
ನೋಯ್ಡಾ.ಏ೧೩: ವೇತನ ಹೆಚ್ಚಳದ ಬೇಡಿಕೆಯನ್ನು ಮುಂದಿರಿಸಿ ನಡೆಯುತ್ತಿದ್ದ ಮೂರು ದಿನಗಳ ಕಾರ್ಮಿಕರ ಪ್ರತಿಭಟನೆ ಸೋಮವಾರ ಹಿಂಸಾತ್ಮಕ ತಿರುವು ಪಡೆದಿದ್ದು, ವಾಹನಗಳಿಗೆ ಬೆಂಕಿ ಹಚ್ಚುವ ಘಟನೆಗಳೊಂದಿಗೆ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರತಿಭಟನಾ ಕಾರ್ಮಿಕರು ಗುಂಪುಗಳಾಗಿ ಸೇರಿ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿದ್ದರಿಂದ, ಡಿಎನ್‌ಡಿ ಫ್ಲೈಓವರ್ ಸೇರಿದಂತೆ ದೆಹಲಿ-ನೋಯ್ಡಾ ಗಡಿಭಾಗದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಯಿತು. ಸಾವಿರಾರು ವಾಹನಗಳು ಗಂಟೆಗಳ ಕಾಲ ಸಿಲುಕಿಕೊಂಡಿದ್ದು, ಪ್ರಯಾಣಿಕರು ಸಂಕಷ್ಟಕ್ಕೆ ಒಳಗಾದರು.
ನೋಯ್ಡಾದ ಫೇಸ್-೨ ಪ್ರದೇಶದ ಸೆಕ್ಟರ್ ೧, ೮೪, ೫೯ ಮತ್ತು ೬೦ರಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಸೆಕ್ಟರ್ ೫೯ ಮತ್ತು ೬೦ರಲ್ಲಿ ಕೆಲ ಕಾರ್ಮಿಕರು ಎರಡು ವಾಹನಗಳ ಗಾಜು ಒಡೆದು ಹಾನಿಗೊಳಿಸಿ, ಎರಡು ಬೈಕ್‌ಗಳಿಗೆ ಬೆಂಕಿ ಹಚ್ಚಿದ ಘಟನೆ ವರದಿಯಾಗಿದೆ. ಪರಿಣಾಮವಾಗಿ, ಹಲವು ಕಾರ್ಖಾನೆಗಳು ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಬೇಕಾಯಿತು.
ಸ್ಥಳಕ್ಕೆ ಭಾರಿ ಸಂಖ್ಯೆಯಲ್ಲಿ ಪೊಲೀಸ್ ಪಡೆ ನಿಯೋಜಿಸಲ್ಪಟ್ಟಿದ್ದು, ಪಿಎಸಿ ಮತು ಆರ್‌ಎಎಫ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಸಣ್ಣ ಪ್ರಮಾಣದ ಬಲಪ್ರಯೋಗ ಮಾಡಿದರು.
ದೆಹಲಿಯಿಂದ ನೋಯ್ಡಾಕ್ಕೆ ಹೋಗುವ ಪ್ರಮುಖ ಮಾರ್ಗವಾದ ಚಿಲ್ಲಾ ಗಡಿಭಾಗದ ನೋಯ್ಡಾ ಲಿಂಕ್ ರಸ್ತೆ ಸಂಪೂರ್ಣ ಬಂದ್ ಆಗಿದ್ದು, ಟ್ರಾಫಿಕ್ ಸಂಚಾರಕ್ಕೆ ಭಾರೀ ಅಡಚಣೆ ಉಂಟಾಗಿದೆ ಎಂದು ದೆಹಲಿ ಟ್ರಾಫಿಕ್ ಪೊಲೀಸರು ಪ್ರಕಟಣೆ ನೀಡಿದ್ದಾರೆ.
ಈ ನಡುವೆ, ಪರಿಸ್ಥಿತಿಯನ್ನು ಶಮನಗೊಳಿಸಲು ನೋಯ್ಡಾ ಪ್ರಾಧಿಕಾರದಲ್ಲಿ ತುರ್ತು ಸಭೆ ನಡೆಸಲಾಗಿದ್ದು, ಕಾರ್ಮಿಕರ ವೇತನ ಹೆಚ್ಚಳ, ಓವರ್‌ಟೈಮ್‌ಗೆ ಡಬಲ್ ವೇತನ, ಬೋನಸ್, ವಾರಾಂತ್ಯ ರಜೆ ಮತ್ತು ಕೆಲಸದ ಸುರಕ್ಷತೆ ಸೇರಿದಂತೆ ಹಲವು ಬೇಡಿಕೆಗಳ ಕುರಿತು ಚರ್ಚಿಸಲಾಗಿದೆ.
ಗೌತಮ್ ಬುದ್ಧನಗರ ಜಿಲ್ಲಾಧಿಕಾರಿ ಮೆಧಾ ರೂಪಂ ಅವರು ಕಾರ್ಮಿಕರ ಸಮಸ್ಯೆಗಳನ್ನು ದಾಖಲಿಸಲು ಸಹಾಯವಾಣಿ ಸಂಖ್ಯೆಗಳು ಬಿಡುಗಡೆ ಮಾಡಿದ್ದು, ವಿಶೇಷ ನಿಯಂತ್ರಣ ಕೊಠಡಿ ಸ್ಥಾಪನೆ ಮಾಡುವುದಾಗಿ ತಿಳಿಸಿದ್ದಾರೆ. ಎಲ್ಲಾ ದೂರುಗಳನ್ನು ಶೀಘ್ರ ಪರಿಹರಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಸದ್ಯಕ್ಕೆ ಕೈಗಾರಿಕಾ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದಾರೆ.





















