
ವಾಷಿಂಗ್ಟನ್,ಏ.೧೩- ಅರೇಬಿಯನ್ ಕೊಲ್ಲಿ ಮತ್ತು ಒಮಾನ್ ಕೊಲ್ಲಿಯ ಉದ್ದಕ್ಕೂ ಇರುವ ಸೌಲಭ್ಯಗಳು ಸೇರಿದಂತೆ ಇರಾನಿನ ಬಂದರು ಮತ್ತು ಕರಾವಳಿ ಪ್ರದೇಶ ಪ್ರವೇಶಿಸುವ ‘ಎಲ್ಲಾ ರಾಷ್ಟ್ರಗಳ ಹಡಗುಗಳ ಸಂಚಾರವನ್ನು ಇಂದಿನಿಂದ ನಿರ್ಬಂಧಿಸಲು ಅಮೆರಿಕ ನಿರ್ಧರಿಸಿದೆ.
ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಅಮೆರಿಕ- ಇರಾನ್‌ನ ನೇತೃತ್ವದ ನಿಯೋಗಗಳ ನಡುವೆ ಶಾಂತಿ ಒಪ್ಪಂದ ಮಾತುಕತೆ ಮುರಿದು ಬಿದ್ದ ಹಿನ್ನೆಲೆಯಲ್ಲಿ ಇರಾನ್ ಬಂದರು ಸೇರಿದಂತೆ ಒಮನ್ ಕೊಲ್ಲಿಯ ಮೂಲಕ ಸಂಚಾರ ಮಾಡುವ ಎಲ್ಲಾ ದೇಶಗಳ ಹಡಗುಗಳನ್ನು ನಿಷ್ಪಕ್ಷಪಾತವಾಗಿ ದಿಗ್ಬಂಧನ ಹೇರಲಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಹೊರ್ಮುಜ್ ಜಲಸಂಧಿ ಮುಕ್ತಗೊಳಿಸುವುದು, ಪರಮಾಣು ವಿಯಷದಲ್ಲಿ ಇರಾನ್ ಖಚಿತ ಭರವಸೆ ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಆಯಕಟ್ಟಿನ ಪ್ರಮುಖ ಹೋರ್ಮುಜ್ ಜಲಸಂಧಿಯ ಮೂಲಕ ಇರಾನಿನ ಬಂದರುಗಳಿಗೆ ಸಮುದ್ರ ಪ್ರವೇಶ ಪಡೆಯುವ ಎಲ್ಲಾ ಅಮೆರಿಕದ ನೌಕಾಪಡೆ ಮೂಲಕ ಹಡಗಳನ್ನು ನಿರ್ಬಂಧಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಇರಾನ್‌ನ ಬಂದರುಗಳನ್ನು ಪ್ರವೇಶಿಸುವ ಅಥವಾ ನಿರ್ಗಮಿಸುವ ಎಲ್ಲಾ ಹಡಗುಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸಮಯ ಸಂಜೆ ೭.೩೦ ರಿಂದ ಜಾರಿಗೆ ಬರುವಂತೆ ಹಡಗುಗಳ ದಿಗ್ಬಂಧನ ಜಾರಿಗೆ ಬರಲಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ.
ಅರೇಬಿಯನ್ ಕೊಲ್ಲಿ ಮತ್ತು ಒಮಾನ್ ಕೊಲ್ಲಿಯ ಉದ್ದಕ್ಕೂ ಇರುವವುಗಳನ್ನು ಒಳಗೊಂಡಂತೆ ಇರಾನಿನ ಬಂದರುಗಳು ಮತ್ತು ಕರಾವಳಿ ಪ್ರದೇಶ ಬಳಸುವ “ಎಲ್ಲಾ ರಾಷ್ಟ್ರಗಳ ಹಡಗುಗಳ ಸಂಚಾರವನ್ನು ಸಜ್ಜುಗೊಳಿಸುವುದಾಗಿ ಮಾಹಿತಿ ನೀಡಿದೆ.
ಅಮೆರಿಕ ಸೇನೆಯ ಮೂಲಕ ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಮೊದಲು ಇರಾನ್ ಬಂದರು ಪ್ರವೇಶಿಸುವ ಮತ್ತು ಆಗಮಿಸುವ ಎಲ್ಲಾ ಹಡಗುಗಳನ್ನು ನಿರ್ಬಂಧಿಸಲಾಗುವುದು. ಇರಾನಿನೇತರ ಬಂದರುಗಳಿಗೆ ಮತ್ತು ಅಲ್ಲಿಂದ ಸಾಗುವ ಹಡಗುಗಳಿಗೆ ನೌಕಾಯಾನ ಸ್ವಾತಂತ್ರ್ಯ ಕಾಪಾಡಿಕೊಳ್ಳಲಾಗುವುದು ಎಂದು ತಿಳಿಸಿದೆ.
ಜಾಗತಿಕ ಹಡಗು ಮಾರ್ಗಗಳನ್ನು ಸಂಪೂರ್ಣವಾಗಿ ಅಡ್ಡಿಪಡಿಸದೆ ಇರಾನ್ ಅನ್ನು ಪ್ರತ್ಯೇಕಿಸುವ ಗುರಿ ಹೊಂದಿರುವ ಮಾಪನಾಂಕ ನಿರ್ಣಯ ವಿಧಾನವಾಗಿದೆ ಎಂದು ಮಾಹಿತಿ ನೀಡಿದೆ.
ಸುಂಕ ವಿಧಿಸಿದರೆ ಕಠಿಣ ಕ್ರಮ: ಟ್ರಂಪ್
ಸಂಘರ್ಷ ಕೊನೆಗಾಣಿಸುವ ನಿಟ್ಟಿನಲ್ಲಿ ಇರಾನ್ ಮತ್ತೆ ಮಾತುಕತೆಗೆ ಬಂದರೂ ಕ್ಯಾರೆ ಎನ್ನುವುದಿಲ್ಲ ಎಂದು ಹೇಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರ್ಮುಜ್ ಜಲಸಂಧಿಯ ,ಮೂಲಕ ಸಾಗುವ ಹಡಗುಗಳಿಗೆ ಅಕ್ರiವಾಗಿ ಸುಂಕ ವಿಧಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಕೆ ನೀಡಿದ್ದಾರೆ.
ಇರಾನ್‌ಗೆ ಸುಂಕ ವಿಧಿಸಿ ಹೊರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರೆ ಅಂತಹ ದೇಶಗಳ ಹಡಗುಗಳನ್ನು ಹುಡುಕಿ ಅವುಗಳ ಮೇಲೂ ನಿಷೇಧ ಹೇರಲಾಗುವುದು ಎಂದು ತಿಳಿಸಿದ್ದಾರೆ.
ವಾಣಿಜ್ಯ ಹಡಗುಗಳನ್ನು ಗುರಿಯಾಗಿಸುವ ಇರಾನಿನ ಪಡೆಗಳ ವಿರುದ್ದ ಪ್ರತೀಕಾರ ಎದುರಿಸಬೇಕಾಗುತ್ತದೆ. ಎದುರಿಸಬೇಕಾಗುತ್ತದೆ. ಹಡಗುಗಳ ಮೇಲೆ ಗುಂಡು ಹಾರಿಸಿದರೆ ಇರಾನ್ ಅನ್ನು ನರಕಕ್ಕೆ ದೂಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಬೆದರಿಕೆಗೆ ಬಗ್ಗಲ್ಲ: ಇರಾನ್
ಇರಾನ್ ಸಂಸದೀಯ ಸ್ಪೀಕರ್ ಮೊಹಮ್ಮದ್ ಬಕರ್ ಖಲೀಬಾಫ್ ಪ್ರತಿಕ್ರಿಯಿಸಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಬೆದರಿಕೆಗೆ ಇರಾನ್ ಬಗ್ಗುವುದಿಲ್ಲ ಎಂದು ಗುಡುಗಿದ್ದಾರೆ.
ಇರಾನ್ ಮೇಲೆ ದಾಳಿ ನಡೆಸಿದರೆ ಇರಾನ್ ಕೂಡ ಪ್ರತಿದಾಳಿ ನಡೆಸಲಿದೆ, ಇದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅರ್ಥ ಮಾಡಿಕೊಳ್ಳಬೇಕು, ಏಟಿಗೆ ನಾವೂ ಎದಿರೇಟು ನೀಡುತ್ತೇವೆ ಎಂದಿದ್ದಾರೆ. ಹೊರ್ಮುಜ್ ಜಲಸಂಧಿಯ ಬಳಿ ಯಾವುದೇ ವಿದೇಶಿ ಮಿಲಿಟರಿ ಉಪಸ್ಥಿತಿ ಕಂಡುಬಂದರೆ ಅದು ಕದನ ವಿರಾಮದ ಉಲ್ಲಂಘನೆ ಎಂದು ಪರಿಗಣಿಸಲಾಗುವುದು ಎಂದು ಇರಾನ್ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಎಚ್ಚರಿಸಿದೆ.





















