
ಬೆಂಗಳೂರು, ಏ. ೪- ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡಿಂಗ್ ನೀಡುವ ಸರ್ಕಾರದ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ರಾಜ್ಯಪಾಲರು ಸರ್ಕಾರಕ್ಕೆ ಬರೆದಿರುವ ಪತ್ರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ವಿರೋಧ ವ್ಯಕ್ತಪಡಿಸಿದ್ದು, ಭಾಷೆಯ ವಿಷಯದಲ್ಲಿ ರಾಜ್ಯಪಾಲರ ಅಧಿಕ ಪ್ರಸಂಗವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಕಿಡಿಕಾರಿದೆ.
ಹಿಂದಿ ಸೇರಿದಂತೆ ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡ್ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ರಾಜ್ಯಪಾಲರು ಸೂಚನೆ ನೀಡಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ರಾಜ್ಯಪಾಲರಿಗೆ ಬಹಿರಂಗ ಪತ್ರವನ್ನು ಪೋಸ್ಟ್ ಮಾಡಿರುವ ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ಅವರು, ಮಾನ್ಯ ರಾಜ್ಯಪಾಲರೇ ಕರ್ನಾಟಕ ಸರ್ಕಾರಕ್ಕೆ ನೀವು ಬರೆದ ಪತ್ರದ ಕುರಿತು ಮಾಧ್ಯಮ ವರದಿಗಳನ್ನು ಗಮನಿಸಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ನೀಡುವ ಸರ್ಕಾರದ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಹೇಳಿದ್ದೀರಿ. ಇದು ಸರಿಯಲ್ಲ. ನಿಮ್ಮ ಈ ಪತ್ರ ಒಕ್ಕೂಟ ವ್ಯವಸ್ಥೆಯನ್ನು ಅಣಕಿಸುವಂತಿದೆ. ನಿಮ್ಮ ಅಧಿಕ ಪ್ರಸಂಗವನ್ನು ಕರ್ನಾಟಕ ಜನತೆ ಒಪ್ಪಿಕೊಳ್ಳುವುದಿಲ್ಲ ಎಂದು ಖಾರವಾಗಿ ಹೇಳಿದ್ದಾರೆ.
ರಾಜ್ಯಪಾಲರು ಸರ್ಕಾರದ ಪದನಿಮಿತ್ತ ಮುಖ್ಯಸ್ಥರು ಎಂಬುದನ್ನು ಮೆರತಿದ್ದೀರಿ. ನೀವು ಜನರಿಂದ ಆಯ್ಕೆಯಾದ ಜನಪ್ರತಿನಿಧಿಯಲ್ಲ. ಒಂದು ಸರ್ಕಾರ ಬಹುಮತದೊಂದಿಗೆ ಸದೃಢವಾಗಿ ಕಾರ್ಯನಿರ್ವಹಿಸುತ್ತಿರುವಾಗ ಸರ್ಕಾರ ದೈನಂದಿನ ಆಡಳಿತದಲ್ಲಿ, ನಿರ್ಧಾರಗಳಲ್ಲಿ ಮೂಗು ತೂರಿಸಲು ನಿಮಗೆ ಯಾವುದೇ ನೈತಿಕ ಅಧಿಕಾರವಿಲ್ಲ ಎಂದು ನಾರಾಯಣಗೌಡ ಟ್ವೀಟ್‌ನಲ್ಲಿ ಹೇಳಿದ್ದಾರೆ.
ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಕಾಲ ಕಾಲಕ್ಕೆ ಬದಲಾವಣೆ ಮಾಡುವ ಸಂವಿಧಾನ ಬದ್ಧ ಹಕ್ಕು ರಾಜ್ಯ ಸರ್ಕಾರಕ್ಕಿದೆ. ಸರ್ಕಾರ ಈಗ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತರುವುದಕ್ಕೆ ಸಾಕಷ್ಟು ಕಾರಣಗಳಿವೆ. ಇದರ ಸಾಧಕ-ಬಾಧಕಗಳನ್ನು ನಮ್ಮ ಜನಪ್ರತಿನಿಧಿಗಳು ನೋಡಿಕೊಳ್ಳುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು ಸ್ಥಳೀಯ ಭಾಷೆಗಳ ಸಂರಕ್ಷಣಾ ಸಂಘದವರು ನಿಮಗೆ ಕೊಟ್ಟಿದ್ದಾರೆ ಎನ್ನಲಾದ ಮನವಿಗೆ ತುರ್ತಾಗಿ ಪ್ರತಿಕ್ರಿಯಿಸಿದ್ದಾರೆ ಎಂಬುದನ್ನು ಕೇಳಿ ಆಶ್ಚರ್ಯವಾಯಿತು. ಬೆಂಗಳೂರಿನಲ್ಲಿ ಇಂತಹದ್ದೊಂದು ಸಂಘ ಇದೆ ಎಂಬುದೇ ನಮಗೆ ತಿಳಿದಿರಲಿಲ್ಲ. ಈ ರೀತಿಯನ್ನು ನಾಟಕಗಳನ್ನು ನಾವು ಎಷ್ಟೋ ನೋಡಿದ್ದೇವೆ. ಇಂಥ ಕುತಂತ್ರಗಳು ಕರ್ನಾಟಕಕ್ಕೆ ಹೊಸದೇನೂ ಅಲ್ಲ. ಮರೆಯಲ್ಲಿ ನಿಂತು ಬಾಣ ಬಿಡುವ ಈ ಹೇಡಿಗಳು ಬೀದಿಗೆ ಬರಲಿ ಎಂದು ನಾವು ಕಾಯುತ್ತಿದ್ದೇವೆ ಎಂದಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಪ್ರಭುಗಳು. ರಾಜ್ಯಪಾಲರ ಹುದ್ದೆ ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ನುಸುಳಿಕೊಂಡಿರುವ ರಾಜಶಾಹಿ ವ್ಯವಸ್ಥೆಯ ಒಂದು ಪಳೆಯುಳಿಕೆ. ಇಲ್ಲಿ ಜನರೇ ಪ್ರಭುಗಳು. ಇನ್ಯಾರೋ ರಾಜನಂತೆ ಮೆರೆಯುವುದು ಸಾಧ್ಯವಿಲ್ಲ. ನಿಮ್ಮ ಈ ಅಧಿಕ ಪ್ರಸಂಗತನದ ಪತ್ರ ರಾಜ್ಯಪಾಲರ ವ್ಯವಸ್ಥೆ ನಮ್ಮ ದೇಶಕ್ಕೆ ಬೇಕೇ ಎಂಬ ಪ್ರಶ್ನೆಯನ್ನು ಮತ್ತೆ ಮುನ್ನೆಲೆಗೆ ತಂದಂತಾಗಿದೆ ಎಂದಿದ್ದಾರೆ.
ನೀವು ಹಿಂದಿ ಸಾಮ್ರಾಜ್ಯಶಾಹಿ ಲಾಭಿಯ ಪರವಾಗಿ ಮಾತನಾಡುತ್ತಿದ್ದೀರಿ ಎಂಬುದು ನಮಗೆ ಗೊತ್ತಿದೆ. ಕನ್ನಡಿಗರು ಔದಾರ್ಯವಂತರು. ನಮ್ಮ ನೆಲದಲ್ಲಿ ನಿಮಗೆ ಐಷರಾಮಿ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದೇವೆ. ಕನ್ನಡಿಗರ ತೆರಿಗೆ ದುಡ್ಡಿನಲ್ಲಿ ರಾಜಭವನ ನಡೆಯುತ್ತಿದೆ. ಉಂಡ ಮನೆಗೆ ಕನ್ನ ಹಾಕುವುದು ತರವಲ್ಲ. ಈ ಅಧಿಕ ಪ್ರಸಂಗವನ್ನು ಮುಂದುವರೆಸಿದರೆ ರಾಜ್ಯಪಾಲರೇ ಗಂಟು-ಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ ಎಂದು ನಾವು ಹೇಳಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನೀವು ಬರೆದಿರುವ ಪತ್ರವನ್ನು ಕೂಡಲೇ ಹಿಂದಕ್ಕೆ ಪಡೆಯಿರಿ. ಸರ್ಕಾರ ಶಿಕ್ಷಣ ತಜ್ಞರ ಅಭಿಪ್ರಾಯ ಪಡೆದು ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತಂದಿದೆ. ದಶಕಗಳಿಂದ ಕನ್ನಡದ ಜನತೆಯನ್ನು ಕಾಡುತ್ತಿದ್ದ ಶಾಪ ವಿಮೋಚನೆಯಾಗಿದೆ. ಒಂದು ವೇಳೆ ಇದನ್ನು ಜಾರಿಗೆ ತರುವುದನ್ನು ತಡೆಯಲು ಯಾರೇ ಯತ್ನಿಸಿದರೂ ಕರ್ನಾಟಕದಲ್ಲಿ ಕ್ರಾಂತಿಯ ಜ್ವಾಲೆ ಹೊತ್ತಿಕೊಳ್ಳಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಮಾನ್ಯ ರಾಜ್ಯಪಾಲರೇ ನಿಮ್ಮ ಕೆಲಸ ನೀವು ನೋಡಿಕೊಳ್ಳಿ. ಹಿಂಬಾಗಿಲಿನಿಂದ ಬಂದು ಆಡಳಿತ ಮಾಡುವ ಯತ್ನ ಮಾಡಬೇಡಿ. ನಿಮಗೆ ಆ ಅಧಿಕಾರವನ್ನು ರಾಜ್ಯದ ಜನತೆ ಕೊಟ್ಟಿಲ್ಲ. ರಾಜಭವನದಲ್ಲಿ ನಿಮ್ಮ ಉಪಚಾರಕ್ಕೆ ಏನಾದರೂ ಕೊರತೆ ಇದ್ದರೆ ಹೇಳಿ, ವ್ಯವಸ್ಥೆ ಮಾಡಿಕೊಡೋಣ. ಬೇರೆ ಉಸಾಬರಿಯನ್ನು ನಮ್ಮ ಜನಪ್ರತಿನಿಧಿಗಳು ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ತೃತೀಯ ಭಾಷೆಗೆ ಅಂಕ ನೀಡುವ ಪದ್ಧತಿಯನ್ನು ಕೈಬಿಟ್ಟು ಗ್ರೇಡ್ ನಮೂದಿಸುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕಳೆದ ಮಾರ್ಚ್ ೨೭ ರಂದು ಘೋಷಣೆ ಮಾಡಿದ್ದರು. ಈ ನಿರ್ಧಾರಕ್ಕೆ ವಿರೋಧ ಪಕ್ಷದ ನಾಯಕ ಸೇರಿದಂತೆ ಬಿಜೆಪಿಯ ಹಲವು ಶಾಸಕರು, ಹಿಂದಿ ಶಿಕ್ಷಕರು, ಹಿಂದಿ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ರಾಜ್ಯಪಾಲರಿಗೆ ಸ್ಥಳೀಯ ಭಾಷೆಗಳ ಸಂರಕ್ಷಣಾ ಸಂಘದವರು ಮನವಿ ಮಾಡಿದ್ದರು. ಈ ಮನವಿ ಆಧರಿಸಿ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ರವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಗ್ರೇಡಿಂಗ್ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಪತ್ರ ಬರೆದಿದ್ದರು.

























