ಆನೆಗಳಿಗೆ ಚಿಕಿತ್ಸೆ ನಿರ್ಲಕ್ಷ್ಯ ವಹಿಸಿದರೆ ಕ್ರಮ

ಶಿವಮೊಗ್ಗ,ಅ.೨೩: ಶಿವಮೊಗ್ಗ ದಸರಾದದಲ್ಲಿ ಭಾಗವಹಿಸಿದ್ದ ಸಕ್ರೆಬೈಲ್‌ನ ಆನೆಬಿಡಾರದ ಬಾಲಣ್ಣ, ಸಾಗರ್ ಸೇರಿದಂತೆ ಮೂರು ಆನೆಗಳು ಅನಾರೋಗ್ಯದಿಂದ ಬಳಲುತ್ತಿವೆ.


ಬಿಡಾರದ ಆನೆಗಳ ಅನಾರೋಗ್ಯದ ಬಗ್ಗೆ ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ಪ್ರಕರಣದ ಕುರಿತಾಗಿ ತನಿಖೆ ಕೈಗೊಂಡು ಆಗಿರುವ ವೈಫಲ್ಯದ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿ ಪ್ರಕಟಣೆಯೊಂದನ್ನ ಹೊರಿಡಿಸಿದ್ದಾರೆ.


ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ಅವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಪತ್ರ ಬರೆದು ಈ ವಿಷಯವನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿರುವುದಾಗಿ ತಿಳಿಸಿದ್ದಾರೆ. ಶಿವಮೊಗ್ಗ ದಸರಾ ಮಹೋತ್ಸವಕ್ಕೆ ಕಳುಹಿಸಲಾಗಿದ್ದ ೩೫ ವರ್ಷದ ಬಾಲಣ್ಣ ಆನೆಗೆ ಐ.ವಿ. (Iಗಿ) ಚುಚ್ಚುಮದ್ದು ನೀಡುವ ಸಂದರ್ಭದಲ್ಲಿ ಆದ ನಿರ್ಲಕ್ಷ್ಯದಿಂದ ಸೋಂಕು ತಗುಲಿ ನರಳುತ್ತಿದೆ. ಇದರ ಜೊತೆಗೆ ಶಿಬಿರದಲ್ಲಿರುವ ಸಾಗರ್ ಸೇರಿದಂತೆ ಒಟ್ಟು ೪ ಆನೆಗಳು ಗಾಯದಿಂದ ಬಳಲುತ್ತಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು.


ರಾಜ್ಯದಲ್ಲಿರುವ ಎಲ್ಲ ಆನೆ ಶಿಬಿರಗಳಲ್ಲಿ ಮತ್ತು ಮೃಗಾಲಯಗಳಲ್ಲಿ ಸಮರ್ಪಿತ ವೈದ್ಯಾಧಿಕಾರಿ ಇರಬೇಕು. ಸದ್ಯ ಪಶುವೈದ್ಯರ ಕೊರತೆಯಿರುವ ಬಗ್ಗೆ ವರದಿಯಾಗಿದ್ದು, ಕೂಡಲೇ ಗುತ್ತಿಗೆ ಆಧಾರದ ಮೇಲೆ ಅಥವಾ ನಿಯೋಜನೆಯ ಮೂಲಕ ವೈದ್ಯರನ್ನು ತಕ್ಷಣ ನೇಮಕ ಮಾಡಿಕೊಳ್ಳಬೇಕು.


ಬಾಲಣ್ಣ ಆನೆಗೆ ಚುಚ್ಚುಮದ್ದು ನೀಡುವಾಗ ವೈದ್ಯಾಧಿಕಾರಿ, ಇಲಾಖಾ ಅಧಿಕಾರಿ ಅಥವಾ ಸಿಬ್ಬಂದಿಯ ಯಾವುದೇ ನಿರ್ಲಕ್ಷ್ಯ ಕಂಡುಬಂದಲ್ಲಿ, ಅವರ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸಿನೊಂದಿಗೆ ಒಂದು ವಾರದೊಳಗೆ ಸಮಗ್ರ ವರದಿಯನ್ನು ಕಡ್ಡಾಯವಾಗಿ ಸಚಿವ ಕಚೇರಿಗೆ ಸಲ್ಲಿಸುವಂತೆ ಖಂಡ್ರೆ ಸೂಚಿಸಿದ್ದಾರೆ.