Home ಜಿಲ್ಲೆ ಛಾಯಾಚಿತ್ರ ಪ್ರದರ್ಶನಗೈದ ಛಾಯಾಗ್ರಾಹಕರಿಗೆ ಸನ್ಮಾನ

ಛಾಯಾಚಿತ್ರ ಪ್ರದರ್ಶನಗೈದ ಛಾಯಾಗ್ರಾಹಕರಿಗೆ ಸನ್ಮಾನ

ಬೀದರ್:ಏ.೧೩: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ೪೦ನೇ ರಾಜ್ಯ ಸಮ್ಮೇಳನದ ಅಂಗವಾಗಿ ಬೀದರ ನಗರದ ಝೆರಾ ಕನ್ವೆನ್ಷನ್ ಸಭಾಂಗಣದಲ್ಲಿ ಆಯೋಜಿಸಲಾದ ಭವ್ಯ ಛಾಯಾಚಿತ್ರ ಪ್ರದರ್ಶನವು ಅಪಾರ ಜನಮನ ಸೆಳೆಯುವ ಮೂಲಕ ಯಶಸ್ವಿಯಾಗಿ ನೆರವೇರಿತು. ಈ ಹಿನ್ನೆಲೆಯಲ್ಲಿ ಪ್ರದರ್ಶನದಲ್ಲಿ ಶ್ರಮಿಸಿದ ಛಾಯಾಗ್ರಾಹಕರು ಹಾಗೂ ಆಯೋಜಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸನ್ಮಾನ ಸಮಾರಂಭದಲ್ಲಿ ಛಾಯಾಚಿತ್ರ ಪ್ರದರ್ಶನ ಸಮಿತಿಯ ಪ್ರಧಾನ ಸಂಚಾಲಕರಾದ ಗೋಪಿಚಂದ ತಾಂದಳೆ, ಕಲಬುರಗಿಯ ಖ್ಯಾತ ಛಾಯಾಗ್ರಾಹಕ ನಾರಾಯಣ ಜೋಶಿ ಹಾಗೂ ಬಸವಕಲ್ಯಾಣದ ಛಾಯಾಗ್ರಾಹಕ ವೀರಶೇಟ್ಟಿ ಪಾಟೀಲ್ ಅವರನ್ನು ಶಾಲು ಹೊದಿಸಿ, ಹೂಮಾಲೆ ಹಾಕಿ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಎರಡು ದಿನಗಳ ಕಾಲ ನಡೆದ ಈ ಪ್ರದರ್ಶನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಯ್ಕೆಗೊಂಡ ಅನೇಕ ಛಾಯಾಚಿತ್ರಗಳು ಪ್ರದರ್ಶನಗೊಂಡು, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಪ್ರಕೃತಿ ವೈವಿಧ್ಯತೆಯನ್ನು ಮನಮೋಹಕವಾಗಿ ಚಿತ್ರಿಸಿವೆ. ಪ್ರದರ್ಶನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಾವಿರಾರು ಮಂದಿ ಭೇಟಿ ನೀಡಿ ಛಾಯಾಚಿತ್ರಗಳನ್ನು ವೀಕ್ಷಿಸಿದರು.
ಈ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಚಾಲನೆ ನೀಡಿದ್ದು, ಕಾರ್ಯಕ್ರಮದ ಮಹತ್ವವನ್ನು ಹೆಚ್ಚಿಸಿತು. ಈ ಸಂದರ್ಭದಲ್ಲಿ ಅವರು ಪತ್ರಕರ್ತರ ಸಂಘದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ, ಕನ್ನಡಪ್ರಭ ಸಂಪಾದಕ ರವಿ ಹೆಗಡೆ, ಆನಂದ ದೇವಪ್ಪಾ, ಅಪ್ಪಾರಾವ ಸೌದಿ, ಶಿವಕುಮಾರ ಸ್ವಾಮಿ, ಭವಾನಿಸಿಂಗ್ ಠಾಕೂರ್ ಸೇರಿದಂತೆ ಹಲವು ಗಣ್ಯರು, ಪತ್ರಕರ್ತರು ಹಾಗೂ ಛಾಯಾಗ್ರಾಹಕರು ಉಪಸ್ಥಿತರಿದ್ದರು.
ಈ ಸನ್ಮಾನ ಸಮಾರಂಭವು ಛಾಯಾಗ್ರಾಹಕರ ಪರಿಶ್ರಮವನ್ನು ಗುರುತಿಸುವುದರೊಂದಿಗೆ, ಭವಿಷ್ಯದಲ್ಲಿ ಇನ್ನಷ್ಟು ಉತ್ತಮ ಸೃಜನಾತ್ಮಕ ಕಾರ್ಯಗಳಿಗೆ ಪ್ರೇರಣೆಯಾಗಿದೆ.
ಈ ಪ್ರದರ್ಶನದಲ್ಲಿ ಬೀದರ ಜಿಲ್ಲೆಯಿಂದ ಪತ್ರಿಕಾ ಛಾಯಾಗ್ರಾಹಕರಾದ ಗೋಪಿಚಂದ ತಾಂದಳೆ, ವಿಜಯವಾಣಿ ಜಿಲ್ಲಾ ಛಾಯಾಗ್ರಾಹಕರಾದ ಶ್ರವಣಕುಮಾರ ಮೇತ್ರೆ, ಪ್ರಜಾವಾಣಿ ಜಿಲ್ಲಾ ಛಾಯಾಗ್ರಾಹಕರಾದ ಲೋಕೇಶ ಬಿರಾದಾರ ಹಾಗೂ ಬಸವಕಲ್ಯಾಣದ ಛಾಯಾಗ್ರಾಹಕರಾದ ವೀರಶೇಟ್ಟಿ ಪಾಟೀಲ್ ಅವರ ಛಾಯಾಚಿತ್ರಗಳು ಪ್ರದರ್ಶನಕ್ಕಿಡಲಾಗಿತ್ತು.