Home ಜಿಲ್ಲೆ ಬೆಂಗಳೂರು ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ

ಆನೇಕಲ್. ಏ. ೦೫- ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ರಾಷ್ಠೀಯ ಯುವ ಪ್ರಶಸ್ತಿ ಪುರಸ್ಕೃತರಾದ ಡಾ || ಚಿನ್ನಪ್ಪ ವೈ. ಚಿಕ್ಕಹಾಗಡೆ ರವರು ತಿಳಿಸಿದರು.


ಅವರು ಮುತ್ತನಲ್ಲೂರು ಗ್ರಾಮದಲ್ಲಿ ನಡೆದ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಸಂತ ನಿರಂಕರಿ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಪರಿಸರ ಸ್ವಚ್ಛತಾ ಆಂದೋಲನದಲ್ಲಿ ಬಾಗವಹಿಸಿ ಮಾತನಾಡಿದರು.


ಜಾತ್ರೆ ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ, ಸ್ವಚ್ಛತೆಯನ್ನು ಕಾಪಾಡುವುದು ಅತ್ಯಂತ ಅಗತ್ಯ. ಸಂತ ನಿರಂಕರಿ ಮಂಡಳಿ ನಡೆಸುತ್ತಿರುವಂತಹ ಸ್ವಚ್ಛತಾ ಆಂದೋಲನಗಳು ಸಮಾಜದಲ್ಲಿ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಯುವಕರು ಇಂತಹ ಸಮಾಜಮುಖಿ ಚಟುವಟಿಕೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿ, ಸ್ವಚ್ಛ ಮತ್ತು ಆರೋಗ್ಯಕರ ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.


ಸಂತ ನಿರಂಕರಿ ಮಂಡಳಿಯ ಮುಖ್ಯಸ್ಥರಾದ ರಾಧಾ ನಾಗರಾಜ ರೆಡ್ಡಿ ಮಾತನಾಡಿ, ನಮ್ಮ ಮಂಡಳಿ ಪರಿಸರ ಸಂರಕ್ಷಣೆ, ಆರೋಗ್ಯ, ಯೋಗ ಹಾಗೂ ವಿವಿಧ ಸಮಾಜಮುಖಿ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಜಾತ್ರಾ ಸಂದರ್ಭದಲ್ಲಿ ಸಂಗ್ರಹವಾಗಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆರವುಗೊಳಿಸುವುದು ಅತ್ಯಂತ ಮುಖ್ಯ. ಈ ನಿಟ್ಟಿನಲ್ಲಿ ನಮ್ಮ ಸ್ವಯಂಸೇವಕರು ಶ್ರಮಪಟ್ಟು ಕಾರ್ಯನಿರ್ವಹಿಸಿದ್ದಾರೆ. ಗ್ರಾಮಸ್ಥರು ಸಹ ಪರಿಸರವನ್ನು ಕಾಪಾಡುವಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿದರು.


ಕಾರ್ಯಕ್ರಮದಲ್ಲಿ ಮುತ್ತನಲ್ಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೆ.ವಿಶ್ವನಾಥ ರೆಡ್ಡಿ. ನಾಗರಾಜ ರೆಡ್ಡಿ, ರಾಜಪ್ಪ ರೆಡ್ಡಿ, ಗಣೇಶ್ ಜಿ, ಸುಜಾತಮ್ಮ, ಸಾವಿತ್ರಮ್ಮ, ಕೆ.ಶ್ರೀನಿವಾಸ ರೆಡ್ಡಿ, ಸುರೇಶ್ ರೆಡ್ಡಿ, ಅಣ್ಣಯ್ಯ ರೆಡ್ಡಿ. ಸಂತ ನಿರಂಕಾರಿ ಮಿಷನ್ ಸೊಸೈಟಿಯ ಮುಖ್ಯಸ್ಥ ಮನೋಹರ ಚಹಾ, ಯೋಗೇಶ್, ಪಿಡಿಒ ಶ್ರೀನಿವಾಸಯ್ಯ, ಬಾಬು ಪ್ರಸಾದ್, ನಾಗರಾಜ ರೆಡ್ಡಿ ಹಾಜರಿದ್ದರು.