Home ಮುಖಪುಟ ಸುದ್ದಿ ಕೈ ಯುವ ನಾಯಕ ಫೈರೋಜ್ ಹತ್ಯೆ: ಹಂತಕರಿಗೆ ಶೋಧ

ಕೈ ಯುವ ನಾಯಕ ಫೈರೋಜ್ ಹತ್ಯೆ: ಹಂತಕರಿಗೆ ಶೋಧ

ಧಾರವಾಡ,ಏ.೧೧-ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ ಅವರನ್ನು ಕೊಲೆಗೈದು ಪರಾರಿಯಾಗಿರುವ ದುಷ್ಕರ್ಮಿಗಳ ಬಂಧನಕ್ಕೆ ಅವಳಿನಗರ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.


ನಗರದ ಹಾಶ್ಮಿನಗರದಲ್ಲಿನ ಮನೆಯಲ್ಲಿ ಫೈರೋಜ್ ಪಠಾಣ್ ಅವರನ್ನು ಕೊಲೆಗೈದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.


ಇದೊಂದು ರಾಜಕೀಯ ಪ್ರೇರಿತವಾದ ಹತ್ಯೆ ಎಂದು ಫೈರೋಜ್ ಮನೆಯವರು ಆರೋಪಿಸಿದ್ದಾರೆ. ಮೃತ ಫೈರೋಜ್ ರಾಜಕೀಯವಾಗಿ ಬೆಳೆದಿದ್ದರು. ಇದೇ ತಿಂಗಳು ೨೪ ರಂದು ಮದುವೆ ಸಹ ನಿಶ್ಚಯವಾಗಿತ್ತು. ಫೈರೋಜ್ ಪಠಾಣ್ ಮದುವೆಯ ತಯಾರಿಯಲ್ಲಿ ಬ್ಯುಸಿಯಾಗಿದ್ದರು.


ಫೈರೋಜ್ ಮನೆಗೆ ತೆರಳಿ ರೂಮ್‌ನ ಬಾಗಿಲು ಹಾಕಿಕೊಂಡಿದ್ದರೂ ಸಹ ಬಾಗಿಲು ಮುರಿದು ನಾಲ್ಕು ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಕೊಲೆ ಮಾಡಿದ್ದಾರೆ. ಸ್ಥಳೀಯ ವ್ಯಕ್ತಿಗಳೇ ಹತ್ಯೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.


ಸ್ಥಳದಲ್ಲಿ ನಡೆದ ಘಟನೆಯ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಇದನ್ನು ಆಧರಿಸಿ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಸದ್ಯ ಸ್ಥಳಕ್ಕೆ ಹು-ಧಾ ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಬಳಿಕ ಮಾತನಾಡಿದ ಕಮೀಷನರ್ ‘ಫೈರೋಜ್ ಪಠಾಣ್ ಅವರು ಮನೆಯಲ್ಲಿದ್ದ ಸಂದರ್ಭದಲ್ಲಿ ೯:೩೦ ರಿಂದ ೧೦ ಗಂಟೆ ನಡುವೆ ಮೂರರಿಂದ ನಾಲ್ಕು ಜನ ಬಂದು ಹಲ್ಲೆ ಮಾಡಿದ್ದಾರೆ. ಹೀಗಾಗಿ, ತೀವ್ರ ರಕ್ತಸ್ರಾವ ಆಗಿ ಮೃತಪಟ್ಟಿದ್ದಾರೆ.


ಯಾವ ಕಾರಣಕ್ಕೆ ಮಾಡಿದ್ದಾರೆ ಹಾಗೂ ಯಾರು ಮಾಡಿದ್ದಾರೆ ಎಂಬುದನ್ನು ನೋಡಿರುವ ಪ್ರತ್ಯಕ್ಷದರ್ಶಿಗಳು ಹಾಗೂ ಅವರ ಕುಟುಂಬ ಸದಸ್ಯರು ಇದ್ದಾರೆ. ಆರೋಪಿಗಳು ಯಾರು ಎಂಬ ಸುಳಿವು ಸಿಕ್ಕಿರುವ ಹಿನ್ನೆಲೆ ನಮ್ಮ ಸಿಬ್ಬಂದಿ ಆ ಸಂಬಂಧ ಕಾರ್ಯೋನ್ಮುಖರಾಗಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುತ್ತೇವೆ ಮತ್ತು ಕೊಲೆಗೆ ಕಾರಣ ಏನೆಂಬುದನ್ನು ಬಾಯಿ ಬಿಡಿಸುತ್ತೇವೆ ಎಂದು ತಿಳಿಸಿದರು.


ಈ ಕುರಿತು ಮೃತನ ತಾಯಿ ಮಾತನಾಡಿದ್ದು, ‘ಮಗ ಮನೆಯ ಹೊರಗಡೆ ಇದ್ದ. ನಾಲ್ಕೈದು ಹುಡುಗರು ಬಂದಿದ್ದರು. ಮಗನ ಪಕ್ಕದಲ್ಲಿದ್ದವನು ಅವನಿಗೆ ಚಾಕುವಿನಿಂದ ಚುಚ್ಚಿದ. ಆಗ ನನ್ನ ಮಗ ಮನೆಯೊಳಗೆ ಓಡಿ ಹೋಗಿ ಬಾಗಿಲು ಹಾಕಿಕೊಂಡ. ಆ ಬಾಗಿಲನ್ನು ಮುರಿದು ಅವನಿಗೆ ಹೊಡೆದಿದ್ದಾರೆ. ಹಲ್ಲೆ ನಡೆಸಿದವರು ಅವನ ಸ್ನೇಹಿತರೇ ಆಗಿದ್ದು, ನಮಗೂ ಹೊಡೆದರು ಎಂದು ಹೇಳಿದ್ದಾರೆ.