ಬೇಡಿಕೆ ಈಡೇರಿಕೆಗೆ ಆಗ್ರಹ:ಅಂಗನವಾಡಿ ಕಾರ್ಯಕರ್ತೆಯರ ಮುಷ್ಕರ

ರಾಜ್ಯ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್‌ನ ಸದಸ್ಯರು ಇಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು.

ಬೆಂಗಳೂರು,ಮಾ.೨:ರಾಜ್ಯ ಸರ್ಕಾರದ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರು ಇಂದಿನಿಂದ ರಾಜ್ಯವ್ಯಾಪಿ ಮುಷ್ಕರ ಆರಂಭಿಸಿದ್ದಾರೆ. ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.


ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ೬ನೇ ಗ್ಯಾರಂಟಿಯಾಗಿ ಅಂಗನವಾಡಿ ಕಾರ್ಯಕರ್ತೆಯರ ಮಾಸಿಕ ಗೌರವ ಧನವನ್ನು ೧೫,೦೦೦ ಹಾಗೂ ಸಹಾಯಕಿಯರ ಗೌರವ ಧನವನ್ನು ೧೦,೦೦೦ಕ್ಕೆ ಹೆಚ್ಚಿಸುವುದಾಗಿ ಭರವಸೆ ನೀಡಿತ್ತು. ಆದರೆ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎರಡೂವರೆ ವರ್ಷಗಳಾದರೂ ಭರವಸೆ ಈಡೇರಿಸಿಲ್ಲ ಎಂದು ಎಐಟಿಯೂಸಿ ಪ್ರಧಾನ ಕಾರ್ಯದರ್ಶಿ ಜಯಮ್ಮ ಆರೋಪಿಸಿದ್ದಾರೆ.


ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ನಮ್ಮ ಗೌರವ ಧನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ.


ಪ್ರಮುಖ ಬೇಡಿಕೆಗಳು:


ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನವನ್ನು ೧೫,೦೦೦ಕ್ಕೆ ಹೆಚ್ಚಿಸಬೇಕು. ಅಂಗನವಾಡಿ ಸಹಾಯಕಿಯರ ಗೌರವ ಧನವನ್ನು ೧೦,೦೦೦ಕ್ಕೆ ಹೆಚ್ಚಿಸಬೇಕು. ನಿವೃತ್ತಿ ಹೊಂದಿದವರಿಗೆ ಗ್ರಾಚ್ಯುಟಿ ನೀಡಬೇಕು.ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸಬೇಕು.


ಪೌಷ್ಟಿಕ ಆಹಾರ ತಯಾರಿಕೆಗಾಗಿ ಹೆಚ್ಚುವರಿ ಅನುದಾನ ನೀಡಬೇಕು.ಡಿಎ (ಪ್ರಯಾಣ ಭತ್ಯೆ) ಹೆಚ್ಚಿಸಬೇಕು.ಕಟ್ಟಡ ನಿರ್ಮಾಣಕ್ಕೆ ಮುಂಗಡ ಹಣ ಬಿಡುಗಡೆ ಮಾಡಬೇಕು.ಉಚಿತ ವೈದ್ಯಕೀಯ ಸೌಲಭ್ಯ ಒದಗಿಸಬೇಕು. ಮಾಸಿಕ ಭತ್ಯೆ ಹೆಚ್ಚಳ ಮಾಡಬೇಕು.ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಮೊಟ್ಟೆ ಹಣ ಬಿಡುಗಡೆ ಮಾಡಬೇಕು.


ಅನುಕಂಪದ ನೇಮಕಾತಿಯಲ್ಲಿ ವಾಸ ಸ್ಥಳ ನಿಯಮ ಸಡಿಲಿಕೆ ಮಾಡಬೇಕು.ಬಿಪಿಎಲ್ ಕಾರ್ಡ್ ಮುಂದುವರಿಸಲು ಕ್ರಮ ಕೈಗೊಳ್ಳಬೇಕು.ನಿವೃತ್ತಿ ವಯಸ್ಸನ್ನು ೬೫ ವರ್ಷಕ್ಕೆ ಹೆಚ್ಚಿಸಬೇಕು.ಹೀಗೆ ಹತ್ತರೂ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫ್ರೀಡಂ ಪಾರ್ಕ್‌ನಲ್ಲಿ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಅನಿರ್ಧಿಷ್ಟ ಅವಧಿ ಮುಷ್ಕರ ನಡೆಸುತ್ತಿದರೆ.ಮಾರ್ಚ್ ೬ ರಂದು ರಾಜ್ಯ ಬಜೆಟ್ ಮಂಡನೆ ಇರುವ ಹಿನ್ನೆಲೆಯಲ್ಲಿ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳಿಗೆ ಯಾವ ರೀತಿಯಲ್ಲಿ ಸ್ಪಂದಿಸಲಿದೆ ಎಂಬುದರ ಬಗ್ಗೆ ಕಾದು ನೋಡಬೇಕಾಗಿದೆ.