
ಬೀದರ್: ಏ.4:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 40ನೇ ಪತ್ರಕರ್ತರ ರಾಜ್ಯ ಸಮ್ಮೇಳನದ ನಿಮಿತ್ತ ಏ. 11 ರಂದು ನಗರದಲ್ಲಿ ಅದ್ಧೂರಿ ಮೆರವಣಿಗೆ ನಡೆಸಲು ಸಮ್ಮೇಳನ ಮೆರವಣಿಗೆ ಸಮಿತಿ ನಿರ್ಧರಿಸಿದೆ.
ನಗರದಲ್ಲಿ ಬುಧವಾರ ನಡೆದ ಸಮ್ಮೇಳನ ಮೆರವಣಿಗೆ ಸಮಿತಿಯ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಯಿತು.
ಅಂದು ಬೆಳಿಗ್ಗೆ ನಗರದ ಬಸವೇಶ್ವರ ವೃತ್ತದಿಂದ ಭಗತಸಿಂಗ್ ವೃತ್ತ, ಅಂಬೇಡ್ಕರ್ ವೃತ್ತ, ಸಿದ್ಧಾರ್ಥ ಕಾಲೇಜು ಮಾರ್ಗವಾಗಿ ಸಮ್ಮೇಳನ ಸ್ಥಳವಾದ ಝೀರಾ ಕನ್ವೆನ್ಶನ್ ಹಾಲ್ವರೆಗೆ ಮೆರವಣಿಗೆ ಜರುಗಲಿದೆ ಎಂದು ಸಮಿತಿಯ ಪ್ರಮುಖರು ತಿಳಿಸಿದರು.
ಮೆರವಣಿಗೆಯಲ್ಲಿ ಅಲಂಕೃತ ರಥದಲ್ಲಿ ಸಮ್ಮೇಳನದ ಲೋಗೋ ಇರಲಿದೆ. ಬೀದರ್ ಸೇರಿ ವಿವಿಧ ಜಿಲ್ಲೆಗಳ ಕಲಾ ತಂಡಗಳು ಮೆರವಣಿಗೆಯ ವೈಭವ ಹೆಚ್ಚಿಸಲಿವೆ ಎಂದು ಹೇಳಿದರು.
ಮೆರವಣಿಗೆ ಮಾರ್ಗದಲ್ಲಿ ಸಂಘ ಸಂಸ್ಥೆಗಳು, ಪುಷ್ಪವೃಷ್ಟಿ ಮಾಡಿ ಮೆರವಣಿಗೆಯನ್ನು ಸ್ವಾಗತಿಸಿ ಬರಮಾಡಿಕೊಳ್ಳಲಿವೆ ಎಂದು ತಿಳಿಸಿದರು.
ಕರ್ನಾಟಕ ಕಾರ್ಯನಿರತ ಪ್ರತಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ದೇವಪ್ಪ, ಜಿಲ್ಲಾ ಅಡಾಕ್ ಸಮಿತಿ ಸದಸ್ಯ ಅಪ್ಪಾರಾವ್ ಸೌದಿ, ಮೆರವಣಿಗೆ ಸಮಿತಿ ಪ್ರಧಾನ ಸಂಚಾಲಕ ಡಾ. ರಜನೀಶ್ ವಾಲಿ, ಸಂಚಾಲಕ ವಿಜಯಕುಮಾರ ಸೋನಾರೆ, ಸಹ ಸಂಚಾಲಕ ನಂದಕುಮಾರ ಕರಂಜೆ, ಸದಸ್ಯ ಸುನೀಲ್ ಭಾವಿಕಟ್ಟಿ ಮತ್ತಿತರರು ಇದ್ದರು.
ವಸತಿ ಸಮಿತಿ ಸಭೆ: ಸಮ್ಮೇಳನದಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧೆಡೆಯಿಂದ ನಗರಕ್ಕೆ ಆಗಮಿಸುವ ಪತ್ರಕರ್ತರಿಗೆ ವಸತಿ ವ್ಯವಸ್ಥೆ ಮಾಡುವ ಕುರಿತು ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ವಸತಿ ಸಮಿತಿ ಸಭೆ ನಡೆಯಿತು.
ಹೊರ ಜಿಲ್ಲೆಗಳ ಪತ್ರಕರ್ತರ ವಾಸ್ತವ್ಯಕ್ಕೆ ನಗರದ ಗುರುದ್ವಾರದ ವಸತಿ ಗೃಹಗಳು ಹಾಗೂ ಖಾಸಗಿ ವಸತಿ ಗೃಹಗಳಲ್ಲಿ ಈಗಾಗಲೇ ವ್ಯವಸ್ಥೆ ಮಾಡಲಾಗಿದೆ ಎಂದು ಸಮಿತಿ ಪ್ರಮುಖರು ಮಾಹಿತಿ ನೀಡಿದರು.
ಸಮ್ಮೇಳನಕ್ಕೆ ಬರುವ ಪತ್ರಕರ್ತರಿಗೆ ವಸತಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ದೇವಪ್ಪ ತಿಳಿಸಿದರು.
ವಸತಿ ಸಮಿತಿಯ ಸಂಚಾಲಕ ಸಂತೋಷ್ ಚೆಟ್ಟಿ, ಸಹ ಸಂಚಾಲಕ ಶ್ರೀಕಾಂತ ಪಾಟೀಲ, ರೇವಣಸಿದ್ದಪ್ಪ ಡಿ, ಪೃಥ್ವಿರಾಜ, ಮಾಣಿಕೇಶ ಪಾಟೀಲ, ಸಂಗಮೇಶ ಮೂಲಗೆ, ರಾಜಕುಮಾರ ಮಡಕಿ, ನಂದಕುಮಾರ ಕರಂಜೆ ಮತ್ತಿತರರು ಇದ್ದರು.

























