ಅಪಘಾತ; ಐವರು ಸಾವು

ಬೆಂಗಳೂರು,ಫೆ.೧೫-ವೇಗವಾಗಿ ಹೋಗುತ್ತಿದ್ದ ಕಾರು ರಸ್ತೆ ವಿಭಜಕ(ಡಿವೈಡರ್)ಹಾರಿ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದು ನಿನ್ನೆ ಮಧ್ಯರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ವಿದ್ಯಾರ್ಥಿಗಳು ಸೇರಿ ಐವರು ಮೃತಪಟ್ಟಿರುವ ದಾರುಣ ಘಟನೆ ಮಾದನಾಯಕನಹಳ್ಳಿಯ ಜಿಂದಾಲ್ ಬಳಿ ನಡೆದಿದೆ.


ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತ ಪಟ್ಟಿದ್ದರೆ ಇನ್ನೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ,ಡಿಕ್ಕಿಯ ರಭಸಕ್ಕೆ ಬಸ್ ಮುಂಭಾಗದ ಗಾಜು ಪುಡಿಪುಡಿಯಾ ಗಿದ್ದು, ಮುಂಭಾಗ ಕುಳಿತಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ,ಉಳಿದ ೪೨ ಮಂದಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.


ಅಪಘಾತಗೊಂಡ ಕಾರಿನಲ್ಲಿದ್ದ ದುರ್ಗಾ ಪ್ರಸಾದ್ (೨೦), ಕೇಶವ್ (೧೯), ಲಲಿತ್ (೨೨), ಹರ್ಷಿತ್ (೨೦) ಹಾಗೂ ಲಲಿತ್(೨೨) ಮೃತ ದುರ್ದೈವಿಗಳಾಗಿದ್ದಾರೆ.ಬಸ್ ನ ಕಂಡಕ್ಟರ್ ಡ್ರೈವರ್ ಗೆ ಸಣ್ಣಪುಟ್ಟ ಗಾಯಗಳಾಗಿವೆ.


ತುಮಕೂರು ಕಡೆಯಿಂದ ಅತಿವೇಗವಾಗಿ ಬರುತ್ತಿದ್ದ ಇಂಡಿಕಾ ಕಾರು ಜಿಂದಾಲ್ ಬಳಿ ಡಿವೈಡರ್ ಎಗರಿ ಬೆಂಗಳೂರು ಕಡೆಯಿಂದ ಹೊರಟಿದ್ದ ಕೆಎಸ್ ಆರ್ ಟಿಸಿ ಬಸ್?ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.


ಮೃತ ಹರ್ಷಿತ್ ರಾಜನಕುಂಟೆ ಸಾಯಿ ವಿದ್ಯಾ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ದ್ವಿತೀಯ ವರ್ಷದ ಪದವಿ ಓದುತ್ತಿದ್ದನು,ಆತ ರಾತ್ರಿ ೮.೩೦ರ ವರೆಗೂ ಮನೆಯಲ್ಲಿಯೇ ಇದ್ದು ಬಳಿಕ ಸ್ನೇಹಿತನ ಭೇಟಿ ಮಾಡಿ ಬರುವೆ ಎಂದು ಮನೆಯಿಂದ ಹೊರ ಬಂದಿದ್ದನು.


ಮಧ್ಯರಾತ್ರಿ ೧೨ ರ ವೇಳೆ ತುಮಕೂರು ಕಡೆಯಿಂದ ಬೆಂಗಳೂರಿನತ್ತ ಕಾರಿನಲ್ಲಿ ಐವರು ಬರುತ್ತಿದ್ದಾಗ ಅಪಘಾತ ನಡೆದಿದ್ದು, ಕಾರು ಗುದ್ದಿದ ಪರಿಣಾಮ ಬಸ್ ಮುಂಭಾಗ ಜಖಂ ಆಗಿದ್ದರೆ, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ನೆಲಮಂಗಲ ಸರ್ಕಾರಿ ಆಸ್ಪತ್ರೆಯ ಮುಂಭಾಗ ಮೃತ ಹರ್ಷಿತ್ ತಾಯಿಯ ಗೋಳಾಟ ಕರುಳು ಹಿಂಡುವಂತಿದ್ದು,ಮಗನ ಮೃತದೇಹ ತಬ್ಬಿ ಕಣ್ಣೀರು ಹಾಕಿದ್ದಾರೆ.


ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಐವರ ಮೃತದೇಹ ರವಾನೆ ಮಾಡಲಾಗಿದ್ದು,ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.


ಕಳೆದ ಶುಕ್ರವಾರವಷ್ಟೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಎಂ ಸತ್ಯವರ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ಏಳು ಜನ ದುರ್ಮರಣ ಹೊಂದಿದ್ದರು. ಹೊಸಕೋಟೆ ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ಯಾಂಟರ್ ವಾಹನ, ಬೈಕ್ ಹಾಗೂ ಎಕ್ಸ್‌ಯುವಿ ಕಾರಿನ ನಡುವೆ ಸರಣಿ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಕಾರಿನಲ್ಲಿದ್ದ ಆರು ಮಂದಿ ಮತ್ತು ಬೈಕ್ ಸವಾರ ಪ್ರಾಣ ಬಿಟ್ಟಿದ್ದರು. ಆ ಘಟನೆ ಮಾಸುವ ಮುನ್ನವೇ ಮತ್ತೊಂದು ಅವಘಡ ಸಂಭವಿಸಿದೆ.