ಆದಾಯ ಮೀರಿ ಕೋಟ್ಯಾಂತರ ಮೌಲ್ಯದ ಆಸ್ತಿ ಸಂಪಾದನೆ ಆರೋಪ ವಿರೇಶ್ ಹಿರೇಮಠ ಮನೆ-ಕಚೇರಿಗಳ ಮೇಲೆ ಲೋಕಾಯುಕ್ತರ ದಿಢೀರ್ ದಾಳಿ; ಮಹತ್ವದ ದಾಖಲೆಗಳ ಜಪ್ತಿ

ಯಾದಗಿರಿ: ಮಾ.5:ಆದಾಯಕ್ಕಿಂತ ಅಸಮಾನ ಪ್ರಮಾಣದಲ್ಲಿ ಆಸ್ತಿ ಸಂಪಾದನೆ ಮಾಡಿರುವ ಗಂಭೀರ ಆರೋಪದ ಹಿನ್ನೆಲೆ ಯಾದಗಿರಿ ನಗರದ ಡೆಪ್ಯುಟಿ ಎಲೆಕ್ಟ್ರಿಕಲ್ ಪರಿವೀಕ್ಷಕರಾದ ವಿರೇಶ್ ಹಿರೇಮಠಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ದಿಢೀರ್ ದಾಳಿ ನಡೆಸಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದ ಘಟನೆ ಜಿಲ್ಲೆಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ನಗರದ ಮಾತಾಮಾಣಿಕೇಶ್ವರಿ ನಗರದಲ್ಲಿರುವವಿರೇಶ್ ಹಿರೇಮಠ ಅವರ ನಿವಾಸಕ್ಕೆ ಲೋಕಾಯುಕ್ತ ಅಧಿಕಾರಿಗಳ ತಂಡ ಏಕಾಏಕಿ ಭೇಟಿ ನೀಡಿ ಮನೆಯಲ್ಲಿದ್ದ ಆಸ್ತಿ ಸಂಬಂಧಿತ ದಾಖಲೆಗಳು, ಬ್ಯಾಂಕ್ ಖಾತೆಗಳ ವಿವರಗಳು, ಆರ್ಥಿಕ ವ್ಯವಹಾರಗಳ ದಾಖಲೆಗಳು ಸೇರಿದಂತೆ ಹಲವಾರು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು. ದಾಳಿ ಸಂದರ್ಭದಲ್ಲಿ ಅಧಿಕಾರಿ ವಿರೇಶ್ ಹಿರೇಮಠ ಮನೆಯಲ್ಲಿ ಇದ್ದರು ಎಂದು ತಿಳಿದುಬಂದಿದ್ದು, ಅಧಿಕಾರಿಗಳು ಸ್ಥಳದಲ್ಲೇ ಪ್ರಾಥಮಿಕ ವಿಚಾರಣೆ ನಡೆಸಿದರು ಎನ್ನಲಾಗಿದೆ.

ಸುಮಾರು ಒಂದು ದಶಕಕ್ಕೂ ಹೆಚ್ಚು ಅವಧಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ವಿರೇಶ್ ಹಿರೇಮಠ ಅವರು ತಮ್ಮ ಅಧಿಕೃತ ವೇತನ ಹಾಗೂ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಸಮರ್ಪಕವಾಗಿ ಆಸ್ತಿ ಸಂಪಾದಿಸಿದ್ದಾರೆ ಎಂಬ ಗಂಭೀರ ದೂರಿನ ಆಧಾರದ ಮೇಲೆ ಲೋಕಾಯುಕ್ತ ಇಲಾಖೆ ಈ ಕಾರ್ಯಾಚರಣೆಯನ್ನು ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಲೋಕಾಯುಕ್ತ ಎಸ್ಪಿ ಸಿದ್ದರಾಜ ಸಿ. ಅವರ ಸಮಗ್ರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಜೆ.ಎಚ್. ಇನಾಂದಾರ್ ಹಾಗೂ ಪೆÇಲೀಸ್ ಇನ್ಸ್‍ಪೆಕ್ಟರ್ ಸಿದ್ದರಾಯ ಬಳರಗಿ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ ಮನೆ ಮತ್ತು ಕಚೇರಿಯಲ್ಲಿ ದಾಖಲೆಗಳ ಸವಿಸ್ತಾರ ಪರಿಶೀಲನೆ ಕೈಗೊಂಡಿತು. ದಾಳಿ ವೇಳೆ ಹಲವು ಮಹತ್ವದ ದಾಖಲೆಗಳು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ ವಿರೇಶ್ ಹಿರೇಮಠ ಅವರು ಬೆಂಗಳೂರು ನಗರದಲ್ಲಿ ಬೆಲೆಬಾಳುವ ನಿವಾಸ, ಸುಮಾರು 14 ಎಕರೆ ಕೃಷಿ ಜಮೀನು, ಜೊತೆಗೆ ಕಲಬುರಗಿ ಮತ್ತು ಯಾದಗಿರಿ ಸೇರಿದಂತೆ ನಾಲ್ಕು ವಿವಿಧ ಸ್ಥಳಗಳಲ್ಲಿ ನಿವೇಶನಗಳು ಹೊಂದಿರುವುದು ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ. ಈ ಆಸ್ತಿಗಳ ಖರೀದಿ ಹಾಗೂ ಮೂಲದ ಕುರಿತು ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಸಮಗ್ರ ಪರಿಶೀಲನೆ ನಡೆಸುತ್ತಿದ್ದಾರೆ.

ಲೋಕಾಯುಕ್ತರ ಈ ಅಚಾನಕ್ ದಾಳಿಯಿಂದ ಜಿಲ್ಲೆಯ ಆಡಳಿತ ವಲಯದಲ್ಲಿ ಸಾಕಷ್ಟು ಸಂಚಲನ ಉಂಟಾಗಿದ್ದು, ಸರ್ಕಾರಿ ಅಧಿಕಾರಿಗಳ ಭ್ರಷ್ಟಾಚಾರ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗಳು ಜೋರಾಗಿವೆ. ತನಿಖೆಯ ಮುಂದಿನ ಹಂತಗಳಲ್ಲಿ ಇನ್ನಷ್ಟು ಆಸ್ತಿ ವಿವರಗಳು ಮತ್ತು ದಾಖಲೆಗಳು ಬಹಿರಂಗವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.