆ ಕೊಲೆ
ಪ್ರೀತಿಸುತ್ತಿರುವ ಹುಡುಗಿ ವಿಷಯಕ್ಕೆ ಮರೆಪ್ಪಾ ಕಟ್ಟಿಮನಿ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಪ್ರೀತಿಸುತ್ತಿರುವ ಹುಡುಗಿಯ ವಿಷಯವಾಗಿ ಮರೆಪ್ಪಾ ಕಟ್ಟಿಮನಿಯನ್ನು ಕೊಲೆ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.