
ಚಿತ್ತಾಪುರ;ಏ.೫: ಜನ್ಮ ದಿನೋತ್ಸವದಿಂದ ಬಡವರಿಗೆ, ದಿನದಲಿತರಿಗೆ ಹಾಗೂ ಸಮಾಜಕ್ಕೆ ಅನುಕೂಲ ಆದಾಗ ಮಾತ್ರ ಅದಕ್ಕೆ ಅರ್ಥ ಬರಲಿದೆ ಎಂದು ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಹೇಳಿದರು.
ಪಟ್ಟಣದ ಕಂಬಳೇಶ್ವರ ಮಠದ ಕಲ್ಯಾಣ ಮಂಟಪದಲ್ಲಿ ಭಕ್ತ ಸಮೂಹ ಹಮ್ಮಿಕೊಂಡಿದ್ದ ೫೯ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಕೇಕ್ ಕತ್ತರಿಸುವ ಮೂಲಕ ಮಾತನಾಡಿದ ಅವರು, ಜನ್ಮದಿನವನ್ನು ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಆಚರಿಸಿಕೊಂಡಾಗ ಮಾತ್ರ ಅದಕ್ಕೊಂದು ಅರ್ಥ ಬರಲಿದೆ. ಈ ನಿಟ್ಟಿನಲ್ಲಿ ನನ್ನ ಜನ್ಮದಿನದ ನಿಮಿತ್ತ ಭಕ್ತಸಮೂಹ ಉಚಿತ ಕಣ್ಣಿನ ತಪಾಸಣೆ ಚಿಕಿತ್ಸಾ ಶಿಬಿರ ಹಾಗೂ ಕನ್ನಡಕ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು
ಮಠದಿಂದ ಘಟ ಬೆಳೆಯಬಾರದು ಘಟದಿಂದ ಮಠ ಬೆಳೆಯಬೇಕೆಂದು ಹಾನಗಲ್ಲ ಕುಮಾರೇಶ್ವರ ಶ್ರಿವಾಣಿಯಂತೆ, ಶಿಥಿಲವಾಗಿದ್ದ ಕಂಬಳೇಶ್ವರ ಮಠವನ್ನು ಭಕ್ತರ ದೇಣಿಗೆಯಿಂದ ಹಾಗೂ ಸರ್ಕಾರದ ಅನುದಾನದಲ್ಲಿ ಮಠವನ್ನು ಕಟ್ಟಿ ಈ ಹಂತಕ್ಕೆ ತಂದಿದ್ದೇನೆ ಎಂದು ಹೇಳಿದರು.
ಸಂಪತ್ತನ್ನು ಸತ್ಕಾರಕ್ಕೆ ಬಳಸಿದಾಗ ನಿಜವಾದ ತುಲಾಭಾರ ಎಂದು ಹೇಳಿದರು. ಈ ನಿಟ್ಟಿನಲ್ಲಿ ಅನೇಕರು ನಾಣ್ಯಗಳಿಂದ ಹಾಗೂ ಸಿರಿಧಾನ್ಯಗಳ ಮೂಲಕ ನನ್ನನ್ನು ತುಲಾಭಾರ ಮಾಡಿದ್ದಾರೆ. ಜನರ ಹಾಗೂ ಭಕ್ತಾದಿಗಳ ಪ್ರೀತಿ ಅಭಿಮಾನ ಹಾಗೂ ವಿಶ್ವಾಸವನ್ನು ನಾನೂ ಯಾವತ್ತು ಮರೆಯುವುದಿಲ್ಲ ಎಂದರು.
ದಿಗ್ಗಾAವ ಶ್ರೀ ಸಿದ್ದವೀರ ಶಿವಾಚಾರ್ಯರು ಮಾತನಾಡಿ, ಸೋಮಶೇಖರ ಶಿವಾಚಾರ್ಯರು ಕಲ್ಯಾಣ ಕರ್ನಾಟಕದ ಉತ್ತಮ ವಾಗ್ಮಿಗಳು, ವಾಕ್ ಚತುರರು ಎಂದು ಬಣ್ಣಿಸಿದರು.
ಸೇಡಂ ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು, ಬೆನಕನಳ್ಳಿ ಶ್ರೀ ಕೇದರಲಿಂಗಯ್ಯ ಮಹಾಸ್ವಾಮಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ವಿರೇಶ್ ಶಾಸ್ತ್ರಿ ಮಲಕೂಡ ಅವರು ಮಾತನಾಡಿದರು.
ದಿಗ್ಗಾಂವ ಕಂಚಗಾರಹಳ್ಳದ ಶ್ರೀ ಮಲ್ಲಯ್ಯ ಸ್ವಾಮಿ ಸ್ಥಾವರಮಠ, ನದಿಶಿನ್ನೂರು ಶ್ರೀ ಗುರುರಾಜೇಂದ್ರ ಮಹಾಶಿವಯೋಗಿಗಳು, ಯಲ್ಲಮ್ಮ ದೇವಿ ಕರದಾಳ ಅವರು ವೇದಿಕೆಯಲ್ಲಿದ್ದರು.
ಇದೇ ವೆಳೆ ಮಂಜುನಾಥ ಸ್ವಾಮಿ ಅವರ ನೇತೃತ್ವದಲ್ಲಿ ಅನಂತ ದೇಶಪಾಂಡೆ, ಶ್ರೀನಿವಾಸ ಜಗಲಿಮನಿ ಅವರಿಂದ ಸಂಗೀತ ರಸಮಂಜರಿ ಜರುಗಿತು.
ಇದೇ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ಪದವಿ ಪಡೆದ ಮಾಲಗತ್ತಿ ಶ್ರೀ ಚನ್ನಬಸವ ಶರಣರು ಹಾಗೂ ಶಿವಶರಣಯ್ಯ ಪುರದಯ್ಯನಮಠ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಮುಖಂಡರಾದ ನಾಗರೆಡ್ಡಿ ಗೋಪಸೇನ್, ನಾಗರಾಜ ರೇಷ್ಮೆ, ಪ್ರಸಾದ್ ಅವಂಟಿ, ಕರಬಸಯ್ಯ ಶಾಸ್ತ್ರಿ, ಮಂಜುನಾಥ ಶಾಸ್ತ್ರಿ, ವೀರಣ್ಣ ಸುಲ್ತಾನಪೂರ, ಶ್ರೀಕಾಂತ್ ಸುಲೇಗಾಂವ, ಶಂಭು ದಿಗ್ಗಾಂವ, ಶಿವಶರಣಯ್ಯಸ್ವಾಮಿ ಪುರದಯ್ಯನಮಠ, ಶಾಂತಕುಮಾರ್ ಹತ್ತಿ, ರೇವಣಸಿದ್ದಪ್ಪ ರೋಣದ, ಮಲ್ಲಿಕಾರ್ಜುನ ರೆಡ್ಡಿ ಇಜಾರ್, ಮಲ್ಲರೆಡ್ಡಿ ಗೋಪಸೇನ್, ರಮೇಶ್ ಬೊಮ್ಮನಳ್ಳಿ, ರಸೂಲ್ ಮುಸ್ತಫಾ, ನಾಗೇಂದ್ರ ಚಪಟ್ಲಾ, ನರಹರಿ ಕುಲಕರ್ಣಿ, ನೇಹಲ್ ಪಾಟೀಲ, ಸುರೇಶ್ ಗುತ್ತೇದಾರ, ಕರಣಕುಮಾರ ಅಲ್ಲೂರ್, ಪ್ರಭು ಹಲಕರ್ಟಿ, ಮಲ್ಲಿಕಾರ್ಜುನ ಬೆಣ್ಣೂರಕರ್, ಪ್ರಕಾಶ್ ಕಾಶಿ ಸೇರಿದಂತೆ ಇತರರು ಇದ್ದರು. ಚಿನ್ನಾಕಟ್ಟಿ ನಿರೂಪಿಸಿದರು.




















