
ಕೋಲಾರ,ಏ.೪- ಆದಿಮ ಕೇಂದ್ರದಲ್ಲಿ ೨೨೮ನೇ ಹುಣ್ಣಿಮೆ ಹಾಡು; ನಾಟಕ ಪ್ರದರ್ಶನ, ಸಾಧಕರಿಗೆ ಗದ್ದುಗೆ ಗೌರವ, ಆದಿಮ ಮಕ್ಕಳ ಮೇಳ ೨೦೨೬ ಲಾಂಛನ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ನಗರ ಹೊರವಲಯದ ತೇರಹಳ್ಳಿ ಬೆಟ್ಟದ ಶಿವಗಂಗೆಯ ಆದಿಮ ಸಾಂಸ್ಕೃತಿ ಕೇಂದ್ರದಲ್ಲಿ ಹುಣ್ಣಿಮೆ ಹಾಡು ೨೨೮ ಕಾರ್ಯಕ್ರಮವನ್ನು ಏ೨ ರಂದು ಆಯೋಜಿಸಲಾಗಿತ್ತು. ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸ್ಕೃತಿ ಚಿಂತಕ, ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಕೆ.ಶಿವರಾಮಯ್ಯ ಮಾತನಾಡುತ್ತಾ ಆದಿಮ ನಾವು ಕಟ್ಟಿದ ಸ್ವರ್ಗ ಎಂದರು.
ಕೇಂದ್ರ ಕಟ್ಟುವ ಆರಂಭದಲ್ಲಿ ಅನೇಕರು ನೆರವಿಗೆ ನಿಂತು ಸಹಕರಿಸಿದ್ದಾರೆ. ಇಲ್ಲಿನ ಗಿಡ ಮರ ಪರಿಸರ ಆನಂದ ಕೊಡುತ್ತದೆ. ಪ್ರಕೃತಿಯ ನಡುವೆ ಇರುವುದರಿಂದ ಇಲ್ಲಿಗೆ ಬಂದಾಗ ನಮ್ಮ ಪ್ರಾಯ ಇಪ್ಪತ್ತು-ಇಪ್ಪತ್ತೈದು ವರ್ಷ ಹಿಂದಕ್ಕೆ ಹೋದಂತೆ ಆಗುತ್ತದೆ. ಇಂತಹ ಕೇಂದ್ರಕ್ಕೆ ನೀರಿನ ಸೌಲಭ್ಯ ಇಲ್ಲದೆ ಇದ್ದಂತಹ ಸಂದರ್ಭದಲ್ಲಿ ನೆರವಿಗೆ ನಿಲ್ಲುವ ಅವಕಾಶ ನಮಗೆ ಸಿಕ್ಕಿತು. ಬಾವಿ ತೋಡಲು ಎರಡು ಗುಂಟೆ ಭೂಮಿ ಖರೀದಿಸಿ ಕೊಡಲಾಯಿತು. ಇತ್ತೀಚೆಗೆ ಆದಿಮ ಕೇಂದ್ರದ ಹೆಸರಿಗೆ ನೋಂದಣಿ ಮಾಡಿಕೊಟ್ಟಿರುತ್ತೇನೆ ಎಂದು ನೆನಪಿಸಿದರು.
ಇವತ್ತು ಆದಿಮ ಹಮ್ಮಿಕೊಳ್ಳುವ ಒಂದೊಂದು ಕಾರ್ಯಕ್ರಮವನ್ನೂ ಗಮನಿಸಿದಾಗ ಬಹಳ ಸಂತೋಷವಾಗುತ್ತದೆ. ಹೀಗೆಯೇ ಎಲ್ಲರ ಸೇವೆ, ಸಹಕಾರಗಳಿಂದ ಆದಿಮ ಸಾಂಸ್ಕೃತಿಕ ಕೇಂದ್ರ ಮುಂದುವರೆಯಬೇಕಿದೆ ಎಂದವರು ೧೯೯೫ರಲ್ಲಿ ರಚಿಸಿದ ಬೆಟ್ಟ ಬೆಳದಿಂಗಳು ಕವಿತೆ ಓದಿ ಕೇಳಿಸಿದರು.
ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ನೃತ್ಯ ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಕುಲಪತಿಗಳಾದ ಡಾ.ಕೆ.ರಾಮಕೃಷ್ಣಯ್ಯ ಮಾತನಾಡುತ್ತಾ ಆದಿಮ ಮತ್ತು ನನ್ನ ಸಂಬಂಧ ಒಂದು ರೀತಿಯಲ್ಲಿ ಖುಷಿ, ಒಂದು ರೀತಿಯಲ್ಲಿ ದುಃಖ. ಕೊಮ್ಮಣ್ಣ, ರಾಮಚಂದ್ರ ಅವರು ಗೌರಿಬಿದನೂರು ಭಾಗದಲ್ಲಿ ದಸಂಸ ಕಟ್ಟಿ ಬೆಳೆಸಿದವರು ಎಂದರು.
ಸಂಘಟನೆಯ ಹಾಡುಗಳನ್ನು ಹಾಡುತ್ತಿದ್ದ ಗೋಪಿ, ನನಗೆ ದಸಂಸ ಪರಿಚಯಿಸಿದರು. ಅಲ್ಲಿಂದ ನೀನಾಸಂಗೆ ಕಳುಹಿಸಿಕೊಟ್ಟರು. ದಸಂಸ ಪಲ್ಲಟಗಳು ಕಂಡು ನಾವು ರಂಗಭೂಮಿಯಲ್ಲಿ ಮುಂದುವರೆದೆವು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ಈಗ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ, ಮೈಸೂರು, ಕುಲಪತಿಯಾಗಲು ಸಾಧ್ಯವಾಯಿತು. ಇವತ್ತು ಏನೆಲ್ಲಾ ಆದರೂ ನಾವು ದಲಿತ ಸಂಘಟನೆಯ ಕೂಸುಗಳು ಎಂದು ತಿಳಿಸಿದರು.
ವಿದ್ಯಾರ್ಥಿ ದಿನಗಳಲ್ಲಿ ದಸಂಸ ಸಂಘಟನೆ ಮಾರ್ಗದರ್ಶಿಗಳಾಗಿದ್ದ ಪ್ರೊ. ಗಂಗಾಧರ ಮೂರ್ತಿ, ಕೊಮ್ಮಣ್ಣನ ಅಗಲಿಕೆ ನೆನೆಸಿಕೊಂಡು ಬಾವುಕರಾದರು. ರಾಮಚಂದ್ರ ಮತ್ತು ತಂಡ ಇವತ್ತು ಆದಿಮ ಕೇಂದ್ರವನ್ನು ಮುನ್ನೆಡೆಸುತ್ತಿದ್ದಾರೆ. ನನ್ನ ಸೇವೆಯನ್ನು ಗಮನಿಸಿ ಆದಿಮ ಇವತ್ತು ಗದ್ದುಗೆ ಗೌರವ ನೀಡಿದೆ. ಎಲ್ಲಾ ಪದಾಧಿಕಾರಿಗಳಿಗೂ ಧನ್ಯವಾದಗಳು ಎಂದರು.
ಚಿಂತಕರು, ನಾಟಕಕಾರರು, ಕನ್ನಡ ಪ್ರಾಧ್ಯಾಪಕರು ಮಹಾರಾಣಿ ಕ್ಲೆಸ್ಟರ್ ವಿಶ್ವವಿದ್ಯಾಲಯ ಬೆಂಗಳೂರು ಡಾ.ಕೆ.ವೈ. ನಾರಾಯಣಸ್ವಾಮಿ ಮಾತನಾಡಿ, ನಾನು ರಚಿಸಿರುವ ವರ್ಣ ಪಲ್ಲಟ ನಾಟಕ ನೋಡಲು ನಿಮ್ಮ ಹಾಗೆ ನನಗೂ ಕುತೂಹಲವಿದೆ. ನಿಮ್ಮೊಂದಿಗೆ ಇಲ್ಲಿ ನಾಟಕ ನೋಡುವ ಅವಕಾಶ ಆದಿಮ ಕಲ್ಪಿಸಿಕೊಟ್ಟಿದೆ. ನಾಟಕಕ್ಕೆ ಮೊದಲು ಮಾತು ಕಡಿಮೆ ಇದ್ದರೆ ಒಳ್ಳೆಯದು ಎಂದರು. ಬೇಸಿಗೆ ಶಿಬಿರ ಮಕ್ಕಳ ಮೇಳ -೨೦೨೬ ಕುರಿತು ಹ.ಮಾ. ರಾಮಚಂದ್ರ ಮಾತನಾಡುತ್ತಾ ಪ್ರತಿ ವರ್ಷವೂ ಇಲ್ಲಿ ಮಕ್ಕಳ ಮೇಳ ಬೇಸಿಗೆ ರಜೆಗಳಲ್ಲಿ ಮಾಡುತ್ತಾ ಬಂದಿದ್ದೇವೆ. ಈ ಬಾರಿಯೂ ಆಯೋಜಿಸಲಾಗುತ್ತಿದೆ. ಮಾರ್ಚ್ ೧೦ ರಿಂದ ಅರ್ಜಿಗಳು ವಿತರಿಸಲಾಗಿ, ಇದುವರೆಗೆ ಸುಮಾರು ೧೮೦ ಅರ್ಜಿಗಳು ಬಂದಿವೆ. ಇನ್ನೂ ಅನೇಕರು ಅವಕಾಶ ನೀಡುವಂತೆ ಕೇಳುತ್ತಿದ್ದಾರೆ. ಸ್ಥಳಾವಕಾಶದ ಕೊರತೆ ಇರುವುದರಿಂದ ಸಹಕರಿಸಬೇಕಾಗಿ ಕೋರಿದರು. ಇದೇ ಸಂದರ್ಭದಲ್ಲಿ ಅತಿಥಿಗಳು ಮಕ್ಕಳ ಮೇಳ-೨೦೨೬ ಲಾಂಛನ ಬಿಡುಗಡೆ ಮಾಡಿದರು.
ವಿಶ್ವ ರಂಗಭೂಮಿ ದಿನವನ್ನು ಕಾರ್ಯಕ್ರಮದ ನಿರೂಪಣೆ ಜೆ.ಜಿ.ನಾಗರಾಜ್ ನಡೆಸಿಕೊಟ್ಟರು. ಸ್ವಾಗತ ಗ.ನ. ಅಶ್ವತ್ಥ್ , ರಾಜಪ್ಪ ಡಿ.ಆರ್. ವಂದನಾರ್ಪಣೆ ನಡೆಸಿಕೊಟ್ಟರು. ಹಾಗೆಯೇ ಕಾರ್ಯಕ್ರಮದ ಆರಂಭದಲ್ಲಿ ಆದಿಮ ಆಶಯಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಮಾಕೊಂಡಪ್ಪ, ವೆಂಕಟಸ್ವಾಮಿ, ಶಶಿಧರ್ ಭಾರಿಘಾಟ್, ರಾಧಮ್ಮ ಬೆಳಕು ಸಂಸ್ಥೆ ಇದ್ದರು.
ನಾಟಕ ವರ್ಣ ಪಲ್ಲಟ ಹೆಸರೇ ಹೇಳುವಂತೆ ಯುವಕ ಯುವತಿ ನಡುವೆ ಕವಿತ್ವದ ಕಾರಣಕ್ಕೆ ಇಷ್ಟಪಟ್ಟು ಪ್ರೀತಿಸುತ್ತಾರೆ. ಪ್ರೀತಿಯ ಸಂಕೋಲೆ, ಜಾತಿ, ವರ್ಗ ಗಳು ಕಣ್ಣಿಗೆ ಕಾಣಿಸದ್ದೇ ಸಮಾಜ ಹೇಗೆ ನಡೆದುಕೊಳ್ಳುತ್ತದೆ, ನಡೆಸಿಕೊಳ್ಳುತ್ತದೆ, ವೈಚಾರಿಕ ಚಿಂತನೆ ಎದುರು ತಿರುಗಿದಾಗ ಎದುರಿಸಬೇಕಾಗುವ ಸವಾಲುಗಳು, ಹಿಂಸಾರೂಪ, ಶೋಷಣೆಯ ಸರಪಳಿಯಂತೆ ಒಂದೊಂದು ಪ್ರಸಂಗವೂ ರಂಗದ ಮೇಲೆ ತರಲಾಗಿದೆ. ನಿರ್ದೇಶನ ಹಾಗೂ ಸಂಗೀತ ಸಂಯೋಜನೆ ಬಾವುಕ ಸನ್ನಿವೇಶಗಳಲ್ಲಿ ಅಳವಡಿಸಿಕೊಂಡಿರುವ ರಾಗಾಲಾಪಗಳು ಪ್ರೇಕ್ಷಕರ ಮನಸೆಳೆದವು.
ಒಟ್ಟಿನಲ್ಲಿ ಆದಿಮ ರಂಗ ಶಿಕ್ಷಣ ವಿದ್ಯಾರ್ಥಿಗಳು ಮುತುವರ್ಜಿಯಾಗಿ ಅವರವರ ಪಾತ್ರಗಳನ್ನು ನಿರ್ವಹಿಸಿ ಒಂದು ಉತ್ತಮ ಪ್ರದರ್ಶನ ನೀಡಿದರು. ನಾಟಕ ವೀಕ್ಷಿಸಿದ ಪ್ರೇಕ್ಷಕರು ನಾಟಕ, ಪ್ರದರ್ಶನ ಕುರಿತು ಮಾತನಾಡಿದರು. ನಾಟಕ ರಚನೆ; ಡಾ.ಕೆ.ವೈ.ನಾರಾಯಣಸ್ವಾಮಿ, ನಿರ್ದೇಶನ; ಜಗದೀಶ್ ಆರ್ ಜಾಣಿ, ಗ.ನ. ಅಶ್ವತ್ಥ್, ತುರಾಂಡಹಳ್ಳಿ ಶ್ರೀನಿವಾಸ್, ಪ್ರಸಾಧನ; ಎನ್. ಮೋಹನ್ ಕುಮಾರ್, ಬೆಳಕು; ಆಸಿಫ್ ಹೂವಿನಹಡಗಲಿ, ವಸ್ತ್ರವಿನ್ಯಾಸ; ಜಗದೀಶ್ ಆರ್ ಜಾಣಿ, ಶಿವಣ್ಣ ಜಿ.ಎನ್. ಬೆಂಗಳೂರು.






















