
ಚಡಚಣ :ಏ.2: ತಾಲೂಕಿನಲ್ಲಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳುವಂತೆ ಶಾಸಕ ವಿಠ್ಠಲ ಕಟಕಧೋಂಡ ಅವರು ಟಾಸ್ಕ್ಫೆÇೀರ್ಸ್ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಬುಧವಾರ ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ನಡೆದ ಗ್ರಾಪಂ ಹಾಗೂ ಸಂಬಂಧಿತ ಇಲಾಖೆಗಳ ಸಭೆಯಲ್ಲಿ ನೀರು ಪೂರೈಕೆ ಮತ್ತು ಕುರಿತು ವಿಸ್ತೃತ ಚರ್ಚೆ ನಡೆಸಿ ಅಗತ್ಯ ಮಾರ್ಗದರ್ಶನ ನೀಡಿದರು.
ಚಡಚಣ ತಾಲೂಕಿನ ಕಾಲುವೆಗೆ ಈಗಾಗಲೇ ಒಂದು ಟಿಎಂಸಿ ನೀರು ಬಿಡುಗಡೆ ಜೊತೆಗೆ ಹೆಚ್ಚುವರಿಯಾಗಿ ಒಂದು ಟಿಎಂಸಿ ನೀರು ಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಾವಿನಾಳ, ಹತ್ತಳ್ಳಿ, ಬ್ಯಾರೇಜ್ ತುಂಬಿಸಲು ಅಧಿಕಾರಿಗಳು ಕ್ರಮ ವಹಿಸಬೇಕು. ಉಮರಾಣಿ ಬ್ಯಾರೇಜ್ ನೀರನ್ನು 5 ಮೀಟರ್ ವರೆಗೆ ಯಾವಾಗಲೂ ಕಾಯ್ದುಕೊಳ್ಳಲು ಸೂಚಿಸಿದರು. ಈಗ ಭೀಮಾ ನದಿ ನೀರಿನ ಮಟ್ಟ ಕಡಿಮೆಯಾಗಿದೆ ಕೆಲವೊಂದು ಬಹು ಹಳ್ಳಿ ಕುಡಿಯುವ ನೀರಿನ ಸರಬರಾಜು ಸ್ಥಗಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದರು, ಮತ್ತೋಮ್ಮೆ ಭೀಮಾ ನದಿಗೆ ನೀರು ಬಿಡುಗಡೆ ಮಾಡಬೇಕು ಎಂದು ಮಹಾರಾಷ್ಟ್ರ ಸರ್ಕಾರ ಮನವಿ ಮಾಡಲಾಗುವುದು ಎಂದರು.
ಚಡಚಣ ತಾಲೂಕಿನ 13 ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಇಲ್ಲದಿರುವ ಪ್ರಸ್ತುತ ಪರಿಸ್ಥಿತಿಯಲ್ಲಿಯೂ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಮುಂದಾಗಬೇಕು ಯಾವುದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಚಡಚಣ ಏತ ನೀರಾವರಿ ಯೋಜನೆ ಶೀಘ್ರ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಪ್ರಸ್ತುತ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಎರಡು ತಿಂಗಳು ಬೇಕಾಗುತ್ತದೆ ಎಂದು ಅಧಿಕಾರಿ ತಿಳಿಸಿದರು. ಈ ನಡುವೆ ತಾತ್ಕಾಲಿಕ ವ್ಯವಸ್ಥೆಗಳ ಮೂಲಕ ನೀರು ಸರಬರಾಜು ಸುಗಮಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.
ಇದಲ್ಲದೆ, ಸರ್ಕಾರಿ ಶಾಲೆ ಕಾಲೇಜು, ವಸತಿ ನಿಲಯ ಕಲ್ಪಿಸಲು 30 ಎಕರೆ ಪ್ರದೇಶದ ಭೂಮಿ ಪರಿಶೀಲನೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕರು ತಹಶೀಲ್ದಾರ್ ಅವರಿಗೆ ನಿರ್ದೇಶನ ನೀಡಿದರು.
ಕಂದಾಯ ಇಲಾಖೆಯಿಂದ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ ಟಾಪ್ ಕಿಟ್ಗಳನ್ನು ಶಾಸಕರು ವಿತರಿಸಿದರು.
ಈ ಸಭೆಯಲ್ಲಿ ತಾಲೂಕಾ ನೋಡಲ್ ಅಧಿಕಾರಿ ಸಿ ಬಿ ಕುಂಬಾರ, ತಹಸೀಲ್ದಾರ ಸಂಜಯ ಇಂಗಳೆ, ಪುರಸಭೆ ಮುಖ್ಯಾಧಿಕಾರಿ ಬಾಬಾಸಾಹೇಬ್ ತಾವಸೆ, ತಾಪಂ ಇಒ ಅಶೋಕ ಕುಮಾರ ರಾಠೋಡ, ಗ್ರಾಮೀಣ ನೀರು ಸರಬರಾಜು ಎಇಇ ರಾಮಚಂದ್ರ ಬಂಡಿ, ಕೆಬಿಜೆಎನ್ ಎಲ್ ಎಇಇ ಸಂಜೀವ ಹೀರೊಳ್ಳಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಾಹೇಬಗೌಡ ಜುಜ್ರವಾಡಿ, ಪಶು ವೈದ್ಯಕೀಯ ಸಹಾಯಕ ನಿರ್ದೇಶಕರುಗಳಾದ ಮಲ್ಲಿಕಾರ್ಜುನ ಗಂಗನಳ್ಳಿ, ಹೆಸ್ಕಾಂ ಎಇಇ ವಿಜಯಕುಮಾರ ಹವಾಲ್ದಾರ, ಬಿಇಒ ಚಿದಾನಂದ ಕಟ್ಟಿಮನಿ, ದಾನಪ್ಪ ಕತ್ನಾಳ್ಳಿ, ತಾಲೂಕಿನ ಗ್ರಾಂಪ ಪಿಡಿಒ ಮತ್ತು ಗ್ರಾಮ ಆಡಳಿತಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.




















