
ಪ್ರಿಯಾಂಕ್ ವಿರುದ್ಧ ಬಿವೈವಿ ಕಿಡಿ
ಬೆಂಗಳೂರು, ಫೆ. ೧೬- ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಸಚಿವ ಪ್ರಿಯಾಂಕ ಖರ್ಗೆಯವರ ಹೇಳಿಕೆ ತಲೆಹರಟೆಯ, ಉಡಾಫೆಯ, ಅವಿವೇಕದ ಹೇಳಿಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ.
ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘ ಪರಿವಾರದ ಮೇಲಿನ ದ್ವೇಷದ ಪರಿಣಾಮವಾಗಿ ಪ್ರಿಯಾಂಕ ಖರ್ಗೆ ಈ ಹೇಳಿಕೆ ಕೊಟ್ಟಿದ್ದಾರೆ. ಹತಾಶೆ, ಬಾಲಿಶತನದಿಂದ ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ. ಇದು ತಲೆಹರಟೆ, ಉಡಾಫೆಯ ಹೇಳಿಕೆ ಎಂದು ವಾಗ್ದಾಳಿ ನಡೆಸಿದರು.
ಸಚಿವ ಪ್ರಿಯಾಂಕ ಖರ್ಗೆ ಜವಾಬ್ದಾರಿ ಸ್ಥಾನದಲ್ಲಿರುವವರು. ಮಾತಿನ ಚಪಲಕ್ಕೆ ಸಂಘ ಪರಿವಾರವನ್ನು ಟೀಕಿಸುವುದು ಸರಿಯಲ್ಲ. ಆರ್‌ಎಸ್‌ಎಸ್‌ನ ೧೦೦ ವರ್ಷದ ಸಾಧನೆ, ಸಮಾಜ ಕಟ್ಟುವಲ್ಲಿ ಬದ್ಧತೆ, ತ್ಯಾಗ, ದೇಶ ನಿರ್ಮಾಣದಲ್ಲಿ ಆರ್‌ಎಸ್‌ಎಸ್ ಪಾತ್ರವನ್ನು ಪ್ರಿಯಾಂಕ ಖರ್ಗೆ ಅರ್ಥ ಮಾಡಿಕೊಂಡಿಲ್ಲ. ಕಣ್ಣಿದ್ದು ಕುರುಡರಾಗಿ, ಕಿವಿಯಿದ್ದೂ ಕಿವುಡರಾಗಿ ಅವರು ನಟನೆ ಮಾಡುತ್ತಿದ್ದಾರೆ ಎಂದು ದೂರಿದರು.
ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿ ಹುದ್ದೆಯ ಕಚ್ಚಾಟವನ್ನು ಡೈವರ್ಟ್ ಮಾಡಲು ಅವರು ಈ ರೀತಿ ಆರ್‌ಎಸ್‌ಎಸ್‌ನ್ನು ಟೀಕೆ ಮಾಡುತ್ತಿದ್ದಾರೆ. ಸಚಿವರಾಗಿ ಅವರು ಇಲಾಖೆಯ ಸಾಧನೆ ಬಗ್ಗೆ ಇದುವರೆಗೂ ಮಾತನಾಡಿಲ್ಲ. ಕಲ್ಬುರ್ಗಿ ಏಕೆ ಹಿಂದುಳಿದಿದೆ ಎಂಬುದನ್ನು ಹೇಳಿಲ್ಲ. ೮ ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಆದರೂ ಪ್ರಿಯಾಂಕ ಖರ್ಗೆಯವರಿಗೆ ಕಲ್ಬುರ್ಗಿ ಅಭಿವೃದ್ಧಿ ಕಡೆ ಗಮನ ಕೊಡಲು ಆಗಿಲ್ಲ. ಕಲ್ಬುರ್ಗಿ ನಗರದ ಅನೇಕ ವಾರ್ಡ್‌ಗಳಲ್ಲಿ ಈಗಲೂ ಕುಡಿಯುವ ನೀರು ಸಿಗುತ್ತಿಲ್ಲ. ಇದರ ಬಗ್ಗೆ ಗಮನ ಕೊಡದೆ ಉದ್ದುದ್ದ ಭಾಷಣ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಗಿ ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸೇವೆ ತಿಳಿಯಲು ನಾಗಪುರಕ್ಕೆ ಬನ್ನಿ, ಅಧ್ಯಯನ ಮಾಡಿ ಎಂದು ಪ್ರಿಯಾಂಕ ಖರ್ಗೆಯವರಿಗೆ ಸವಾಲು ಹಾಕಿದ ಅವರು, ನೀವು ಅಭಿವೃದ್ಧಿ ಕೆಲಸ ಮಾಡಿದ್ದರೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡುತ್ತಿದ್ರಿ. ಆದರೆ ಚುನಾವಣೆ ಮಾಡಲು ನಿಮಗೆ ಧೈರ್ಯವಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳಿಲ್ಲ ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ರಾರಾಜಿಸುತ್ತಿವೆ. ಆದರೂ ಶಾಸಕರಿಗೆ ವಿದೇಶ ಪ್ರವಾಸದ ಭಾಗ್ಯ ಕಲ್ಪಿಸಲಾಗಿದೆ. ಮೊದಲು ಆಸ್ಪತ್ರೆಗಳಲ್ಲಿ ಔಷಧಿಗಳನ್ನು ಲಭ್ಯ ಇರುವಂತೆ ನೋಡಿಕೊಳ್ಳಿ. ಗ್ರಾಮೀಣ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಔಷಧಿಗಳ ಕೃತಕ ಕೊರತೆ ಸೃಷ್ಠಿಸಿ ಈ ಸರ್ಕಾರದ ಕಳ್ಳ ದಂಧೆ ಮಾಡಲು ಹೊರಟಿದೆಯಾ ಎಂಬ ಅನುಮಾನ ಜನರಿಗೆ ಬಂದಿದೆ ಎಂದರು.
ಮುಖ್ಯಮಂತ್ರಿ ಪುತ್ರ ಯತೀಂದ್ರ ಅವರು ಶಿವರಾತ್ರಿ ಕಳೆದ ಮೇಲೆ ಡಿ.ಕೆ. ಶಿವಕುಮಾರ್ ರವರಿಗೂ ಒಳ್ಳೆಯದಾಗುತ್ತದೆ, ನಮಗೂ ಒಳ್ಳೆಯದಾಗುತ್ತದೆ ಎಂದಿದ್ದಾರೆ. ಇವರ ಮಾತಿನ ಅರ್ಥ ಕಳೆದ ಎರಡೂವರೆ ವರ್ಷದಲ್ಲಿ ರಾಜ್ಯದ ಜನತೆಗೆ ಒಳ್ಳೆಯದಾಗಿಲ್ಲ, ಮುಂದೆ ಒಳ್ಳೆಯದಾಗುತ್ತದೆ ಎಂಬುದನ್ನು ಅವರು ಸ್ಪಷ್ಟವಾಗಿ ಒಪ್ಪಿಕೊಂಡಿದ್ದಾರೆ ಎಂದರು.
ಬಿಜೆಪಿ ಶಾಸಕ ಬೈರತಿ ಬಸವರಾಜು ವಿರುದ್ಧ ಷಡ್ಯಂತ್ರ ನಡೆದಿದೆ. ತನಿಖೆ ಸರಿಯಾಗಿ ನಡೆಸಲಿ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧವೂ ಷಡ್ಯಂತ್ರ ಮಾಡಿ ಪ್ರಕರಣ ಹಾಕಿದ್ದರು. ಅದರಲ್ಲಿ ಯಡಿಯೂರಪ್ಪನವರಿಗೆ ಕ್ಲೀನ್‌ಚಿಟ್ ಸಿಕ್ಕಿತು. ಬೈರತಿ ಬಸವರಾಜು ಪ್ರಕರಣದಲ್ಲೂ ಸರಿಯಾದ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು.
ಮೈತ್ರಿ ಚೆನ್ನಾಗಿದೆ
ಬಿಜೆಪಿ-ಜೆಡಿಎಸ್ ನಡುವಿನ ಮೈತ್ರಿಯಲ್ಲಿ ಯಾವುದೇ ತೊಂದರೆ ಇಲ್ಲ. ಎರಡೂ ಪಕ್ಷಗಳ ಮಧ್ಯೆ ಸಹಕಾರ ಇದೆ. ಯಾರೋ ಒಬ್ಬಿಬ್ಬರು ಸಹಕಾರ ಇಲ್ಲ ಎಂದು ಮಾತನಾಡುತ್ತಾರೆ. ಅದಕ್ಕೆಲ್ಲಾ ನಾವು ಪ್ರತಿಕ್ರಿಯೆ ಕೊಡಲ್ಲ ಎಂದರು.
ದೋಸ್ತಿ ಪಕ್ಷಗಳಲ್ಲಿ ಮುಂದಿನ ಸಿಎಂ ಜಟಾಪಟಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾಲ್ಕು ಗೋಡೆಗಳ ಮಧ್ಯೆ ಕುಳಿತು ಮಾತನಾಡುವ ವಿಚಾರ ಇದು. ನಾವ್ಯಾರೂ ಪಕ್ಷಕ್ಕಿಂತ ದೊಡ್ಡವರಲ್ಲ. ನಮ್ಮ ರಾಷ್ಟ್ರೀಯ ನಾಯಕರು ಮೈತ್ರಿ ತೀರ್ಮಾನ ತೆಗೆದುಕೊಂಡರು. ನಾವ್ಯಾರೂ ವಿರೋಧ ಮಾಡದೆ ಒಪ್ಪಿಕೊಂಡಿದ್ದೇವೆ. ರಾಷ್ಟ್ರೀಯ ನಾಯಕರ ನಿರ್ಧಾರಕ್ಕೆ ನಾವು ತಲೆಬಾಗಲೇಬೇಕು. ಈ ನಿರ್ಣಯ ಎರಡೂ ಪಕ್ಷಗಳ ನಾಯಕರಿಗೂ ಅನ್ವಯವಾಗುತ್ತದೆ. ಜೆಡಿಎಸ್‌ನವರು ಏನೇ ಹೇಳಿದರೂ ಮಾತನಾಡಬೇಡಿ ಎಂದು ನಮ್ಮ ನಾಯಕರಿಗೆ ಹೇಳಿದ್ದೇನೆ. ನಾವು ಕುಮಾರಸ್ವಾಮಿ ಜತೆ ಮಾತನಾಡುತ್ತೇವೆ. ರಾಜ್ಯದ ಈ ನಾಲಾಯಕ್ ಕಾಂಗ್ರೆಸ್ ಸರ್ಕಾರವನ್ನು ಒಟ್ಟಾಗಿ ತೆಗೆಯುವುದು ಎರಡೂ ಪಕ್ಷಗಳ ಗುರಿ. ಇನ್ನು ಹಲವು ವಿಚಾರಗಳಿವೆ. ನಾನೇ ಖುದ್ದು ಕುಮಾರಸ್ವಾಮಿಯವರ ಜತೆ ಚರ್ಚಿಸುತ್ತೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ರವಿಕುಮಾರ್, ವಿಧಾನ ಪರಿಷತ್ ಸದಸ್ಯ ಶಾಂತರಾಮ್ ಸಿದ್ಧಿ, ಪಕ್ಷ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ, ಮಾಜಿ ಶಾಸಕ ನಿರಂಜನ್ ಉಪಸ್ಥಿತರಿದ್ದರು.



























