ಬಟ್ಟೆ ವ್ಯಾಪಾರಕಷ್ಟೆ ಸೀಮಿತವಾದ ರಂಗ ಮಂದಿರ !

ಕಲಬುರಗಿ,ಫೆ.16-ನಗರದ ಹೃದಯ ಭಾಗದಲ್ಲಿರುವ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಬಾಪುಗೌಡ ದರ್ಶನಪುರ ರಂಗ ಮಂದಿರದಲ್ಲಿ ಪ್ರತಿಧ್ವನಿಯಾಗುತ್ತದೆ ಎಂಬ ನೆಪವಡ್ಡಿ ಯಾವುದೇ ಸಮಾರಂಭ ಮಾಡುವುದಕ್ಕೆ ಅವಕಾಶ ಮಾಡಿಕೊಡದ ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿಯವರು, ಇಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕಾಗಿ ಎಂದು ಕನ್ನಡಪರ ಹಾಗೂ ಹಿಂದುಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೀರೆ, ಸೋಫಾ, ಒಳ ಉಡುಪುಗಳು ಮಾರುವ ವ್ಯಾಪಾರಸ್ಥರಿಗೆ ಸಾವಿರಾರು ರೂಪಾಯಿ ತೆಗೆದುಕೊಂಡು ಬಾಡಿಗೆ ಕೊಡುವ ಅಧ್ಯಕ್ಷರು, ಸಣ್ಣ ಸಣ್ಣ ಕಾರ್ಯಕ್ರಮ ಮಾಡಲು ಬಾಡಿಗೆ ಕೊಡಿ ಎಂದಾಗ ಅಲ್ಲಿ ಪ್ರತಿಧ್ವನಿ ಆಗುತ್ತದೆ ಎಂಬ ನೆಪವಡ್ಡಿ ಇಲ್ಲಿಯವರೆಗೆ ಯಾವುದೇ ರೀತಿಯ ಕಾರ್ಯಕ್ರಮಗಳಿಗೆ ಅವರು ಅವಕಾಶ ಮಾಡಿ ಕೊಟ್ಟಿರುವುದಿಲ್ಲ. ಆದರೆ, ಇವತ್ತು ಅವರೇ ಅದೇ ಸ್ಥಳದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುತ್ತಿದ್ದರೆ ಹಾಗಾದರೆ ಇವಾಗ ಪ್ರತಿಧ್ವನಿ ಆಗುವುದಿಲ್ಲವೇ ? ಎಂದು ಕನ್ನಡ ಪರ ಹಾಗೂ ಹಿಂದೂಪರ ಸಂಘಟನೆಗಳ ಹೋರಾಟಗಾರರು ಪ್ರಶ್ನೆ ಮಾಡಿದ್ದಾರೆ.
ಪ್ರತಿ ಜಿಲ್ಲಾಮಟ್ಟದ ಸಮ್ಮೇಳನಗಳನ್ನು ಮಾಡುವುದರೊಂದಿಗೆ ಲಕ್ಷಾಂತರ ರೂಪಾಯಿಗಳನ್ನು ಸಂಗ್ರಹ ಮಾಡುವ ಅವರು ಸಮ್ಮೇಳನಗಳ ಸಂಖ್ಯೆ ಹೆಚ್ಚಿ ಸುತ್ತಿದ್ದಾರೆಯೇ ಹೊರತು ಅರ್ಥಪೂರ್ಣ ಸಮ್ಮೇಳನಗಳನ್ನು ಮಾಡುತ್ತಿಲ್ಲ. ಪ್ರತಿ ಬಾರಿಯ ಸಮ್ಮೇಳನಗಳಲ್ಲಿ ಅಧ್ಯಕ್ಷರು ತಮಗೆ ಇಷ್ಟ ಬಂದ ರೀತಿಯಲ್ಲಿ ಸಮ್ಮೇಳನಗಳನ್ನು ಮಾಡುತ್ತಿರುವುದರಲ್ಲಿ ಯಾವ ಪುರುಷಾರ್ಥವಿದೆ ? ಕನ್ನಡ ಸಾಹಿತ್ಯ ಪರಿಷತ್ತಿನ ನಿಯಮಾವಳಿಯಂತೆ ವರ್ಷಕ್ಕೆ ಒಂದು ಅಥವಾ ಎರಡು ವರ್ಷಕ್ಕೆ ಒಮ್ಮೆಯಾದರೂ ಸರ್ವ ಸದಸ್ಯರ ಸಭೆ ಕರೆಯಬೇಕು. ಈ ಬಗ್ಗೆ ಪ್ರಶ್ನಿಸಿದರೆ ಅವರು ಕ್ಯಾರೆ ಎನ್ನುತ್ತಿಲ್ಲ. ಮಾಹಿತಿ ಹಕ್ಕಿನಲ್ಲಿ ಕೆಲವರು ಪ್ರಶ್ನೆ ಕೇಳಿದರೂ ಅದಕ್ಕೆ ಉತ್ತರ ಕೊಟ್ಟಿಲ್ಲ. ಇದು ನಾಚಿಕೆಗೇಡಿನ ವಿಷಯವಾಗಿದ್ದು, ಇನ್ನು ಮುಂದೆ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷರು ಅವರು ಅಧಿಕಾರ ವಹಿಸಿಕೊಂಡ ದಿನದಿಂದ ಈವರೆಗೆ ಆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಲೆಕ್ಕಪತ್ರ ಕೊಡದೆ ಇದ್ದರೆ ಕೇಂದ್ರ ಸಾಹಿತ್ಯ ಪರಿಷತ್ನ ಆಡಳಿತ ಅಧಿಕಾರಿಗಳಿಗೆ ದೂರು ಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ತಮ್ಮ ಪ್ರಶ್ನೆಗಳಿಗೆ ಉತ್ತರಿಸದೆ ಹೋದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ ಆವರಣದಲ್ಲಿ ಸಮಾನ ಮನಸ್ಕ ಸಂಘಟನೆಗಳ ಮುಖಂಡರ ಸಭೆ ಕರೆದು ಚರ್ಚಿಸಿ ಅಮರಣಾಂತರ ಉಪವಾಸವನ್ನು ಮಾಡುತ್ತೇವೆ ಎಂದು ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆ ಅಧ್ಯಕ್ಷರಾದ ಸುಮಾ ಕವಲ್ದಾರ, ಹಿಂದೂ ಜಾಗೃತಿ ಸೇನೆ ವಿಭಾಗಿಯ ಅಧ್ಯಕ್ಷರಾದ ಲಕ್ಷ್ಮೀಕಾಂತ ಸ್ವಾದಿ, ಶಿವಸೇನೆ ಕಲಬುರ್ಗಿ ನಗರ ಪ್ರಮುಖ ರಾಜಶೇಖರ ಚಕ್ರವರ್ತಿ, ರಾಮ್ ಸೇನಾ ಕಲಬುರಗಿ ಅಧ್ಯಕ್ಷರಾದ ಮಹೇಶ ಕೆಂಭಾವಿ ಎಚ್ಚರಿಸಿದ್ದಾರೆ.