Home ಜಿಲ್ಲೆ ಬೆಂಗಳೂರು ಪೂರ್ವಭಾವಿ ಸಭೆಗೆ ಬಾರದ ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ

ಪೂರ್ವಭಾವಿ ಸಭೆಗೆ ಬಾರದ ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ

ರಾಮನಗರ,ಏ.೦೫- ಡಾ. ಬಾಬು ಜಗಜೀವನ್ ರಾಮ್ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ ಸಂಬಂಧ ಕರೆಯಲಾಗಿದ್ದ ಪೂರ್ವಭಾವಿ ಸಭೆಗೆ ಗೈರಾಗುವ ಮೂಲಕ ಜಿಲ್ಲಾಧಿಕಾರಿ ದಲಿತರನ್ನ ಅಪಮಾನಿಸದ್ದಾರೆ ಎಂದು ಪೂರ್ವಭಾವಿ ಸಭೆ ಬಹಿಷ್ಕರಿಸಿದ್ದ ವಿವಿಧ ದಲಿತ ಸಂಘಟನೆಯ ಮುಖಂಡರು ಜಿಲ್ಲಾಡಳಿತವನ್ನ ಹೊರಗಿಟ್ಟು ಪ್ರತ್ಯೇಕವಾಗಿ ಜಯಂತಿ ಆಚರಣೆಗೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದ್ದಾರೆ.


ನಗರದ ಗುರುಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ದಲಿತ ಮುಖಂಡ ಪಟ್ಲು ಗೋವಿಂದರಾಜು, ಪೂರ್ವಭಾವಿ ಸಭೆಗೆ ಜಿಲ್ಲಾಧಿಕಾರಿ ಬಂದು ದಲಿತ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಆದರೆ, ಎಡಿಸಿ ಅವರನ್ನು ಸಭೆಗೆ ಕಳಿಸುವ ಮೂಲಕ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಹಾಗಾಗಿ, ಜಿಲ್ಲಾಡಳಿತ ಕಾರ್ಯಕ್ರಮವನ್ನು ಬಹಿಷ್ಕರಿಸಿ ನಾವೇ ಸ್ವತಃ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.


‘ಕಳೆದ ವರ್ಷವೂ ಜಿಲ್ಲಾಧಿಕಾರಿ ಅವರು ಪೂರ್ವಭಾವಿ ಸಭೆಗೆ ಬಾರದೆ ನಿರ್ಲಕ್ಷ್ಯ ವಹಿಸಿದ್ದರು. ಈ ಸಲವೂ ತಮ್ಮ ವರಸೆ ಮುಂದುವರಿಸಿದ್ದಾರೆ. ಜಿಲ್ಲೆಯಲ್ಲಿ ದಲಿತರ ವಿಷಯಗಳಿಗೆ ಸ್ಪಂದಿಸದ ಜಿಲ್ಲಾಧಿಕಾರಿ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಕೊಟ್ಟಿದ್ದೇವೆ. ಅವರನ್ನು ವರ್ಗಾವಣೆ ಮಾಡುವವರೆಗೆ ಹೋರಾಟ ನಡೆಸುತ್ತೇವೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.


ಉಪ ವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಹರೀಶ್ ಬಾಲು ಮಾತನಾಡಿ, ಜಿಲ್ಲಾಡಳಿತ ತನ್ನ ನಿರ್ಲಕ್ಷ್ಯ ಧೋರಣೆಯನ್ನು ಬದಲಿಸಿಕೊಳ್ಳಬೇಕು. ಏ. ೧೪ರೊಳಗೆ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಅಂಬೇಡ್ಕರ್ ಜಯಂತಿಯಲ್ಲಿ ಪಾಲ್ಗೊಳ್ಳುತ್ತೇವೆ. ಇಲ್ಲದ್ದಿದ್ದರೆ ಅಂಬೇಡ್ಕರ್ ಜಯಂತಿಯನ್ನು ಸಹ ಒಕ್ಕೂಟದಿಂದಲೇ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.


ಮುಖಂಡ ಬಿವಿಎಸ್ ಕುಮಾರ್ ಮಾತನಾಡಿ, ಪೂರ್ಭಾವಿ ಸಭೆಯನ್ನು ಎಡಿಸಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದು ಖಂಡನೀಯ. ಸಭೆಗೆ ಇಲಾಖೆಗಳ ಮುಖ್ಯಸ್ಥರ ಬದಲು ಕೆಳ ಹಂತದ ಅಧಿಕಾರಿಗಳೇ ನೆಪಕ್ಕೆ ಹಾಜರಾಗುತ್ತಿರುವುದು ಅಂಬೇಡ್ಕರ್ ಮತ್ತು ಬಾಬೂಜಿ ಅವರಿಗೆ ಮಾಡಿದ ಅವಮಾನ. ಇದನ್ನು ಸಹಿಸಲು ಸಾಧ್ಯವಿಲ್ಲ. ಇದರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದರು.


ಮುಖಂಡ ಮತ್ತಿಕೆರೆ ಹನುಮಂತಯ್ಯ, ಕಚೇರಿಯಲ್ಲಿದ್ದರೂ ಪೂರ್ವಭಾವಿ ಸಭೆಗೆ ಬಾರದಿರುವುದು ಜಿಲ್ಲಾಧಿಕಾರಿ ಅವರು ಸಮುದಾಯದ ಬಗ್ಗೆ ಹೊಂದಿರುವ ಕಳಕಳಿ ಎಂತಹದ್ದು ಎಂಬುದನ್ನು ತೋರಿಸುತ್ತದೆ. ಜಿಲ್ಲಾಧಿಕಾರಿ ಸಂವಿಧಾನದ ವಿರೋಧಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜನಸಾಮಾನ್ಯರನ್ನು ಕಚೇರಿ ಒಳಗೆ ಸೇರಿಸದೆ ಕಷ್ಟಸುಖ ವಿಚಾರಿಸದೇ ಉದ್ಧಟತನದಿಂದ ವರ್ತಿಸುತ್ತಾರೆ. ಜಿಲ್ಲೆಯ ದಲಿತರಷ್ಟೇ ಅಲ್ಲದೇ ಯಾವುದೇ ಸಮುದಾಯಕ್ಕೂ ಸ್ಪಂದಿಸದ ಜಿಲ್ಲಾಧಿಕಾರಿಯನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವರ್ಗಾವಣೆ ಮಾಡಿಸಬೇಕು ಎಂದು ಒತ್ತಾಯಿಸಿದರು.


ದಲಿತ ಮುಖಂಡರಾದ ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಡಾ. ಲೋಕೇಶ್ ಮೌರ್ಯ, ಸಮತಾ ಸೈನಿಕ ದಳದ ಸುರೇಶ್, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಕೆ.ಶಿವಶಂಕರ್, ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಕಿರಣ್ ಸಾಗರ್, ಮುಖಂಡರಾದ ಶೇಖರ್, ವಿನೋದ್, ಶಿವಶಂಕರ್, ಸರಸ್ವತಿ, ಪೂರ್ಣಿಮಾ ಮತ್ತಿತರರು ಇದ್ದರು.