ಅರುಂಧತಿ ನಾಗ್ ಅವರೊಂದಿಗೆ ರಂಗಭೂಮಿ ಕುರಿತು ಸಂವಾದ

ಕಲಬುರಗಿ,ಫೆ.22-ರಂಗಾಯಣದ ವತಿಯಿಂದ ಕಲಬುರಗಿ ರಂಗಾಯಣದ ರೆಪರ್ಟರಿ ಕಲಾವಿದರಿಗಾಗಿ ಖ್ಯಾತ ಹಿರಿಯ ರಂಗಕರ್ಮಿ ಅರುಂಧತಿ ನಾಗ್ ಅವರೊಂದಿಗೆ ರಂಗಭೂಮಿ ಕುರಿತು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮೊದಲಿಗೆ ರಂಗಾಯಣದ ನಿರ್ದೇಶಕರು, ಖ್ಯಾತ ಹಿರಿಯ ರಂಗಕರ್ಮಿ ಅರುಂಧತಿ ನಾಗ್ ರವರಿಗೆ ಪುಸ್ತಕ ಕೊಡುವುದರ ಮೂಲಕ ಸ್ವಾಗತ ಮಾಡಿಕೊಂಡರು. ಅವರ ಕಿರು ಪರಿಚಯವನ್ನು ರಂಗಾಯಣದ ತಂತ್ರಜ್ಞ ಮತ್ತು ಕಲಾವಿದ ಶ್ರೀನಿವಾಸ ದೋರನಹಳ್ಳಿ ಅವರು ಮಾಡಿದರು.
ಇವರ ಆರಂಭದ ಜೀವನ ಮುಂಬಯಿಯಲ್ಲಿ ಕಳೆಯಿತು. ಅಲ್ಲಿರುವಾಗ ಮುಂಬಯಿನ ಹವ್ಯಾಸಿ ರಂಗಭೂಮಿಯ ಸಕ್ರಿಯ ವ್ಯಕ್ತಿಯಾಗಿದ್ದರು. ಮರಾಠಿ, ಗುಜರಾತಿ, ಹಿಂದಿ, ಇಂಗ್ಲಿಷ್ ಮೊದಲಾದ ಭಾಷೆಗಳಲ್ಲೂ ಅಭಿನಯಿಸಿದ್ದಾರೆ. ಇವರು ಕೆಲವೊಮ್ಮೆ ತಿಂಗಳಲ್ಲಿ 42 ಪ್ರದರ್ಶನಗಳನ್ನು ಕೊಟ್ಟದ್ದೂ ಇದೆ. ಈ ದಿನಗಳಲ್ಲೇ ಸಹ ರಂಗನಟ ಶಂಕರನಾಗ್ ಅವರ ಪರಿಚಯವಾಯಿತು. ಪರಿಚಯ ಪ್ರೇಮವಾಗಿ ವಿವಾಹವಾದರು. ಅನಂತರ ಇಬ್ಬರೂ ಬೆಂಗಳೂರಿನಲ್ಲಿ ನೆಲೆಸಿ ರಂಗಭೂಮಿ ಹಾಗೂ ಚಲನಚಿತ್ರ – ಈ ಎರಡೂ ಕ್ಷೇತ್ರಗಳಲ್ಲಿ ಕೆಲಸ ಮಾಡತೊಡಗಿದರು.
“ನೋಡಿ ಸ್ವಾಮಿ ನಾವಿರೋದು ಹೀಗೆ” ಎಂಬ ನಾಟಕ ಇವರ ಅಭಿನಯದ ಅತ್ಯಂತ ಜನ ಪ್ರಿಯ ನಾಟಕ. ಇದು ಚಲನಚಿತ್ರವಾಗಿಯೂ ಆಪಾರ ಯಶಸ್ವಿಯಾಯಿತು. ಆಕ್ಸಿಡೆಂಟ್, ಗೋಲಿಬಾರ್, ಪರಮೇಶಿಯ ಪ್ರೇಮ ಪ್ರಸಂಗ ಇವರ ಅಭಿನಯದ ಇತರ ಚಿತ್ರಗಳು. ಮಣಿರತ್ನಂ ಅವರ “ದಿಲ್ ಸೆ” ಎಂಬ ಹಿಂದಿ ಚಿತ್ರದಲ್ಲಿ ಒಂದು ಚಿಕ್ಕ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅನಂತರ `ಪಾ’ ಎಂಬ ಹಿಂದಿ ಚಿತ್ರದಲ್ಲಿ ಅಭಿನಯಿಸಿ ಅಪಾರ ಮನ್ನಣೆಗಳಿಸಿದರು. ಶಂಕರನಾಗ್ ನಿರ್ದೇಶನದ ‘ಒಂದು ಮುತ್ತಿನಕಥೆ’ ಚಿತ್ರಕ್ಕೆ ವಸ್ತ್ರ ವಿನ್ಯಾಸಕಿಯಾಗಿರುವ ಕುರಿತು ತಿಳಿಸಿದರು.
ಪತಿಯನ್ನು ಕಳೆದುಕೊಂಡು ಕೆಲಕಾಲ ಎಲ್ಲ ಚಟುವಟಿಕೆಗಳಿಂದ ದೂರವಿದ್ದ ಇವರು ಅನಂತರ ಶಂಕರನಾಗ್ ಅವರ ಕನಸಿನ ಕಲ್ಪನೆಯ ‘ರಂಗಶಂಕರ’ ಎಂಬ ಸಮಗ್ರ ನಾಟಕ ಚಟುವಟಿಕೆಯ ಕೇಂದ್ರವೊಂದರ ನಿರ್ಮಾಣದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ಈ ರಂಗಭೂಮಿ ಸಂಕೀರ್ಣ ಯೋಜನೆ ಈಗ ಪೂರ್ಣಗೊಂಡಿದ್ದು ಕಾರ್ಯ ಚಟುವಟಿಕೆಯನ್ನು ಆರಂಭಿಸಿದೆ ರಂಗಭೂಮಿಗೂ ಮತ್ತು ಸಿನಿಮಾಗೂ ಬಹಳಷ್ಟು ವ್ಯತ್ಯಾಸಗಳಿವೆ. ಅದಕ್ಕಾಗಿ ನಾನು ರಂಗಭೂಮಿಯಲ್ಲಿಯೇ ಸುಮಾರು 50 ವರ್ಷ ಕಾಲ ಕಳೆದೆ ಎಂದು ಕಲಾವಿದರೊಂದಿಗೆ ತಮ್ಮ ಜೀವನದ ಕುರಿತು ತಿಳಿಸಿದರು.
ರಂಗಾಯಣದ ರೆಪರ್ಟರಿ ಕಲಾವಿದರು ನಟನೆ, ರಂಗಭೂಮಿಯಲ್ಲಿ ಉಳಿದುಕೊಳ್ಳೋದು ಹೇಗೆ?, ಮಹಿಳಾ ಕಲಾವಿದರು ರಂಗಭೂಮಿಯಲ್ಲಿ ಎದರುಸುತ್ತಿರುವ ಸವಾಲುಗಳೆನು, ಮತ್ತು ಸಿನಿಮಾದಲ್ಲಿ ನಾವು ತೊಡಗಿಸಿಕೊಳ್ಳಲು ನಾವೇನು ಮಾಡಬೇಕು ಹೀಗೆ ಬೇರೆ ಬೇರೆ ಪ್ರಶ್ನೆಗಳನ್ನು, ಕಲಾವಿದರಿಗಿರುವ ಗೊಂದಲಗಳನ್ನು ಸಂವಾದದಲ್ಲಿ ಕೇಳಿದರು. ಕಲಾವಿದರಿಗಿರುವ ಗೊಂದಲಗಳನ್ನು ದೂರಮಾಡಿದರು. ಸಂವಾದದ ಕಾರ್ಯಕ್ರಮದಲ್ಲಿ ಡಾ. ಸುಜಾತಾ ಜಂಗಮಶೆಟ್ಟಿ ನಿರ್ದೇಶಕರು, ರಂಗಾಯಣ ಕಲಬುರಗಿ, ಶ್ರೀ ಬಸವರಾಜ ಹೂಗಾರ್ ಜಂಟಿ ನಿರ್ದೇಶಕರು ಕನ್ನಡ ಸಂಸ್ಕøತಿ ಇಲಾಖೆ ಕಲಬುರಗಿ ವಿಭಾಗ, ಉಪ ನಿರ್ದೇಶಕರಾದ ಶ್ರೀಮತಿ ಜಗದೀಶ್ವರಿ ಅ ನಾಸಿ, ರಂಗಾಯಣದ ಆಡಳಿತಾಧಿಕಾರಿ ಸಿದ್ರಾಮ ಸಿಂಧೆ ಮತ್ತು ಶ್ರೀಮತಿ ಉತ್ತರಾದೇವಿ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಾದಗಿರಿ ಹಾಗೂ ರಂಗಾಯಣದ ಸಿಬ್ಬಂದಿ ವರ್ಗದವರು ಜೊತೆಯಾಗಿದ್ದರು.