
ಸಂಜೆ ವಾಣಿ ವಾರ್ತೆ
ಜಮಖಂಡಿ:ಏ.೫: ನಗರದ ದಿ ಜಮಖಂಡಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ವತಿಯಿಂದ ೨೦೨೫ನೇ ಸಾಲಿನಲ್ಲಿ ೪೫ ಹುದ್ದೆಗಳ ನೇಮಕಾತಿ ನಡೆಸಲಾಗಿದೆ. ವಿವಿಧ ಹುದ್ದೆಗಳ ಭರ್ತಿಗೆ ಪ್ರಕಟಣೆ ಹೊರಡಿಸಿ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ
ಆದರೆ ಈ ನೇಮಕಾತಿಯಲ್ಲಿ ವಿಕಲಚೇತನರಿಗೆ ಯಾವುದೇ ಮಿಸಲಾತಿ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ನಗರದ ಖಾಸಗಿ ಲಾಡ್ಜ್ನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಾಮಾಜಿಕ ಕಾರ್ಯಕರ್ತ ಗಿರಮಲ್ಲಪ್ಪ ಕಡಪಟ್ಟಿ ಮಾತನಾಡಿ, ನೇಮಕಾತಿ ಪ್ರಕಟಣೆಯಲ್ಲೇ ವಿಕಲಚೇತನರಿಗೆ ಅವಕಾಶ ನೀಡದೇ ಅನ್ಯಾಯ ಮಾಡಲಾಗಿದೆ ಎಂದು ದೂರಿದರು.
ಈ ಸಂಬAಧ ಸಹಕಾರಿ ಇಲಾಖೆಯ ಅಸಿಸ್ಟೆಂಟ್ ರಿಜಿಸ್ಟ್ರಾರ್ ಹಾಗೂ ಅಂಗವಿಕಲರ ಆಯುಕ್ತರಿಗೆ ದೂರು ಸಲ್ಲಿಸಲಾಗಿದ್ದು, ಬ್ಯಾಂಕ್ ಅಧಿಕಾರಿಗಳು “ಈ ಆದೇಶ ನಮ್ಮ ಬ್ಯಾಂಕ್ಗೆ ಅನ್ವಯಿಸುವುದಿಲ್ಲ” ಎಂದು ಲಿಖಿತ ಉತ್ತರ ನೀಡಿದ್ದಾರೆ ಎಂದು ಹೇಳಿದರು.
ಇನ್ನೂ, ಅಸಿಸ್ಟೆಂಟ್ ರಿಜಿಸ್ಟ್ರಾರ್ ಕಡೆಯಿಂದ “ನ್ಯಾಯ ಬೇಕಿದ್ದರೆ ನ್ಯಾಯಾಲಯವನ್ನು ಸಂಪರ್ಕಿಸಿ” ಎಂಬ ಉತ್ತರ ದೊರೆತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಯವಾದಿ ಶಂಕರ ಲೀಲೆ ಮಾತನಾಡಿ, ಸರ್ಕಾರದ ೨೦೧೨ ಹಾಗೂ ೨೦೧೩ರ ಸುತ್ತೋಲೆಗಳ ಪ್ರಕಾರ ನೇಮಕಾತಿಯಲ್ಲಿ ವಿಕಲಚೇತನರಿಗೆ ಮಿಸಲಾತಿ ನೀಡಬೇಕಾಗಿದೆ. ಆದರೆ ಈ ನಿಯಮಗಳನ್ನು ಉಲ್ಲಂಘಿಸಿರುವ ಶಂಕೆ ಇರುವುದಾಗಿ ಹೇಳಿದರು. ಪ್ರಥಮ ದೃಷ್ಟಿಯಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕೊರತೆಯಿದ್ದು, ಅನುಕೂಲಕರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವ ಅನುಮಾನ ವ್ಯಕ್ತವಾಗಿದೆ ಎಂದರು.
ವಿಕಲಚೇತನ ಅಭ್ಯರ್ಥಿ ಹನುಮಂತ ಕಡ್ಲಿ ಸೇರಿದಂತೆ ಹಲವರು ಈ ನೇಮಕಾತಿಯಲ್ಲಿ ಅವಕಾಶ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ವಿಕಲಚೇತನ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಲು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಲು ತೀರ್ಮಾನಿಸಿರುವುದಾಗಿ ತಿಳಿಸಿದರು.




















