
ಕಲಬುರಗಿ,ಏ.2-ಕಲಬುರಗಿಯಲ್ಲಿ ಸದ್ಯ ಆಟೋ ಎಲ್‍ಪಿಜಿ ಅಭಾವ ಎದುರಾಗಿದ್ದು, ಇದರಿಂದಾಗಿ ಆಟೋ ಚಾಲಕರು ಪರದಾಡುವಂತಾಗಿದೆ.
ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮವಾಗಿ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ವಾಣಿಜ್ಯ ಸಿಲಿಂಡರ್‍ಗಳ ಕೊರತೆ ಸೃಷ್ಟಿಯಾಗಿದೆ. ಆಟೋ ಚಾಲಕರು ಅನಿಲ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದರೆ, ಇತ್ತ ಪ್ರಯಾಣ ದರ ಹೆಚ್ಚಳದಿಂದ ಜನಸಾಮಾನ್ಯರ ಆರ್ಥಿಕ ಸ್ಥಿತಿಯ ಮೇಲೆ ನೇರ ಪರಿಣಾಮ ಬೀರಿದೆ.
ನಗರದಲ್ಲಿರುವ ಆಟೋ ಎಲ್‍ಪಿಜಿ ಬಂಕ್‍ಗಳಲ್ಲಿ ಕೆಲವು ಕಡೆ ಎಲ್‍ಪಿಜಿ ಅಭಾವ ಉಂಟಾಗಿರುವುದರಿಂದ ಬಂಕ್‍ಗಳ ಮುಂದೆ ಸುಮಾರು ಅರ್ಧ ಕಿಲೋ ಮೀಟರ್‍ವರೆಗೆ ಎಲ್‍ಪಿಜಿಗಾಗಿ ಆಟೋಗಳು ಕಾಯುತ್ತ ನಿಂತಿವೆ.
ಎಲ್‍ಪಿಜಿ ಕೊರತೆಯಿಂದಾಗಿ ಆಟೋ ಚಾಲಕರು ಆಟೋ ಓಡಿಸುವುದೇ ಕಷ್ಟಕರವಾಗಿದ್ದು, ಆಟೋ ಚಾಲನೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಆಟೋ ಚಾಲಕರು ತೀವ್ರ ತೊಂದರೆಯನ್ನು ಅನುಭವಿಸುವಂತಾಗಿದೆ. ನಗರದ ಹಲವು ಕಡೆ ಆಟೋ ಸಂಚಾರ ಕಡಿಮೆಯಾಗಿದ್ದು, ಜನ ಸಾಮಾನ್ಯರು ನಗರ ಸಾರಿಗೆ ಬಸ್ಸುಗಳಲ್ಲಿ ಸಂಚರಿಸುವುದು ಹೆಚ್ಚಾಗಿದೆ.
ದರ ಹೆಚ್ಚಳ
ಇನ್ನು ಗ್ಯಾಸ್ ದರ ಏರಿಕೆಯಿಂದ ಆಟೋದಲ್ಲಿ ಸಂಚರಿಸುವ ಪ್ರಯಾಣಿಕರ ದರ ಏರಿಕೆ ಮಾಡಲಾಗಿದ್ದು, ಮಾರ್ಕೆಟ್‍ನಿಂದ ಹುಮನಾಬಾದ್ ರಿಂಗ್ ರಸ್ತೆ, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತಕ್ಕೆ ಮೊದಲು 10-15 ರೂ. ದರ ಪಡೆಯಲಾಗುತ್ತಿತ್ತು. ಇದೀಗ 20-25 ರೂ. ಪಡೆಯಲಾಗುತ್ತಿದೆ. ಇದರಿಂದ ಹಲವು ಗ್ರಾಹಕರ ಜೊತೆ ಆಟೋ ಡ್ರೆವರ್‍ಗಳ ವಾಗ್ವಾದ ನಡೆಯುತ್ತಿದೆ.
ಈಗಾಗಲೇ ಶಕ್ತಿ ಯೋಜನೆಯಿಂದ ಆಟೋ ಹತ್ತುವವರ ಸಂಖ್ಯೆ ಇಳಿಮುಖವಾಗಿದ್ದು, ದರ ಹೆಚ್ಚಳ ಆದರೆ ಇನ್ನೂ ಪ್ರಯಾಣಿಕರ ಸಂಖ್ಯೆ ಇಳಿಕೆ ಕಾಣಬಹುದು ಎಂದು ಅಂದಾಜಿಸಲಾಗುತ್ತಿದೆ. ಇನ್ನು ಹೀಗೆ ಮುಂದುವರಿದರೆ, ನಗರದಲ್ಲಿನ ಸಾವಿರಾರು ಆಟೋ ಚಾಲಕರು ಕುಟುಂಬ ನಡೆಸುವುದು ಕಷ್ಟವಾಗಲಿದೆ ಎಂದು ಆಟೋ ಚಾಲಕರು ಅಳಲು ತೋಡಿಕೊಂಡಿದ್ದಾರೆ. ಕೂಡಲೇ ಸರಕಾರ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ.




















