
ಕೊಲ್ಹಾರ: ಮಾ.8:ತಾಲೂಕಿನ ತೆಲಗಿ ಗ್ರಾಮದ ಬಳಿ ರೈಲ್ವೆ ಓವರ್ ಹೈಟ್ ಗೇಜ್ ಕಂಬ ರಸ್ತೆ ಮೇಲೆ ಮುರಿದು ಬಿದ್ದ ಪರಿಣಾಮ ದೊಡ್ಡ ಅನಾಹುತ ತಪ್ಪಿದ ಘಟನೆ ಗುರುವಾರ ನಡೆದಿದೆ.
ರೈಲ್ವೆ ಅಂಡರ್‍ಪಾಸ್ ಸಮೀಪದಲ್ಲಿ ಭಾರಿ ವಾಹನಗಳಿಗೆ ಎತ್ತರ ಮಿತಿಯನ್ನು ಸೂಚಿಸಲು ಹಾಕಿದ್ದ ಓವರ್ ಹೈಟ್ ಗೇಜ್ ಕಂಬ ಏಕಾಏಕಿ ಮುರಿದು ರಸ್ತೆ ಮೇಲೆ ಬಿದ್ದಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿ 52 ಮತ್ತು 50ನ್ನು ಸಂಪರ್ಕಿಸುವ ಕೊಲ್ಹಾರ-ತಾಳಿಕೋಟಿ ಮುಖ್ಯ ರಸ್ತೆ ಕೆಲಕಾಲ ಬಂದ್ ಆಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಘಟನೆಯ ಪರಿಣಾಮವಾಗಿ ಸುಮಾರು ಎರಡು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿ ಪ್ರಯಾಣಿಕರು ಹಾಗೂ ಸರಕು ಸಾಗಣೆ ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸಿದರು. ಬಳಿಕ ರೈಲ್ವೆ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೆÇಲೀಸರು ಸ್ಥಳಕ್ಕೆ ಧಾವಿಸಿ ಕಂಬವನ್ನು ತೆರವುಗೊಳಿಸಿ ವಾಹನ ಸಂಚಾರವನ್ನು ಸುಗಮಗೊಳಿಸಿದರು.
ಇನ್ನು ತೆಲಗಿ ಬಳಿ ರೈಲ್ವೆ ಲೆವೆಲ್ ಕ್ರಾಸಿಂಗ್ ಮುಚ್ಚಿ ಅಂಡರ್‍ಪಾಸ್ ನಿರ್ಮಿಸಲಾಗಿದೆ. ಈ ರಸ್ತೆ ಭಾಗದಲ್ಲಿ ಪ್ಲೈಓವರ್ ನಿರ್ಮಾಣ ಮಾಡಬೇಕಾಗಿತ್ತು. ರೈಲ್ವೆ ಕೆಳಸೇತುವೆಗೆ ಕನಿಷ್ಠ 5.50 ಮೀಟರ್ ಎತ್ತರ ಇರಬೇಕು. ಆದರೆ ಹುಬ್ಬಳ್ಳಿ ವಲಯದ ರೈಲ್ವೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೇವಲ 3.95 ಮೀಟರ್ ಎತ್ತರದಲ್ಲಿ ನಿರ್ಮಾಣ ಮಾಡಿರುವುದರಿಂದ ತೆಲಗಿ ರೈಲ್ವೆ ಕೆಳಸೇತುವೆ ಮೂಲಕ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ.
ಈ ಸಮಸ್ಯೆಯನ್ನು ಹಲವು ಬಾರಿ ಶಾಸಕರು ರೈಲ್ವೆ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆಕ್ರೋಶ ಸ್ಥಳೀಯರಿಂದ ವ್ಯಕ್ತವಾಗಿದೆ. ಜಿಲ್ಲೆಯ ಸಂಸದರಾದ ರಮೇಶ ಜಿಗಜಿಣಗಿ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಈ ವಿಷಯದಲ್ಲಿ ತಕ್ಷಣ ಗಮನಹರಿಸಿ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ತೆಲಗಿ ಬಳಿ ರೈಲ್ವೆ ಮುಖ್ಯ ರಸ್ತೆಗೆ ನಿರ್ಮಿಸಿರುವ ಕೆಳಸೇತುವೆ ಅವೈಜ್ಞಾನಿಕವಾಗಿದೆ. ಶಾಸಕರ ಮೂಲಕ ಹಲವು ಬಾರಿ ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಈ ಭಾಗದ ಸಂಸದರು ರೈಲ್ವೆ ಸಚಿವರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು.
- ನಾಗಪ್ಪ ಹೆಬ್ಬಿ


























