
ದಾವಣಗೆರೆ,ಏ. ೫- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅನ್ನರಾಮಯ್ಯ ಅಲ್ಲ. ಅವರೊಬ್ಬ ಡೋಂಗಿ ರಾಜಕಾರಣಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ವ್ಯಂಗ್ಯವಾಡಿದರು.
ಇಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟ ಅಕ್ಕಿ ಬಿಟ್ಟು ಬೇರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಏನೂ ಕೊಟ್ಟಿಲ್ಲ. ಅವರು ಕನ್ನ ರಾಮಯ್ಯ. ಎಲ್ಲಕ್ಕೂ ಕನ್ನ ಹಾಕ್ತ ಇದ್ದಾರೆ. ದಲಿತರ ಹಣವನ್ನೂ ಅವರು ಕೊಳ್ಳೆ ಹೊಡೆದರು. ಸಿದ್ದರಾಮಯ್ಯ ಹೇಳುವುದೊಂದು ಮಾಡುವುದೊಂದು. ಒಂದು ಒಂದು ಕಡೆ ಘೋಷಣೆ, ಮತ್ತೊಂದು ಕಡೆ ಶೋಷಣೆ ಅವರ ನೀತಿ. ಅವರ ಈ ಡಬಲ್ ಸ್ಟ್ಯಾಂಡರ್ಡ್‌ನಿಂದಾಗಿಯೇ ಜನ ತಿರಸ್ಕರಿಸಿದರು ಎಂದರು.
ದಲಿತರಿಗೆ ೪೨ ಸಾವಿರ ಕೋಟ ಇಟ್ಟಿದ್ದೇನೆ ಅಂತ ಹೇಳಿದರು. ಅದರ ಹಣವನ್ನು ಗ್ಯಾರಂಟಿಗಳಿಗೆ ಬಳಸಿದರು. ಎಲ್ಲಾ ಕಡೆ ಸುಳ್ಳು ಹೇಳಿದರು. ಇಷ್ಟೊಂದು ಹಣ ದಲಿತರಿಗೆ ಕೊಡ್ತಾರ ಅಂತ ಜನ ಅಂದುಕೊಂಡಿದ್ದರು. ಆದರೆ ಅವರ ಹಣ ಬೇರೆ ಕಡೆ ಬಳಸಿ ದಲಿತರಿಗೆ ಮೋಸ ಮಾಡಿದರು ಎಂದು ಹೇಳಿದರು. ೫೬ ಸಾವಿರ ಖಾಲಿ ಹುದ್ದೆ ತುಂಬುತ್ತೇನೆ ಅಂತ ಸಿದ್ದರಾಮಯ್ಯ ಹೇಳಿದರು. ಆದರೆ ರಾಜ್ಯದಲ್ಲಿ ನಾಲ್ಕು ಲಕ್ಷ ಹುದ್ದೆ ಖಾಲಿ ಇವೆ. ಅವರನ್ನು ಯಾಕೆ ತುಂಬಿಲ್ಲ. ಅದಕ್ಕೆ ಯಾರ ಅನುಮತಿ ಬೇಕು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿ ಅವರ ಅನುಮತಿ ಬೇಕೇ ಎಂದು ಪ್ರಶ್ನಿಸಿದರು.
ಬಾಗಲಕೋಟೆಯಲ್ಲಿ ರಸ್ತೆಗಳಿಗೆ ಕೆಂಪುಮಣ್ಣು ಹಾಕಿ ಮುಚ್ಚಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನೂ ಜನರು ಕೆಂಪು ಮಣ್ಣು ಹಾಕಿ ಮುಚ್ಚುತ್ತಾರೆ. ರಾಜ್ಯದ ಜನ ಕಾಂಗ್ರೆಸ್ ಆಡಳಿತದಿಂದ ಕೋಪಗೊಂಡಿದ್ದಾರೆ. ಈ ಬಾರಿಯ ಎರಡು ಸೀಟು ಮಾತ್ರವಲ್ಲ ಮುಂದಿನ ಬಾರಿಯ ಚುನಾವಣೆಯಲ್ಲೂ ಕಾಂಗ್ರೆಸ್ ಸ್ಥಿತಿ ಗಂಭೀರವಾಗುತ್ತೆ ಅನ್ನೋದು ಸಿದ್ದರಾಮಯ್ಯ ಅವರಿಗೆ ಮನದಟ್ಟಾಗಿದೆ. ಯಾಕೆಂದರೆ ಸರ್ಕಾರ ಕೆಟ್ಟ ಸ್ಥಿತಿಯಲ್ಲಿದೆ. ಫಲಿತಾಂಶ ಏನೇ ಬರಬಹುದು. ಆದರೆ ಸಿಎಂ ಮಾತ್ರ ಊಟ ತಿಂಡಿ ಬಿಟ್ಟಿದ್ದಾರೆ. ರಾಜ್ಯದಲ್ಲಿ ನಾವು ನಡೆದುಕೊಂಡ ರೀತಿ ಸರಿಯಾಗಿಲ್ಲ ಅಂತ ಅವರಿಗೆ ಮನದಟ್ಟಾಗಿದೆ ಎಂದರು.
ಸಿದ್ದರಾಮಯ್ಯ ಅವರು ಹಳ್ಳಿಗೆ ಹೋಗುವ ಮೊದಲು ದೇವಸ್ಥಾನದ ಮುಂದೆ ಒತ್ತಾಯದ ಮೇರೆ ಜನ ಸೇರಿಸಿ ಭಾಷಣ ಮಾಡೋದು. ಹಳ್ಳಿಗೆ ಹತ್ತು ಲಕ್ಷ ಹಣ ಕೊಡೋದು ಇದೇ ಇವರ ಕೆಲಸ ಎಂದು ನುಡಿದರು. ಒಳ ಮೀಸಲಾತಿಯನ್ನು ಹಾಳು ಮಾಡಿ ಎಲ್ಲಾ ಪರಿಶಿಷ್ಟ ಜಾತಿಯವರನ್ನು ಬೀದಿಯಲ್ಲಿ ನಿಲ್ಲಿಸಿರುವ ದಲಿತರು ಯಾಕೆ ಕಾಂಗ್ರೆಸ್‌ಗೆ ಓಟು ಹಾಕಬೇಕು. ಅವರ ಬಳಿ ಓಟು ಕೇಳುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ. ಬಸವರಾಜ ಬೊಮ್ಮಾಯಿ ಅವರು, ಎಸ್‌ಟಿ ಮತ್ತು ಎಸ್‌ಸಿಗಳಿಗೆ ಸೂಕ್ತ ಮೀಸಲಾತಿ ಹೆಚ್ಚಿಸಿದ್ದರು. ಅದನ್ನೂ ಸರಿಯಾಗಿ ಈಗಿನ ಕಾಂಗ್ರೆಸ್ ಸರ್ಕಾರ ಪಾಲಿಸಲಿಲ್ಲ. ನ್ಯಾಯಾಲಯಕ್ಕೆ ಹೇಳಲು ಇವರಿಗೆ ಬುದ್ಧಿ ಇಲ್ಲ. ಪರಿಶಿಷ್ಟ ವರ್ಗಕ್ಕೆ ಜಾತಿ ಆಧಾರಿತವಾಗಿ ಮೀಸಲಾತಿ ಕೊಡಬೇಕು ಎಂಬುದು ಇದೆ. ಈ ಬಗ್ಗೆ ಪರಿಜ್ಞಾನವೇ ಕಾಂಗ್ರೆಸ್‌ಗೆ ಇಲ್ಲ ಎಂದರು.
ಈ ಕ್ಷೇತ್ರದಲ್ಲಿ ಮುಸ್ಲಿಮರ ಸ್ಥಿತಿ ಕೇಳುವಂತೆಯೇ ಇಲ್ಲ. ಇಲ್ಲಿ ಅವರು ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ನಂಬಿದ್ದರು. ಬಿಜೆಪಿ ಬಂದರೆ ಹಾಗೆ ಮಾಡ್ತಾರೆ ಹೀಗೆ ಮಾಡ್ತಾರೆ ಅಂತ ಕಾಂಗ್ರೆಸ್‌ನವರು ಸುಳ್ಳು ಹೇಳಿದ್ದರು. ಕಳೆದ ೧೨ ವರ್ಷದಿಂದ ನರೇಂದ್ರ ಮೋದಿ ಅವರು ದೇಶದಲ್ಲಿ ಆಡಳಿತ ನಡೆಸುತ್ತಾ ಇದ್ದಾರೆ. ಸಂವಿಧಾನ ಎಲ್ಲರಿಗೂ ಒಂದೇ. ಸಮಾನ ಹಕ್ಕು ಕರ್ತವ್ಯ ನೀಡಿದೆ. ಬಿಜೆಪಿ ಸರ್ಕಾರ ಯಾರಿಗೂ ಅನ್ಯಾಯ ಮಾಡಲ್ಲ. ದಲಿತರನ್ನು ಕೂಡಿಸುವ, ಶಕ್ತಿ ತುಂಬಿಸುವ ಕೆಲಸವನ್ನು ಬಿಜೆಪಿ ಮಾಡಿದೆ. ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಿದೆ ಎಂದರು.























