Home ಜಿಲ್ಲೆ ಕಾರ್ಮಿಕ ಕಾಯಿದೆ ವಿರುದ್ಧ ಕರಾಳ ದಿನಾಚರಣೆ: ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ

ಕಾರ್ಮಿಕ ಕಾಯಿದೆ ವಿರುದ್ಧ ಕರಾಳ ದಿನಾಚರಣೆ: ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ

ವಿಜಯಪುರ, ಏ. 2 : ನಾಲ್ಕು ಕಾರ್ಮಿಕ ಕಾಯಿದೆಗಳ ವಿರುದ್ದ 2025ರ ಏಪ್ರಿಲ್ ಒಂದರಂದು ಕರಾಳ ದಿನ ಆಚರಿಸಲು ಕೇಂದ್ರ ಕಾರ್ಮಿಕ ಸಂಘಟನೆಗಳು, ಸ್ವತಂತ್ರ ಕ್ಷೇತ್ರೀಯ ಮಹಾಸಂಘಗಳು ಮತ್ತು ಸಂಘಗಳ ಜಂಟಿ ವೇದಿಕೆಯು ಕರೆ ನೀಡಿದರ ಹಿನ್ನೆಲೆ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮುಂದೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ವತಿಯಿಂದ ಕರಾಳ ದಿನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಿಐಟಿಯು ಸಂಚಾಲಕ ಲಕ್ಷ್ಮಣ ಹಂದ್ರಾಳ ಮಾತನಾಡಿ, ಏಪ್ರಿಲ್ ಒಂದರಂದೇ ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಸಂಹಿತೆಗಳ ಅನುಷ್ಠಾನಕ್ಕಾಗಿ ಕೇಂದ್ರ ನಿಯಮಗಳನ್ನು ಜಾರಿಗೆ ತರುವುದಾಗಿ ಘೋಷಿಸಿದೆ. ‘ವ್ಯವಹಾರ ಮಾಡಲು ಸುಲಭತೆ’ ಎಂಬ ಹೆಸರಿನಲ್ಲಿ ಕಾರ್ಮಿಕ ವಿರೋಧಿ ಮತ್ತು ಮಾಲೀಕರ ಪರವಾದ ಈ ಕಾರ್ಮಿಕ ಸಂಹಿತೆಗಳನ್ನು ಕಾರ್ಮಿಕ ಸಂಘಟನೆಗಳು ನಿರಂತರವಾಗಿ ವಿರೋಧಿಸುತ್ತಿವೆ ಮತ್ತು ಅವನ್ನು ರದ್ದುಪಡಿಸುವಂತೆ ಆಗ್ರಹಿಸುತ್ತಿವೆ. 2026ರ ಫೆಬ್ರವರಿ 12ರಂದು ನಡೆದ ಐತಿಹಾಸಿಕ ಸಾರ್ವತ್ರಿಕ ಮುಷ್ಕರದ ನಂತರವೂ ಕೇಂದ್ರ ಸರ್ಕಾರ ಈ ವಿಷಯದಲ್ಲಿ ಯಾವುದೇ ಗಂಭೀರ ಚರ್ಚೆಗೆ ಮುಂದೆ ಬಂದಿಲ್ಲ ಕೂಡಲೇ ಕಾರ್ಮಿಕ ಕಾಯ್ದೆಯನ್ನು ವಾಪಸ್ಸು ಪಡೆಯಬೇಕೆಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಸಹ ಸಂಚಾಲಕ ಅಣ್ಣಾರಾಯ ಈಳಗೇರಿ ಮಾತನಾಡಿ, ಕಾರ್ಮಿಕ ಸಂಹಿತೆಗಳ ರಚನೆಯ ಹಂತದಿಂದಲೂ ಕಾರ್ಮಿಕ ಸಂಘಟನೆಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ. ಭಾರತದ ಕಾರ್ಮಿಕರ ಜೀವನಕ್ಕೆ ಸಂಬಂಧಿಸಿದಂತಹ ಮಹತ್ವದ ವಿಷಯದ ಬಗ್ಗೆ ಚರ್ಚಿಸಲು ಭಾರತೀಯ ಕಾರ್ಮಿಕ ಸಮ್ಮೇಳನವನ್ನೂ ಕರೆದಿಲ್ಲ. ಇದು ಭಾರತವು ಬದ್ಧವಾಗಿರುವ ಅಂತರರಾಷ್ಟ್ರೀಯ ಕಾರ್ಮಿಕ ಮಾನದಂಡಗಳ ಉಲ್ಲಂಘನೆಯಾಗಿದೆ ಎಂದು ಸಿಐಟಿಯು ಅಭಿಪ್ರಾಯ ಪಟ್ಟಿದೆ. ಈ ಕಾರ್ಮಿಕ ಸಂಹಿತೆಗಳು ಕಾರ್ಮಿಕರನ್ನು ಮತ್ತೆ ಬ್ರಿಟಿಷ್ ವಸಾಹತು ಕಾಲದ ಶೋಷಣಾತ್ಮಕ ಪರಿಸ್ಥಿತಿಗಳಿಗೆ ತಳ್ಳಲಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೋಂದಣಿ ಕಷ್ಟಕರ. ಅಲ್ಲದೆ ರದ್ದತಿ ಸುಲಭವಾಗಲಿದೆ. ಉದ್ಯೋಗದಾತರ ಕಾನೂನುಗಳ ಉಲ್ಲಂಘನೆಗಳನ್ನು ಅಪರಾಧವಲ್ಲದಂತೆ ಮಾಡುವುದಾಗಿದೆ. ಕಾರ್ಮಿಕ ಸಂಘಟನೆಗಳ ಚಟುವಟಿಕೆಗಳನ್ನು ಅಪರಾಧೀಕರಣ ಎಂದು ಬಿಂಬಿಸಲಾಗುತ್ತದೆ. ಕೆಲಸದ ಗಂಟೆಗಳಿಗೆ ಮಿತಿ ಇಲ್ಲದಂತೆ ಮಾಡುವುದಾಗಿದೆ. ಮುಷ್ಕರ ಹಕ್ಕು ಅಸಾಧ್ಯವಾಗುತ್ತದೆ. ಖಾಯಂ ಅವಧಿಯ ಉದ್ಯೋಗಗಳನ್ನು ಇಲ್ಲವಾಗಿಸುವುದು, ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ದುರ್ಬಲಗೊಳಿಸುವುದು. ಕನಿಷ್ಠ ವೇತನವನ್ನು ಬಡತನ ರೇಖೆಗಿಂತ ಕಡಿಮೆ ಮಟ್ಟದಲ್ಲಿ ನಿಗದಿ ಮಾಡುವುದು. ಖಾಯಂಯೇತರ ಕಾರ್ಮಿಕರಿಗೆ ಹಕ್ಕುಗಳೇ ಇಲ್ಲದಂತೆ ಮಾಡುವುದು, ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ದುರ್ಬಲಗೊಳಿಸುವುದು. ಕನಿಷ್ಠ ವೇತನವನ್ನು ಬಡತನ ರೇಖೆಗಿಂತ ಕಡಿಮೆ ಮಟ್ಟದಲ್ಲಿ ನಿಗದಿ ಮಾಡುವುದು. ಖಾಯಂಯೇತರ ಕಾರ್ಮಿಕರಿಗೆ ಹಕ್ಕುಗಳೇ ಇಲ್ಲದಂತೆ ಮಾಡುವುದು, ಕಾರ್ಮಿಕರಿಗೆ ಸುರಕ್ಷತಾ ನಿಯಮಗಳನ್ನು ಕಡಿಮೆ ಮಾಡುವುದಾಗಿದೆ. ಕೇಂದ್ರ ಸರಕಾರದ ಕಾರ್ಮಿಕ ಸಂಹಿತೆಗಳು ಭಾರತೀಯ ಸಂವಿಧಾನದ ಆತ್ಮಕ್ಕೂ, ಅಂತರರಾಷ್ಟ್ರೀಯ ಕಾರ್ಮಿಕ ಮಾನದಂಡಗಳಿಗೂ ಹಾಗೂ ಮಾನವ ಹಕ್ಕುಗಳಿಗೂ ವಿರುದ್ಧವಾಗಿವೆ ಎಂದು ಸಿಐಟಿಯು ಅಭಿಪ್ರಾಯ ಪಟ್ಟಿದೆ. ಈ ಹಿನ್ನೆಲೆಯಲ್ಲಿಯಲ್ಲಿ, ಕಾರ್ಮಿಕ ಸಂಘಟನೆಗಳು ಹೋರಾಟ ಮುಂದುವರಿಸಲು ತೀರ್ಮಾನಿಸಿವೆ ಎಂದರು.
ಈ ಸಂದರ್ಭದಲ್ಲಿ ಸಹ ಸಂಚಾಲಕರಾದ ಸುರೇಶ ಜೀಬಿ ಮಾತನಾಡಿ, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ಯೋತ್ತರ ಕಾಲಗಳಲ್ಲಿ ಕಾರ್ಮಿಕ ವರ್ಗವು ಕೆಲಸದ ಸುರಕ್ಷತೆ, ಸಂಘಟನೆಯ ಹಕ್ಕು, ತ್ರಿಪಕ್ಷೀಯ ಮಾತುಕತೆ, ಮುಷ್ಕರ ಹಕ್ಕು. ಸಮರ್ಪಕ ವೇತನ, ಸಾಮಾಜಿಕ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ, ಬೋನಸ್, ಗ್ರಾಚ್ಯುಟಿ ಮತ್ತು ಪಿಂಚಣಿ ಹಕ್ಕುಗಳಿಗಾಗಿ ಹೋರಾಟ ನಡೆಸಿ ಈ ಹಕ್ಕುಗಳನ್ನು ಗಳಿಸಿದೆ. 1926ರ ಟ್ರೇಡ್ ಯೂನಿಯನ್ ಕಾಯ್ದೆಯ ಮೂಲಕ ಸಂಘಟನೆಯ ಹಕ್ಕು ಕಾನೂನೀಕರಿಸಲಾಯಿತು.
ಬ್ರಿಟಿಷ ಕಾಲದಲ್ಲಿ ಐದು ಕಾನೂನುಗಳು ಮತ್ತು ಸ್ವಾತಂತ್ರ್ಯನಂತರ ಸಂಸತ್ತಿನ ಮೂಲಕ ಒಟ್ಟು 44 ಕೇಂದ್ರ ಕಾನೂನುಗಳು ಹಾಗೂ ರಾಜ್ಯ ಮಟ್ಟದಲ್ಲಿ ಸುಮಾರು 150 ಕಾನೂನುಗಳು ರೂಪಗೊಂಡಿವೆ. ಇವೆಲ್ಲವೂ ಸುಮಾರು 150 ವರ್ಷಗಳ ಹೋರಾಟದ ಫಲ. ಆದರೆ, ಈ ಎಲ್ಲಾ ಸಾಧನೆಗಳನ್ನು ಈಗಿನ ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರಚಿಸುವ ಮೂಲಕ ಅವೆಲ್ಲವನ್ನೂ ಹಿಂಪಡೆಯಲು ಪ್ರಯತ್ನಿಸುತ್ತಿದೆ.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡ ಭೀಮರಾಯ ಪೂಜಾರಿ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.
ಸುನಂದಾ ನಾಯಕ, ಸುಮಂಗಲಾ ಆನಂದಶೆಟ್ಟಿ ಮಾತನಾಡಿದರು.
ಈ ಸಂದರ್ಭದಲ್ಲಿ ನಾರಾಯಣ ಬಡಿಗೇರ, ಲಾಲಹ್ಮದ ಶೇಖ, ಚಂದ್ರಶೇಖರ ವಾಲಿಕಾರ, ಎಂ.ಎಸ್.ಕೊಂಡಗೂಳಿ, ಸುರೇಖಾ ವಾಗ್ಮೋರೆ, ಸುವರ್ಣ ಹಲಗಣಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.