Home ಜಿಲ್ಲೆ ಬೆಂಗಳೂರು ಸರ್‍ಎಮ್‍ವಿ ಸ್ಮರಣಾರ್ಥ ನಡಿಗೆಗೆ ಚಾಲನೆ

ಸರ್‍ಎಮ್‍ವಿ ಸ್ಮರಣಾರ್ಥ ನಡಿಗೆಗೆ ಚಾಲನೆ

ಬೆಂಗಳೂರು, ಏ.12: ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ ಸ್ಮರಣಾರ್ಥ ಇಂಜಿನಿಯರ್‍ಗಳು, ಆರೋಗ್ಯ ಸಿಬ್ಬಂದಿ ಹಾಗೂ ತಂತ್ರಜ್ಞರಿಗಾಗಿ ಆಯೋಜಿಸಲಾದ ಮೂರು ಕಿಲೋಮೀಟರ್ ನಡಿಗೆಗೆ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾದ ಎಸ್ ಇ ಸುಧೀಂದ್ರ ಅವರು ಇಂದು ಚಾಲನೆ ನೀಡಿದರು.


ನಗರದ ಹೊಸಕೆರೆಹಳ್ಳಿಯ ಮುತ್ತುರಾಜ್ ಅಂಡರ್‍ಪಾಸ್‍ನ 100 ಅಡಿ ರಸ್ತೆಯಿಂದ ಆರಂಭವಾದ ನಡಿಗೆಯಲ್ಲಿ ಅವರು ಸ್ವತಃ ಭಾಗವಹಿಸಿ ಸಾವಿರಾರು ವಿದ್ಯಾರ್ಥಿಗಳು, ಯುವಕರು, ಇಂಜಿನಿಯರ್‍ಗಳು ಹಾಗೂ ಸಾರ್ವಜನಿಕರಿಗೆ ಸ್ಪೂರ್ತಿಯಾದರು.
ಈ ವೇಳೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಅವರ ಆಡಳಿತದಲ್ಲಿ ತಂತ್ರಜ್ಞಾನ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.


ಸೇವಾ ಕ್ಷೇತ್ರದಲ್ಲಿ ತೊಡಗಿರುವ ತಂತ್ರಜ್ಞರ ಮೇಲೆ ಸರ್ಕಾರ ಅಪಾರ ವಿಶ್ವಾಸ ಹೊಂದಿದ್ದು, ಮುಂದಿನ ದಿನಗಳಲ್ಲಿ ಈ ಕ್ಷೇತ್ರವು ಸಾರ್ವಜನಿಕ ಜೀವನದಲ್ಲಿ ಮಹತ್ತರ ಬದಲಾವಣೆ ತರಲಿದೆ ಎಂದು ಹೇಳಿದರು.
ಪದ್ಮನಾಭನಗರ ಕ್ಷೇತ್ರದ ಸಾರ್ವಜನಿಕರ ಅಹವಾಲುಗಳಿಗೆ ಸರ್ಕಾರ ಸದಾ ಸ್ಪಂದಿಸುತ್ತಿದ್ದು, ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ ಚೈತ್ರ ವಿ ಕುಮಾರ್ ಮತ್ತು ಗಿರೀಶ್ ಕುಮಾರ್ ದಂಪತಿಗಳ ಕಾರ್ಯವನ್ನು ಶ್ಲಾಘಿಸಿದರು.


ನಡಿಗೆ ಅಯೋಧ್ಯ ಹೋಟೆಲ್, ಇಟ್ಮಡು ಜಂಕ್ಷನ್, ದೇವೇಗೌಡ ಪೆಟ್ರೋಲ್ ಬಂಕ್ ಸರ್ವಿಸ್ ರೋಡ್ ಮೂಲಕ ಫೈರ್ ಸ್ಟೇಷನ್ ಬಳಿ ಮುಕ್ತಾಯವಾಯಿತು. ವಿಜೇತರಾದ ಮೊದಲ ಮೂರು ಸ್ಥಾನಗಳಿಗೆ ಬಹುಮಾನಗಳನ್ನು ವಿತರಿಸಲಾಗಿದ್ದು, ಎಲ್ಲ ಭಾಗವಹಿಸಿದವರಿಗೆ ಪ್ರಮಾಣಪತ್ರಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ರಾಜ್ಯಸಭಾ ಸದಸ್ಯ ರಾಜೀವ್ ಗೌಡ, ಶಿವರಾಮೇಗೌಡ, ಸಂಜಯ್ ಗೌಡ, ಧರ್ಮೇಂದ್ರ, ಒಕ್ಕಲಿಗ ಸಂಘದ ಅಧ್ಯಕ್ಷ ಎಲ್ ಶ್ರೀನಿವಾಸ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.