Home ಜಿಲ್ಲೆ ಕಲಬುರಗಿ ಸುದೀರ್ಘ ಸೇವೆಗೆ ಗೌರವಪೂರ್ವಕ ವಿದಾಯ

ಸುದೀರ್ಘ ಸೇವೆಗೆ ಗೌರವಪೂರ್ವಕ ವಿದಾಯ

ಕಲಬುರಗಿ, ಮಾ. 28: ಹನುಮೇಶ ಪ್ರಾಣೇಶ್ ಆಚಾರ್ಯ ಅವರು ತಮ್ಮ ಕರ್ತವ್ಯದಲ್ಲಿ ತೋರಿದ ನಿಷ್ಠೆ, ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವ ಎಲ್ಲರಿಗೂ ಮಾದರಿಯಾಗಿದೆ ಎಂದು ಜೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಾದ ಕೃಷ್ಣ ಬಾಜಪೇಯಿ ಅವರು ಹೇಳಿದರು.
ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಹನುಮೇಶ ಪ್ರಾಣೇಶ್ ಆಚಾರ್ಯ ಅವರ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭ ಕೆ.ಇ.ಬಿ ಇಂಜಿನಿಯರ್ಸ ಅಸೋಸಿಯೆಷನ್ ಹಾಲ್ ಜೆಸ್ಕಾಂ ನಿಗಮ ಕಚೇರಿ ಆವರಣದಲ್ಲಿ ನಡೆಯಿತು. ಈ ವೇಳೆ ಮಾತನಾಡಿದ ಅವರು, ವಿದ್ಯುತ್ ಇಲಾಖೆಯಲ್ಲಿ 34 ವರ್ಷ ಸೇವೆ ಸಲ್ಲಿಸುವುದು ಸುಲಭವಲ್ಲ, ಇಲ್ಲಿಯವರೆಗೂ ನಮ್ರತೆಯಿಂದ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಜೆಸ್ಕಾಂನ ಅಧ್ಯಕ್ಷ ಪ್ರವೀಣ್ ಪಾಟೀಲ್ ಹರವಾಳ ಅವರು, ಹನುಮೇಶ್ ಅವರು ಬಹಳ ಸೌಮ್ಯ ಸ್ವಭಾವದ ವ್ಯಕ್ತಿ. ನಿವೃತ್ತಿ ಹೊಂದಿದ ನಂತರವೂ ಸಂಸ್ಥೆಗೆ ಅಗತ್ಯವಿದ್ದಾಗ ತಮ್ಮ ಸಹಕಾರ ನೀಡುವಂತೆ ವಿನಂತಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜೆಸ್ಕಾಂನ ನಿರ್ದೇಶಕರು (ತಾಂತ್ರಿಕ) ಹನುಮೇಶ ಅವರು ಸದಾ ನಗುಮುಖದಿಂದ ಇರುವ ವ್ಯಕ್ತಿ. ಅವರು ಕಂಪನಿಯಲ್ಲಷ್ಟೇ ಅಲ್ಲದೆ ಅನೇಕ ಸ್ನೇಹಿತರ ಹಾಗೂ ಬಂಧುಗಳ ಪ್ರೀತಿಯನ್ನು ಗಳಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೆಸ್ಕಾಂನ ಮುಖ್ಯ ಆರ್ಥಿಕ ಸಲಹೆಗಾರ ಡಿ.ಎಚ್ ಶಿವಶಂಕರ, ಇಂಜಿನಿಯರ್ ಅಸೋಷಿಯೇಷನ್‍ನ ಉಪಾಧ್ಯಾಕ್ಷ ಸಚಿನ ಹುಂಡೆಕಾರ, ಎಂಐಎಸ್ ವಿಭಾಗದ ಅಧೀಕ್ಷಕ ಅಭಿಯಂತರ ಮುಮ್ತಾಜ್ ಹಾಗೂ ಜೆಸ್ಕಾಂನ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.