Home ಜಿಲ್ಲೆ ಬೆಂಗಳೂರು ಜನಗಣತಿಗೆ ಕಟ್ಟುನಿಟ್ಟಿನ ಸೂಚನೆ: ಗೈರು ಹಾಜರಾತಿಗೆ ಕಠಿಣ ಕ್ರಮ

ಜನಗಣತಿಗೆ ಕಟ್ಟುನಿಟ್ಟಿನ ಸೂಚನೆ: ಗೈರು ಹಾಜರಾತಿಗೆ ಕಠಿಣ ಕ್ರಮ

ಬೆಂಗಳೂರು, ಏ. ೫- ರಾಷ್ಟ್ರೀಯ ಜನಗಣತಿ-೨೦೨೭ ಕಾರ್ಯವನ್ನು ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಒಗ್ಗಟ್ಟಿನಿಂದ, ತಂಡದ ಮನೋಭಾವದಿಂದ ನಿರ್ವಹಿಸಬೇಕು ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ಸೂಚಿಸಿದರು.


ಎಂ.ಜಿ. ರಸ್ತೆಯ ಪಿ.ಯು.ಬಿ. ಕಟ್ಟಡದ ಕೆನೋಪಿ ಹಾಲ್‌ನಲ್ಲಿ ಜನಗಣತಿ ಕಾರ್ಯಕ್ಕೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದೇ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.


ಜನಗಣತಿ ಕಾರ್ಯಕ್ಕೆ ನೇಮಿಸಲಾದ ಸಿಬ್ಬಂದಿಗೆ ತರಬೇತಿ ನೀಡಲು ನಗರದ ೬ ವಿಧಾನಸಭಾ ಕ್ಷೇತ್ರಗಳಲ್ಲಿ ತರಬೇತಿ ಕೇಂದ್ರಗಳನ್ನು ಗುರುತಿಸಲಾಗಿದೆ. ಪ್ರತಿ ಕೇಂದ್ರಕ್ಕೆ ಕಂದಾಯಾಧಿಕಾರಿ ನೇತೃತ್ವದಲ್ಲಿ ೧೦ ಸದಸ್ಯರ ತಂಡವನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.


ತರಬೇತಿ ಕೇಂದ್ರಗಳು:
ಸಿ.ವಿ. ರಾಮನ್ ನಗರ, ಶಿವಾಜಿನಗರ, ಶಾಂತಿನಗರ, ಗಾಂಧಿನಗರ, ಚಾಮರಾಜಪೇಟೆ, ಚಿಕ್ಕಪೇಟೆ.


ಏಪ್ರಿಲ್ ೬ರಿಂದ ತರಬೇತಿ:
ಏಪ್ರಿಲ್ ೬ರಿಂದ ೮ರವರೆಗೆ ಮೂರು ದಿನಗಳ ಕಾಲ ತರಬೇತಿ ನಡೆಯಲಿದ್ದು, ಎಲ್ಲ ಗಣತಿದಾರರು ಕಡ್ಡಾಯವಾಗಿ ಹಾಜರಾಗಬೇಕು ಎಂದು ಸೂಚಿಸಲಾಗಿದೆ.
ನಗರದಲ್ಲಿ ಮನೆಪಟ್ಟಿ ಹಾಗೂ ವಸತಿ ಗಣತಿ ಕಾರ್ಯ ಏಪ್ರಿಲ್ ೧೬ರಿಂದ ಮೇ ೧೫ರವರೆಗೆ ನಡೆಯಲಿದೆ. ಈ ಕಾರ್ಯಕ್ಕಾಗಿ ಗಣತಿದಾರರು ಮತ್ತು ಮೇಲ್ವಿಚಾರಕರನ್ನು ಈಗಾಗಲೇ ನೇಮಕ ಮಾಡಲಾಗಿದೆ.


ಗೈರು ಹಾಜರಾತಿಗೆ ಕಠಿಣ ಕ್ರಮ:
ತರಬೇತಿ ಮತ್ತು ಗಣತಿ ಕಾರ್ಯಕ್ಕೆ ಗೈರು ಹಾಜರಾಗುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಜನಗಣತಿ ಕಾಯ್ದೆ, ೧೯೪೮ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ ೨೦೨೩ ಅಡಿಯಲ್ಲಿ FIR ದಾಖಲೆ.
ಅಮಾನತ್ತು ಹಾಗೂ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.


ಗೈರು ಹಾಜರಾತಿಯನ್ನು ‘ಡೈಸ್ ನಾನ್’ ಎಂದು ಪರಿಗಣನೆಗೆ ತೆಗೆದುಕೊಂಡು ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.ಇನ್ನೂ
ಸಭೆಯಲ್ಲಿ ಹಿರಿಯ ಅಧಿಕಾರಿಗಳು ಹಾಗೂ ವಿವಿಧ ವಿಭಾಗದ ಸಿಬ್ಬಂದಿ ಹಾಜರಿದ್ದರು.