
ಔರಾದ : ಫೆ.16:ಆರಾಧ್ಯ ದೈವ ಬೇಡಿದ ವರ ಕರುಣಿಸುವ ಕಾಮಧೇನು ಈ ಭಾಗದ ಜನರ ಸಂಕಷ್ಟ ಪರಿಹರಿಸುವ ಕಲ್ಪತರು ಉದ್ಭವಲಿಂಗ ಅಮರೇಶ್ವರ ಅಗ್ನಿ ಪೂಜೆ ಇಂದು ಬೆಳಿಗ್ಗೆ ವಿವಿಧ ಧಾರ್ಮಿಕ ಪದ್ಧತಿಗಳಿಂದ ಅತಿ ವಿಜೃಂಭಣೆಯಿಂದ ಜರುಗಿತು.
ಸತತ ನಾಲ್ಕು ದಿನಗಳ ಕಾಲ ಪಟ್ಟಣದ ವಿವಿಧ ಬಡಾವಣೆಗಳ ಮೂಲಕ ಸಕಲ ವಾದ್ಯಗಳೊಂದಿಗೆ ಶ್ರೀ ಅಮರೇಶ್ವರರ ಪಲ್ಲಕ್ಕಿ ಮೆರವಣಿಗೆ ನಡೆಯುತ್ತದೆ. ನಾಲ್ಕನೇ ದಿನ ಶ್ರೀ ಅಮರೇಶ್ವರ ಅಗ್ನಿ ತುಳಿದ ಮೇಲೆ ಭಕ್ತರು ಅಗ್ನಿ ತುಳಿದು ಪಾವನವಾಗುತ್ತಾರೆ.
ಪಟ್ಟಣದ ದೇಶ್ಮುಖ ಓಣಿ, ಖೂಬಾ ಗಲ್ಲಿ, ಶೆಟಕಾರ ಗಲ್ಲಿಯ ಮೂಲಕ ಉತ್ಸವ ಮೂರ್ತಿ ಹಾಗೂ ಪಲ್ಲಕ್ಕಿ ಮೆರವಣಿಗೆ ನಡೆದು ಪಶು ಆಸ್ಪತ್ರೆ ಎದುರಿಗೆ ಇರುವ ಅಗ್ನಿ ಕುಂಡಕ್ಕೆ ಬಂದು ಅಗ್ನಿ ತುಳಿಯುತ್ತಾರೆ. ದೇವರ ಉತ್ಸವ ಮೂರ್ತಿ ಹಾಗೂ ಪಲ್ಲಕ್ಕಿ ಅಗ್ನಿ ತುಳಿದ ಮೇಲೆ ಸರ್ವ ಭಕ್ತರು ಶ್ರೀ ಅಮರೇಶ್ವರರ ಜೈ ಘೋಶದೊಂದಿಗೆ ಓಂ ಭಲಾ ಶಂಕರ ಭಲಾ ಎನ್ನುತ್ತ ಅಗ್ನಿ ತುಳಿದು ಭಕ್ತಿ ಭಾವ ಮೆರೆದರು.
ಈ ಸಂದರ್ಭದಲ್ಲಿ ಉದ್ಭವಲಿಂಗ ಶ್ರೀ ಅಮರೇಶ್ವರರ ಅಗ್ನಿ ಪೂಜೆ ಹಾಗೂ ಜಾತ್ರೆಗೆ ಆಗಮಿಸುವ ಭಕ್ತರಿಗೆ ಅಲ್ಲಲ್ಲಿ ಪಟ್ಟಣದ ಸಾವಿರಾರು ಭಕ್ತರು ಸೇರಿ ಜಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಮಹಾ ಪ್ರಸಾದ ವ್ಯವಸ್ಥೆ ಮಾಡುತ್ತಾರೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ ಬೆಳಿಗಿನ ಜಾವ ಆಗುವ ಅಗ್ನಿ ಪೂಜೆ ಇಂದು ಬೆಳಿಗ್ಗೆ 10:30 ಗಂಟೆಗೆ ಜರುಗಿದೆ. ಔರಾದ ಪಟ್ಟಣದ ತುಂಬೆಲ್ಲಾ ಹಬ್ಬದ ವಾತಾವರಣ ಪ್ರಮುಖ ಬೀದಿಗಳಲ್ಲಿ ಮಹಾ ಪ್ರಸಾದ ವಿನಿಯೋಗ ದೇವಲೋಕ ಭೂ ಲೋಕಕ್ಕೆ ಇಳಿದಂತಾಗಿದೆ.
























