Home ಜಿಲ್ಲೆ ಮೈಸೂರು ದೃಷ್ಟಿ ವಿಶೇಷಚೇತನ ಮಹಿಳೆಯರಿಗಾಗಿ ಹೆರಿಟೇಜ್ ಕಪ್

ದೃಷ್ಟಿ ವಿಶೇಷಚೇತನ ಮಹಿಳೆಯರಿಗಾಗಿ ಹೆರಿಟೇಜ್ ಕಪ್

ಸಂಜೆವಾಣಿ ನ್ಯೂಸ್
ಮೈಸೂರು:ಏ.05:-
ಮೈಸೂರಿನಲ್ಲಿ ಇಂದು ದೃಷ್ಟಿ ವಿಶೇಷಚೇತನ ಮಹಿಳೆಯರಿಗಾಗಿ ‘ಹೆರಿಟೇಜ್ ಕಪ್-2026’ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಿದ್ದೇವೆ ಎಂದು ಆರ್ ರಕ್ಷಿತಾ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸಾಧನೆಗೆ ದೈಹಿಕ ನ್ಯೂನತೆ ಎಂದಿಗೂ ಅಡ್ಡಿಯಾಗಬಾರದು ಎಂಬ ಆಶಯದೊಂದಿಗೆ, ನಿರಾಮಯ ಫೌಂಡೇಶನ್ ವತಿಯಿಂದ ದೃಷ್ಟಿ ವಿಶೇಷಚೇತನ ಮಹಿಳೆಯರಿಗಾಗಿ ಆಯೋಜಿಸಲಾಗಿರುವ ಬಹುನಿರೀಕ್ಷಿತ ‘ಹೆರಿಟೇಜ್ ಕಪ್’ ಕ್ರಿಕೆಟ್ ಪಂದ್ಯಾವಳಿಯು (ಏಪ್ರಿಲ್ 5, ಭಾನುವಾರ) ನಗರದ ಬನ್ನಿಮಂಟಪದಲ್ಲಿರುವ ಜೆ.ಎಸ್.ಎಸ್ ವೈದ್ಯಕೀಯ ಕಾಲೇಜು ಮೈದಾನದಲ್ಲಿ ಜರುಗಲಿದೆ.


ಸಮಾರಂಭದಲ್ಲಿ ಇನ್ನರ್ ವೀಲ್ ಕ್ಲಬ್ ಮೈಸೂರು, ವಿದ್ಯಾ ವೈ- ಸಹ-ಸಂಸ್ಥಾಪಕ ವಿಷನ್ ಎಂಪವರ್ ಟ್ರಸ್ಟ್ ಬೆಂಗಳೂರು, ಮುರಳಿ ಶ್ರೀನಿವಾಸಯ್ಯ ಅಧ್ಯಕ್ಷರು – ಗೋಪಯ್ಯ, ಮೈಸೂರು, ಹವಾಯ್ ಸ್ಟೀಲ್, ಡೆಕಾಫ್ಲಾನ್ ಮೈಸೂರು ಅವರು ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ವಿಶೇಷ ಅತಿಥಿಗಳಾಗಿ ಸುನಿತಾ ಎನ್ ದೊಡ್ಡಪ್ಪನವರ್ ಪಾಲ್ಗೊಳ್ಳಲಿದ್ದಾರೆ
ಮೈಸೂರಿನ ‘ನಿರಾಮಯ’ ತಂಡ ಸೇರಿದಂತೆ, ಬೆಂಗಳೂರಿನ ‘ದೀಪಾ ಅಕಾಡೆಮಿ’ ಮತ್ತು ‘ಸ್ನೇಹದೀಪ’ ಸಂಸ್ಥೆ, ರಂಗರಾವ್ ಸ್ಕೂಲ್ಸ್ ಮೈಸೂರು, ಆಶಾದೀಪ ತಂಡ ಮೈಸೂರು, ತಂಡಗಳು ಈ ಪ್ರತಿಷ್ಠಿತ ಕಪ್‍ಗಾಗಿ ಸೆಣಸಾಡಲಿವೆ.


ದೃಷ್ಟಿ ವಿಶೇಷಚೇತನ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಮತ್ತು ಅವರಲ್ಲಿ ಆತ್ಮಸ್ಥೆರ್ಯದ ಬೆಳಕು ಮೂಡಿಸುವುದು ಈ ಕ್ರೀಡಾಕೂಟದ ಮೂಲ ಉದ್ದೇಶ. ಅನುಕಂಪವಲ್ಲ, ಅವಕಾಶ. ‘ನಮಗೆ ಸಮಾಜದ ಅನುಕಂಪದ ನೋಟಕ್ಕಿಂತ, ಸಾಧನೆ ಮಾಡಲು ಸಮಾನ ಅವಕಾಶಗಳ ಬೆಂಬಲ ಅಗತ್ಯ’ ಎಂಬ ಸಂದೇಶವನ್ನು ಈ ಪಂದ್ಯಾವಳಿ ಸಾರಲಿದೆ.
”ಕತ್ತಲ ಹಾದಿಯಲ್ಲೂ ಬೌಂಡರಿ ಬಾರಿಸುವ ಛಲ ಹೊಂದಿರುವ ಈ ಕ್ರೀಡಾಪಟುಗಳ ಕೌಶಲ್ಯ ಪ್ರದರ್ಶನಕ್ಕೆ ಜೆ.ಎಸ್.ಎಸ್ ವೈದ್ಯಕೀಯ ಕಾಲೇಜು ಮೈದಾನ ಸಾಕ್ಷಿಯಾಗಲಿದೆ. ಇದು ಕೇವಲ ಸೋಲು-ಗೆಲುವಿನಾಟವಲ್ಲ, ಇದು ಮಾನವೀಯತೆ ಮತ್ತು ಕ್ರೀಡಾ ಸ್ಫೂರ್ತಿಯ ಮಹಾನಂಗಮ,” ಎಂದು ತಿಳಿಸಿದರು.


“ವಿಶೇಷಚೇತನ ಕ್ರೀಡಾಪಟುಗಳ ಅಭ್ಯಾಸಕ್ಕಾಗಿ ಮತ್ತು ಅವರ ಕ್ರೀಡಾ ಚಟುವಟಿಕೆಗಳನ್ನು ಪೆÇ?ರೀತ್ಸಾಹಿಸಲು ಸರ್ಕಾರವು ಪ್ರತ್ಯೇಕವಾದ ಆಟದ ಮೈದಾನಗಳನ್ನು ಕಾಯ್ದಿರಿಸಬೇಕು ಅಥವಾ ಈಗಿರುವ ಮೈದಾನಗಳಲ್ಲಿ ಅವರಿಗೆ ವಿಶೇಷ ಆದ್ಯತೆ ನೀಡಬೇಕು. ಈ ಮೂಲಕ ಅವರಲ್ಲಿರುವ ಪ್ರತಿಭೆ ಜಗತ್ತಿಗೆ ಪರಿಚಯವಾಗಲು ಸಾಧ್ಯ,’ ಎಂದು ಒತ್ತಾಯಿಸಿದೆ.
ಈ ವಿಶಿಷ್ಟ ಕ್ರೀಡಾ ಸಂಭ್ರಮಕ್ಕೆ ಮೈಸೂರಿನ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ವಿಶೇಷಚೇತನ ಕ್ರೀಡಾಪಟುಗಳನ್ನು ಹುರಿದುಂಬಿಸಬೇಕೆಂದು ಈ ಮೂಲಕ ವಿನಂತಿಸಲಾಗಿದೆ. ಸಂಜೆ 4:00 ಗಂಟೆಗೆ ವಿಜೇತ ತಂಡಗಳಿಗೆ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ.