
ನಿಂಬರ್ಗಾ,ಮಾ.29-ಗ್ರಾಮದ ಡಾ.ಬಾಬು ಜಗಜೀವನ ರಾಮ್ ನಗರಕ್ಕೆ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಬಾಬು ಜಗಜೀವನ ರಾಮ್ ನಗರ ನಿವಾಸಿಗಳಿಂದ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಪತ್ರ ಸಲ್ಲಿಸಿ ಮಾತನಾಡಿದ ಕಾರ್ಮಿಕ ಸಂಘದ ಅಧ್ಯಕ್ಷರಾದ ಯಲ್ಲಪ್ಪ ಎಸ್ ಕಟ್ಟಿಮನಿ ಅವರು, ಡಾ.ಬಾಬು ಜಗಜೀವನ ರಾಮ್ ನಗರದಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ಒಳ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಮೇಲೆ ಕಸ ಕಡ್ಡಿ ಬಿದ್ದು ಜಗಜೀವನ್ ರಾಮ್ ನಗರ ಸಂಪೂರ್ಣವಾಗಿ ಗಬ್ಬೆದ್ದು ನಾರುತ್ತಿದೆ ಎಂದು ಯಲ್ಲಪ್ಪ ಕಟ್ಟಿಮನಿ ಅವರು ಆರೋಪಿಸಿದರು. ಅದರ ಜೊತೆಗೆ ಡಾ.ಬಾಬು ಜಗಜೀವನ್ ರಾಮ್ ರವರ 119 ನೇ ಜಯಂತ್ಯೋತ್ಸವಕ್ಕೆ ಧನ ಸಹಾಯ ಮಾಡಬೇಕು ಎಂದು ಗ್ರಾಮ ಪಂಚಾಯತ್ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು. ಮುಂಬರುವ ದಿನಗಳಲ್ಲಿ ಮೂಲಭೂತ ಸೌಕರ್ಯ ಗಳಾದ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಒಳ ಚರಂಡಿ ಸೇರಿದಂತೆ ಮುಂತಾದವುಗಳನ್ನು ಒದಗಿಸದಿದ್ದರೆ ಗ್ರಾಮ ಪಂಚಾಯತ್ ಗೆ ಬೀಗ ಜಡಿದು ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಧರ್ಮರಾಯ ಕಟ್ಟಿಮನಿ, ಆಕಾಶ್ ದೊಡ್ಡಮನಿ,ವಿಠ್ಠಲ್ ಕಟ್ಟಿಮನಿ, ಪ್ರಜ್ವಲ್ ಜವಳಿ, ಸಚಿನ್ ಕಟ್ಟಿಮನಿ ಹಾಗೂ ಗಂಗಾರಾಮ ಕಟ್ಟಿಮನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


























