
ಕೋಲಾರ ,ಏ,೧೩- ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕೆ.ಕುರುಪ್ಪಲ್ಲಿಯ ಪ್ರಸಿದ್ದ ಬೀರೇಶ್ವರ,ಭತ್ತೇಶ್ವರ,ಸಿದ್ದೇಶ್ವರ ಸ್ವಾಮಿ ದೇವಾಲಯದ ದೇವ ವೃಕ್ಷಗಳ ವನದಲ್ಲಿ ಪ್ರತಿ ಏಳು ವರ್ಷಗಳಿಗೊಮ್ಮೆ ನಡೆಯುವ ಕುರುಬರ ದೊಡ್ಡ ದ್ಯಾವರ ಭಾನುವಾರ ಅತ್ಯಂತ ವೈಭವದಿಂದ ನಡೆದಿದ್ದು, ೫೦ ಸಾವಿರಕ್ಕೂ ಹೆಚ್ಚು ಮಂದಿ ಸಾಕ್ಷಿಯಾದರು.
ಏಳು ವರ್ಷಗಳಿಗೊಮ್ಮೆ ನಡೆಯುವ ಈ ದ್ಯಾವರದಲ್ಲಿ ಕುರುಬ ಸಮುದಾಯದ ಕೋಲಾರ,ಬೆಂಗಳೂರು,ತುಮಕೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಸಹಸ್ರಾರು ಮಂದಿ ಪಾಲ್ಗೊಂಡಿದ್ದು, ಈ ಸಂದರ್ಭದಲ್ಲಿ ಜಾನಪದ ಕಲಾತಂಡಗಳೊಂದಿಗೆ ಸಾಗಿದ ಭವ್ಯ ಮೆರವಣಿಗೆಗೆ ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ಕುಮಾರ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ಕುಮಾರ್, ಸಮುದಾಯದ ಸಂಘಟನೆಯ ಶಕ್ತಿ ಇಂತಹ ಕಾರ್ಯಕ್ರಮಗಳಲ್ಲಿ ಕಂಡು ಬರುತ್ತದೆ, ಪರಸ್ಪರ ಸೌಹಾರ್ದತೆ,ಶಾಂತಿ ನೆಲಸಲು ಇಂತಹ ಧಾರ್ಮಿಕ ಕಾರ್ಯಕ್ರಮಗಳ ಅಗತ್ಯವಿದೆ ಎಂದ ಅವರು, ಕುರುಬ ಸಮುದಾಯದ ಸಂಪ್ರದಾಯ ಶ್ಲಾಘನೀಯವಾದುದು ಎಂದರು.
ಇತ್ತೀಚಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳು ಮರೆಯಾಗಿ ಪರಸ್ಪರ ಸಂಬಂಧಗಳಿಗೆ ಬೆಲೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ, ಇಂತಹ ಸಂದರ್ಭದಲ್ಲಿ ಇಡೀ ಸಮುದಾಯದಲ್ಲಿ ಸಂಬಂಧಿಕರು ಎಲ್ಲೆ ವಾಸವಾಗಿದ್ದರೂ ಒಂದೆಡೆ ಸೇರುವ ಮನಸ್ಥಿತಿಯನ್ನು ಈ ಕಾರ್ಯಕ್ರಮ ನಿರ್ಮಾಣ ಮಾಡಿದ್ದು, ಕಾರ್ಯಕ್ರಮಕ್ಕೆ ಶುಭವಾಗಲಿ ಎಂದು ಹಾರೈಸಿದರು.
ಶ್ರೀನಿವಾಸಪುರ ತಾಲ್ಲೂಕಿನ ಕೆ. ಕುರುಪ್ಪಲ್ಲಿಯ ಬೀರೇಶ್ವರ, ಭತ್ತೇಶ್ವರ, ಸಿದ್ದೇಶ್ವರ, ಜತೆಗೆ ಕಾಡಿನ ನಡುವೆ ನೆಲೆಯೂರಿರುವ ೪೦೦ ವರ್ಷಗಳ ಪುರಾತನವಾದ ಕನಿಕಲಮ್ಮ ದೇವಿಯ ದೇವಾಲಯ ಭಕ್ತರ ಇಷ್ಟಾರ್ಥ ಸಿದ್ದಿಸುವ ಪವಿತ್ರ ಕ್ಷೇತ್ರ ಎಂಬ ನಂಬಿಕೆ ಕುರುಬ ಸಮುದಾಯದಲ್ಲಿದೆ ಎಂದರು.
ದೇವಾಲಯ ಸಮಿತಿ ಅಧ್ಯಕ್ಷ ಹಾಗೂ ನಿವೃತ್ತ ಪೋಸ್ಟ್ ಮಾಸ್ಟರ್ ವಿ.ಶ್ರೀರಾಮಪ್ಪ,ಶ್ರೀಮತಿ ವಿಜಯ ಕುಟುಂಬದವರ ನೇತೃತ್ವದಲ್ಲಿ ನಡೆಯುವ ಈ ಪ್ರತಿಷ್ಟಿತ ದ್ಯಾವರ ಕುರುಬ ಸಮುದಾಯದ ಪ್ರತಿಷ್ಟಿತ ಕೆ.ಕುರುಪ್ಪಲ್ಲಿಯ ದೇವ ವೃಕ್ಷಗಳ ವನದಲ್ಲಿ ಕಳೆದ ಮೂರುದಿನಗಳಿಂದ ನಡೆಯುತ್ತಿದ್ದು, ಇಂದು ಮುಖ್ಯ ಕಾರ್ಯಕ್ರಮ ಸಂಪನ್ನಗೊಂಡಿತು.
ಸುಮಾರು ೪೦ ಎಕರೆ ಪ್ರದೇಶದಲ್ಲಿ ಸಮುದಾಯದ ಸಾವಿರಾರು ಕುಟುಂಬಗಳು ಟೆಂಟ್ಗಳನ್ನು ನಿರ್ಮಿಸಿ ಮೂರು ದಿನಗಳ ಕಾಲ ಅಲ್ಲೇ ನೆಲಸಿದ್ದು, ಆಲಯ ಶುದ್ದಿ, ಸಮಾವೇಶ, ಮೂಲದೇವರಿಗೆ ಪೂಜೆ, ಪುಣ್ಯಾಹದೊಂದಿಗೆ ದ್ಯಾವರ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನಡೆಯಿತು.
ವಿನೋದ ಚಕ್ಕಲ ಭಜನೆ, ಪಿಳ್ಳಂಗೋವಿ ನೃತ್ಯ,ಗೊರವ ಕುಣಿತ, ಕಾಲಾಟಗಾರರ ನೃತ್ಯ, ಕೀಲುಗೊಂಬೆ, ಕೀಲುಕುದುರೆ ಸಹಿತ ಹೂವಿನ ಪಲ್ಲಕ್ಕಿಗಳ ಮೆರವಣಿಗೆ ಕೆ.ಕುರುಪ್ಪಲ್ಲಿಯ ಬೀದಿಗಳಲ್ಲಿ ಸಾಗಿ ಬಂದಿದ್ದು, ಜಾನಪದ ಕಲಾತಂಡಗಳು ಇಡೀ ಕಾರ್ಯಕ್ರಮಕ್ಕೆ ಮೆರಗು ನೀಡಿತು.
ರಾತ್ರಿ ೯ ಗಂಟೆಗೆ ಕಿತ್ತೂರುರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಎಂ.ನಿಶ್ಚಲರಿಂದ ಭರತನಾಟ್ಯ ಪ್ರದರ್ಶನ,ಶಬರಿ ತಂಡದಿಂದ ಇಡೀ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕುರುಬ ಬಾಂಧವರು ಭಾಗವಹಿಸಿದ್ದರು.
ವೇದಪಾರಾಯಣ, ಮೂಲದೇವರುಗಳಿಗೆ ಅಭಿಷೇಕ, ರುದ್ರಾಭಿಷೇಕ, ನಾಗರದೇವರಿಗೆ ತನಿ ಎರೆಯುವ ಕಾರ್ಯ, ಬಸವನ ಪಾದಪೂಜೆ ನಡೆಯಿತು.
ಇದೇ ಸಂದರ್ಭದಲ್ಲಿ ಭಾನುವಾರ ಮಧ್ಯಾಹ್ನ ನಡೆದ ಉತ್ಸವಮೂರ್ತಿಗಳ ಭವ್ಯ ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಪಾಲ್ಗೊಂಡಿದ್ದು, ಮಾರ್ಗದುದ್ದಕ್ಕೂ ನೇರಮುಡಿ ಸೇವೆಯೊಂದಿಗೆ ಶಿವಪೂಜೆ, ಗಂಗಾಪೂಜೆ, ಬಸವನ ತಲೆ ಮೇಲೆ ಹಾಗೂ ಕುರುಬರ ಅತಿ ಪ್ರತಿಷ್ಟಿತ ಕಾರ್ಯಕ್ರಮವಾದ ವೀರಕುಮಾರ್ ತಲೆ ಮೇಲೆ ತೆಂಗಿನ ಕಾಯಿ ಹೊಡೆಯುವ ಪವಾಡ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಶ್ರೀರಾಮಪ್ಪ, ಕುರುಬರ ಸಂಘದ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ, ಕೈಲಾಸ್ಸ್ಟೋರ್ಸ್ನ ಕೈಲಾಷ್, ಮುಖಂಡರಾದ ಅಂಚೆ ಅಶ್ವಥ್, ಗೋಪಾಲಪ್ಪ, ಕೆಎಸ್ಆರ್ಟಿಸಿ ರಾಜಣ್ಣ, ಅಂಚೆ ವಿಜಯ್, ಮಂಜುನಾಥ್, ಯಶವಂತ್, ವಿಶ್ವನಾಥ್, ಪ್ರಭಾಕರ್, ಚಂದ್ರಪ್ಪ, ಜಯಂತಿ, ಸರೋಜ, ಸರಸ್ವತಿ,ಗಾಯತ್ರಿ, ಶೈಲಜ, ಲೇಖನಾ ಮತ್ತಿತರರು ಹಾಜರಿದ್ದರು.





















