
ಆಳಂದ,ಫೆ.16-ಪಟ್ಟಣದಲ್ಲಿನ ಸೂಫಿ ಸಂತ ಲಾಡ್ಲೆಮಶಾಕ್ ದರ್ಗಾ ಆವರಣದಲ್ಲಿರುವ ರಾಘವ ಚೈತನ್ಯರ ಸಮಾಧಿಯ ಶಿವಲಿಂಗ ಪೂಜೆಯ ಭಾನುವಾರ ಶಾಂತಿಯುತವಾಗಿ ನಡೆಯಿತು.
ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಜಿಲ್ಲಾ ಪೆÇಲೀಸ್ ಇಲಾಖೆ ಹಾಗೂ ತಾಲೂಕು ಆಡಳಿತವು ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಂಡಿತ್ತು. ಪೆÇಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರ ನೇತೃತ್ವದಲ್ಲಿ ಹೆಚ್ಚುವರಿ ಎಸ್‍ಪಿ, ಡಿವೈಎಸ್‍ಪಿ, ವಿವಿಧ ವಲಯಗಳ ಪಿಎಸ್‍ಐಗಳು ಸೇರಿದಂತೆ ನೂರಾರು ಪೆÇಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ, ಪಟ್ಟಣದ ನಾಲ್ಕು ದಿಕ್ಕುಗಳಲ್ಲಿ ಬ್ಯಾರಿಕೇಡ್ ಹಾಕಿ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನಿರಂತರ ಪೆÇಲೀಸ್ ಗಸ್ತು ನಡೆಯುತ್ತಿದ್ದರೆ, ಕಲಬುರಗಿ ಹೆದ್ದಾರಿಯಿಂದ ಆಳಂದ ಪಟ್ಟಣದ ಪ್ರವೇಶ ಮಾರ್ಗದವರೆಗೆ ಸುಮಾರು ನಾಲ್ಕು ಕಿ.ಮೀ ಅಂತರದಲ್ಲಿ ಪೆÇಲೀಸ್ ನಾಕಾಬಂದಿ ವಿಧಿಸಲಾಗಿತ್ತು. ಶಂಕಾಸ್ಪದ ವಾಹನಗಳು ಹಾಗೂ ವ್ಯಕ್ತಿಗಳ ಪರಿಶೀಲನೆ ನಡೆಸಿ, ಪಟ್ಟಣಕ್ಕೆ ಅನಗತ್ಯ ಪ್ರವೇಶ ತಡೆಯುವ ಮೂಲಕ ಶಾಂತಿ ಕಾಪಾಡಲು ಕ್ರಮ ವಹಿಸಲಾಯಿತು. 163 ಕಲಂ ನಿಷೇಧಾಜ್ಞೆ ಜಾರಿಯಲ್ಲಿದ್ದ ಕಾರಣ, ಜನಸಂದಣಿ ಸೇರುವುದನ್ನು ನಿಬರ್ಂಧಿಸಲಾಗಿತ್ತು.
ಕಟ್ಟುನಿಟ್ಟಿನ ಪೆÇಲೀಸ್ ಸರ್ಪಗಾವಲು ಹಾಗೂ ತಾಲೂಕು ಆಡಳಿತದ ನಿಗಾದ ನಡುವೆ ರಾಘವ ಚೈತನ್ಯರ ಸಮಾಧಿಯಲ್ಲಿ ಶಿವಲಿಂಗ ಪೂಜೆ ಸಂಪೂರ್ಣ ಶಾಂತಿಯುತವಾಗಿ ನೆರವೇರಿತು. ಯಾವುದೇ ಗೊಂದಲ ಅಥವಾ ಅಹಿತಕರ ಘಟನೆಗಳು ಸಂಭವಿಸದೆ, ಪೂಜೆ ಕಾರ್ಯಕ್ರಮ ಸುವ್ಯವಸ್ಥಿತವಾಗಿ ಮುಕ್ತಾಯವಾಯಿತು.
ಬೆಳಗಿನ ಜಾವಕ್ಕೆ ಕೆಲವಷ್ಟು ಮುಕ್ತ ವಾತಾವರಣ ಕಂಡುಬಂದರೂ, ಹೊತ್ತು ಹೆಚ್ಚಾದಂತೆ 163 ಕಲಂ ಪರಿಣಾಮವಾಗಿ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣವಾಗಿ ಸ್ಥಗಿತಗೊಂಡಿತು. ಅಂಗಡಿ, ಹೋಟೆಲ್ ಸೇರಿದಂತೆ ಎಲ್ಲ ವಾಣಿಜ್ಯ ಚಟುವಟಿಕೆಗಳು ಮೊಟಕುಗೊಂಡು, ಜನಸಾಮಾನ್ಯರು ಅಗತ್ಯ ವಸ್ತುಗಳ ಖರೀದಿಗೂ ಅಸೌಕರ್ಯ ಅನುಭವಿಸಿದರು. ರಸ್ತೆಗಳಲ್ಲಿ ಸಂಚಾರ ವಿರಳವಾಗಿದ್ದು, ಪಟ್ಟಣ ಸನ್ನಿವೇಶ ಮೌನಾವೃತಗೊಂಡಿತ್ತು.
ಭದ್ರತಾ ದೃಷ್ಟಿಯಿಂದ ಕೈಗೊಳ್ಳಲಾದ ಕ್ರಮಗಳು ಶಾಂತಿ ಕಾಪಾಡಲು ಸಹಕಾರಿಯಾಗಿದ್ದರೂ, ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿರುವ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ನ್ಯಾಯಾಲಯದ ಆದೇಶದಂತೆ ಶಾಶ್ವತ ಪರಿಹಾರ ಕಂಡುಹಿಡಿದು, ಇಂತಹ ಕಟ್ಟುನಿಟ್ಟಿನ ಬಂದೋಬಸ್ತ್ ಅವಶ್ಯಕತೆ ಇಲ್ಲದಂತೆ ಕ್ರಮ ವಹಿಸಬೇಕೆಂಬ ಒತ್ತಾಯವೂ ಕೇಳಿಬಂದಿತು.
ಕೋರ್ಟ ಆದೇಶದಂತೆ ಪೂಜೆ ತೆರಳಿ ನೆರವೇರಿಸಿದ ಜಿಪಂ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ, ಸಿದ್ರಾಮಯ್ಯ ಹಿರೇಮಠ, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಶಿವುಪುತ್ರಪ್ಪ ನಡಗೇರಿ, ಗುರುಶಾಂತ ಟೆಂಗಳಿ, ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗುಳೆ, ರಾಕೇಶ ಜಮಾದಾರ, ರವಿ ಮದನಕರ್, ಹಣಮಂತರಾವ್ ಪಾಟೀಲ, ಮಲ್ಕಪ್ಪ ಹಿರೇಪೂಜಾರಿ, ಶ್ರೀರಾಮ ಸೇನೆಯ ಈರಣ್ಣಾ ಹತ್ತರಕಿ, ಬಂಜಾರಾ ಕ್ರಾಂತಿದಳ ಅಧ್ಯಕ್ಷರಾಗಿರುವ ರಾಜು ಜೆ. ಚವ್ಹಾಣ ಸೇರಿ 14ಮಂದಿ ಶ್ರೀ ರಾಘವಚೈತನ್ಯ ಶಿವಲಿಂಗಕ್ಕೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಪೂಜೆ ನೆರವೇರಿಸಿದರು.
ಮುಖಂಡರ ಪ್ರತಿಕ್ರಿಯೆ:
ಬಳಿಕ ಪ್ರತಿಕ್ರಿಯೆ ವ್ಯಕ್ತಪಡಿಸಿದ ಹರ್ಷಾನಂದ ಗುತ್ತೇದಾರ ಅವರು, ರಾಘವ ಚೈತನ್ಯ ಶಿವಲಿಂಗದ ಪೂಜೆಗೆ ಜಿಲ್ಲಾಡಳಿತ ಮತ್ತು ಕಾಂಗ್ರೆಸ್ ಸರ್ಕಾರ ಅವಕಾಶ ನೀಡದೆ ಹಿಂದುಗಳ ಭಾವನೆಗೆ ಧಕ್ಕೆಯನ್ನುಂಟು ಮಾಡಿ ಅವಮಾನಿಸುತ್ತಿದೆ. ಆದರೆ ನ್ಯಾಯಾಲಯವು ನಮ್ಮ ಹಕ್ಕುಗಳನ್ನು ಎತ್ತಿಹಿಡಿದು ಪೂಜೆಗೆ ಅವಕಾಶ ನೀಡಿದೆ ಎಂದು ಅವರು ನ್ಯಾಯಾಲಯಕ್ಕೆ ಹಿಂದುಗಳ ಪರ ಕೃತಜ್ಞತೆ ಸಲ್ಲಿಸುವುದಾಗಿ ಪ್ರಕಟಿಸಿದರು.
ಪ್ರಮುಖ ಸಿದ್ರಾಮಯ್ಯ ಹಿರೇಮಠ ಅವರು ಪ್ರತಿಕ್ರಿಯೆಸಿ ದರ್ಗಾ ಆವರಣದಲ್ಲಿ ರಾಘವಚೈತನ್ಯ ಶಿವಲಿಂಗ ವಾತಾವರಣ ಬದಲಾವಣೆ ಆಗುತ್ತಿರುವುದು ತಡೆಹಿಡಿಯಬೇಕು. ಹಿಂದಿನಂತೆ ಜ್ಯೋಶಿ ಮನೆತನದವರಿಗೆ ನಾಲ್ಕನೂರು ವರ್ಷಗಳಿಂದ ಪೂಜೆ ಮಾಡುತ್ತಾ ಬಂದಿದ್ದಾರೆ ಅವರಿಗೆ ನಿತ್ಯ ಪೂಜೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಇನ್ನೂರ್ವ ಮುಖಂಡ ಗುರುಶಾಂತ ಟೆಂಗಳಿ ಅವರು ಆಯೋಧ್ಯ ಮಾದರಿಯಲ್ಲಿ ರಾಘವಚೈತನ್ಯ ಮಂದಿರ ನಿರ್ಮಾಣದ ಸಂಕಲ್ಪವಿದೆ ಎಂದರು.
























