ಸಿದ್ದು ನಂತರ ಸತೀಶ್‌ಗೆ ಸಾರಥ್ಯ

ಬೆಂಗಳೂರು, ಅ. ೨೩- ತಮ್ಮ ತಂದೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಸಂಧ್ಯಾ ಕಾಲದಲ್ಲಿದ್ದಾರೆ. ಅವರ ಸ್ಥಾನ ತುಂಬುವ ಶಕ್ತಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಇದೆ ಎಂಬ ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ರಾಜಕೀಯವಾಗಿ ಸಂಚಲನ ಮೂಡಿಸಿದೆ.


ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಕಪ್ಪಳಗುದ್ದಿ ಗ್ರಾಮದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರು, ನಮ್ಮ ತಂದೆ ರಾಜಕೀಯ ಕೊನೆಯ ಘಟ್ಟದಲ್ಲಿದ್ದಾರೆ. ೨೦೨೮ರ ಚುನಾವಣೆಯಲ್ಲಿ ನಮ್ಮ ತಂದೆಯವರು ಸ್ಪರ್ಧಿಸಲ್ಲ. ಕಾಂಗ್ರೆಸ್‌ನಲ್ಲಿ ಜಾತ್ಯಾತೀತ ಸಿದ್ಧಾಂತ ಇಟ್ಟುಕೊಂಡ ಎಷ್ಟೋ ಜನ ರಾಜಕಾರಣಿಗಳಿದ್ದಾರೆ. ಅವರನ್ನೆಲ್ಲಾ ಸತೀಶ್ ಜಾರಕಿಹೊಳಿ ಮುನ್ನಡೆಸುತ್ತಾರೆ. ಸಿದ್ದರಾಮಯ್ಯ ಅವರ ಸ್ಥಾನ ತುಂಬುವ ಶಕ್ತಿ ಸತೀಶ್ ಜಾರಕಿಹೊಳಿ ಅವರಿಗಿದೆ ಎಂದಿದ್ದಾರೆ.


ಸಿದ್ಧಾಂತ ಬದ್ಧ ರಾಜಕಾರಣಿಗಳು ಇರುವುದು ವಿರಳ. ಆದರೆ ಸತೀಶ್ ಜಾರಕಿಹೊಳಿ ಅವರು ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರು ಆ ಕೆಲಸವನ್ನು ಮುಂದುವರೆಸಲಿ. ಪ್ರಗತಿಪರ ಚಿಂತನೆ ಹೊಂದುವವರಿಗೆ ಸೈದ್ಧಾಂತಿಕ ಮಾರ್ಗದರ್ಶನ ನೀಡಲು ಮತ್ತು ಮುನ್ನೆಡಸಲು ಒಬ್ಬ ನಾಯಕನ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.


ನಮ್ಮ ತಂದೆ ಸಿದ್ದರಾಮಯ್ಯ ಸಾಮಾಜಿಕ ನ್ಯಾಯಾದಲ್ಲಿ ನಂಬಿಕೆ ಇಟ್ಟುಕೊಂಡವರು. ಅದೇ ಸಿದ್ಧಾಂತದಲ್ಲಿ ಸತೀಶ್ ಜಾರಕಿಹೊಳಿ ನಂಬಿಕೆ ಇಟ್ಟುಕೊಂಡು ಹೋಗುತ್ತಿದ್ದಾರೆ. ಹಾಗಾಗಿ ೨೦೨೮ರ ನಂತರ ಆ ರೀತಿ ಪಕ್ಷ ಮುನ್ನಡೆಸುವವರು ಬೇಕು. ಅದಕ್ಕೆ ಸತೀಶ್ ಜಾರಕಿಹೊಳಿ ಸೂಕ್ತ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳುವ ಮೂಲಕ ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ ಆಗಲಿ ಎಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಅವರ ಈ ಹೇಳಿಕೆ ಕಾಂಗ್ರೆಸ್‌ನಲ್ಲಿ ದೊಡ್ಡ ಮಟ್ಟದ ಸಂಚಲನಕ್ಕೆ ಕಾರಣವಾಗಿದೆ.


ನವೆಂಬರ್‌ನಲ್ಲಿ ನಾಯಕತ್ವ ಬದಲಾವಣೆ ಆಗಲಿದೆ ಎಂಬ ಸುದ್ಧಿಗಳು ಹರಿದಾಡುತ್ತಿರುವಾಗಲೇ ಡಾ. ಯತೀಂದ್ರ ಅವರ ಈ ಹೇಳಿಕೆ ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.


ಒಂದು ವೇಳೆ ನಾಯಕತ್ವ ಬದಲಾವಣೆ ಆಗುವ ಸನ್ನಿವೇಶ ಬಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ ಸತೀಶ್ ಜಾರಕಿಹೊಳಿ ಅವರನ್ನು ಮುನ್ನಲೆಗೆ ತರಬಹದು ಎಂಬ ಚರ್ಚೆಯನ್ನು ಯತೀಂದ್ರ ಅವರ ಮಾತುಗಳು ಹುಟ್ಟು ಹಾಕಿವೆ.


ಯತೀಂದ್ರ ಸ್ಪಷ್ಟನೆ


ವೇದಿಕೆಯಲ್ಲಿ ಮಾತನಾಡಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡುತ್ತಾ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು, ನಾನು ರಾಜಕೀಯ ಉತ್ತರಾಧಿಕಾರಿ ಬಗ್ಗೆ ಮಾತನಾಡಿಲ್ಲ. ಆದರೆ, ಆ ರೀತಿ ಸೈದ್ಧಾಂತಿಕ ರಾಜಕಾರಣ ಮಾಡುವವರು ಎಲ್ಲರನ್ನು ಮುನ್ನಡೆಸಲಿ ಎಂಬ ಉದ್ದೇಶದಿಂದ ಹೇಳಿದ್ದೇನೆ. ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಇಲ್ಲ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಯಾಗಲು ಅರ್ಹತೆ ಇರುವವರು ಇನ್ನೂ ಅನೇಕ ನಾಯಕರಿದ್ದಾರೆ. ಎಲ್ಲವನ್ನು ಶಾಸಕರು, ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.

ಬಾಕ್ಸ್
ಯತೀಂದ್ರ ಹೇಳಿಕೆ ವೈಯುಕ್ತಿಕ: ಸತೀಶ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಸತೀಶ್ ಜಾರಕಿಹೊಳಿ ಎಂಬ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ವೈಯುಕ್ತಿ.ಕ ನಾನು ೨೦೨೮ ಕ್ಕೆ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂದು ಮುಂಚೆನೂ ಹೇಳಿದ್ದೇನೆ, ಈಗಲೂ ಹೇಳುತ್ತಿದ್ದೇನೆ. ಎಲ್ಲವನ್ನೂ ಪಕ್ಷ ತೀರ್ಮಾನ ಮಾಡುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನಂತರ ಸತೀಶ್ ಜಾರಕಿಹೊಳಿ ಎಲ್ಲರನ್ನು ಮುನ್ನಡೆಸುತ್ತಾರೆ ಎಂಬ ಯತೀಂದ್ರ ಅವರ ಹೇಳಿಕೆಗೆ ಬೆಳಗಾವಿಯ ಕಾಕತಿ ಉತ್ಸವದ ಮೆರವಣಿಗೆಗೆ ಚಾಲನೆ ನೀಡಿ ಪ್ರತಿಕ್ರಿಯಿಸಿದ ಅವರು, ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರದು ವೈಯುಕ್ತಿಕ ಅಭಿಪ್ರಾಯ. ಅಂತಿಮವಾಗಿ ಯಾರು ನಾಯಕತ್ವ ವಹಿಸಿಕೊಳ್ಳಬೇಕು ಎಂಬುದನ್ನು ಹೈಕಮಾಂಡ್ ಹಾಗೂ ಶಾಸಕರು ನಿರ್ಧಾರ ಮಾಡುತ್ತಾರೆ ಎಂದರು.
ಅಹಿಂದ ನಾಯಕತ್ವ ಇದ್ದೆ ಇದೆ. ಅದರಲ್ಲಿ ಯಾವುದೇ ಪ್ರಶ್ನೆ ಇಲ್ಲ. ಅಹಿಂದ ನಾಯಕತ್ವ ಇಲ್ಲದೆ ರಾಜಕಾರಣ ಮಾಡಲು ಆಗುವುದಿಲ್ಲ. ಎಲ್ಲವನ್ನು ಇಂದೇ ಜೋಡಿಸಲು ಆಗಲ್ಲ. ಅದಕ್ಕಾಗಿ ಕಾಯಬೇಕಾಗುತ್ತದೆ. ಅಹಿಂದಾ ನಾಯಕತ್ವ ಹಿಂದೆಯೂ ಇತ್ತು, ಇವತ್ತೂ ಇದೆ, ಮುಂದೆಯೂ ಇರುತ್ತದೆ ಎಂದರು.
ಎಲ್ಲದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮುಖ ಪಾತ್ರ ವಹಿಸುತ್ತಾರೆ. ಇನ್ನು ೩೦ ತಿಂಗಳು ಇದೆ. ನಂತರ ಏನೆನು ಬೆಳವಣಿಗೆ ಆಗುತ್ತದೋ ಗೊತ್ತಿಲ್ಲ. ಪಕ್ಷ ಹಾಗೂ ಶಾಸಕರು ಆಗಿನ ಸಂದರ್ಭ, ಸನ್ನಿವೇಶದ ಮೇಲೆ ಎಲ್ಲವನ್ನು ನಿರ್ಧರಿಸುತ್ತಾರೆ ಎಂದು ಸತೀಶ್ ಜಾರಕಿಹೊಳಿ ಎಂದರು.
ಡಾ.ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ಅಭಿಪ್ರಾಯ ತಿಳಿಸಲು ಸ್ವತಂತ್ರರಿದ್ದಾರೆ. ಹಾಗಾಗಿ ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಮುಂದೆ ಏನಾಗುತ್ತದೋ ನೋಡೋಣ ಎಂದು ಹೇಳಿದ ಅವರು, ಕೆಪಿಸಿಸಿ ಅಧ್ಯಕ್ಷ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ ಎಂದರು.