Home ಜಿಲ್ಲೆ ಆನ್‌ಲೈನ್‌ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ೨,೩೦೦ ಪತ್ರಕರ್ತರ ನೋಂದಣಿಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ

ಆನ್‌ಲೈನ್‌ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ೨,೩೦೦ ಪತ್ರಕರ್ತರ ನೋಂದಣಿಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ

ಬೀದರ್: ಮಾ.೩೧:ನಗರದಲ್ಲಿ ಏ. ೧೧ ಹಾಗೂ ೧೨ ರಂದು ಹಮ್ಮಿಕೊಳ್ಳಲಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ೪೦ನೇ ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ ನಡೆದಿದೆ.
ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಅರಣ್ಯ, ಪರಿಸರ, ಜೀವಶಾಸ್ತ್ರ ಹಾಗೂ ಬೀದರ್ ಜಿಲ್ಲಾ
ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮ್ಮೇಳನವನ್ನು ಮಾದರಿಯಾಗಿ ಸಂಘಟಿಸಲು ಸ್ವಾಗತ ಸಮಿತಿ, ಹಿರಿಯರು ಹಾಗೂ ಮಾಜಿ ಜಿಲ್ಲಾ ಅಧ್ಯಕ್ಷರ ಸಲಹಾ ಸಮಿತಿ, ಪೋಷಕರ ಸಮಿತಿ, ವಸತಿ ಸಮಿತಿ, ಆಹಾರ ಸಮಿತಿ, ಸಾರಿಗೆ ಸಮಿತಿ, ಪ್ರಚಾರ ಸಮಿತಿ, ಮೆರವಣಿಗೆ ಸಮಿತಿ, ಪ್ರತಿನಿಧಿಗಳ ನೋಂದಣಿ ಮತ್ತು ಕಿಟ್ ವಿತರಣೆ ಸಮಿತಿ, ವೇದಿಕೆ ಅಲಂಕಾರ ಹಾಗೂ ನಿರ್ವಹಣಾ ಸಮಿತಿ, ಶಿಸ್ತು ಪಾಲನೆ ಮತ್ತು ಸ್ವಯಂ ಸೇವಕರ ಸಮಿತಿ, ಛಾಯಾಚಿತ್ರ ಪ್ರದರ್ಶನ ಸಮಿತಿ, ವಸ್ತು ಪ್ರದರ್ಶನ, ಮಾರಾಟ ಮಳಿಗೆಗಳ ಸಮಿತಿ, ಸಾಂಸ್ಕೃತಿಕ ಸಮಿತಿ, ಮಹಿಳಾ ಸಮಿತಿ, ಆರೋಗ್ಯ ಸಮಿತಿ, ಅತಿಥಿ ಸತ್ಕಾರ ಸಮಿತಿ, ಸ್ಮರಣ ಸಂಚಿಕೆ ಮುದ್ರಣ ಸಮಿತಿ, ಪ್ರವಾಸ ಸಮಿತಿ ಸೇರಿ ೧೮ ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು, ಮಾಜಿ ರಾಜ್ಯ ಉಪಾಧ್ಯಕ್ಷ ಭವಾನಿ ಸಿಂಗ್ ಠಾಕೂರ್, ಜಿಲ್ಲಾ ಅಧ್ಯಕ್ಷ ಆನಂದ ದೇವಪ್ಪ, ಪ್ರಮುಖರಾದ ಅಪ್ಪಾರಾವ್ ಸೌದಿ ಹಾಗೂ ಶಿವಾನಂದ ಸ್ವಾಮಿ ಅವರ ನೇತೃತ್ವದಲ್ಲಿ ಎರಡು ದಿನ ಸಮಿತಿಗಳ ಸಭೆ ನಡೆದಿದ್ದು, ಸಮಿತಿಗಳ ಪದಾಧಿಕಾರಿಗಳು ಸಿದ್ಧತಾ ಕಾರ್ಯಗಳಲ್ಲಿ ನಿರತರಾಗಿದ್ದಾರೆ.
ರಾಜ್ಯದ ಪತ್ರಕರ್ತರ ಸಮಾಗಮಕ್ಕೆ ಸಮ್ಮೇಳನ ವೇದಿಕೆ ಒದಗಿಸಲಿದೆ. ವಿವಿಧೆಡೆಯಿಂದ ಸಮ್ಮೇಳನಕ್ಕೆ ಬರುವ ಪತ್ರಕರ್ತರಿಗೆ ವಸತಿ, ಆಹಾರ ಸೇರಿದಂತೆ ಯಾವುದೇ ರೀತಿಯಿಂದ ತೊಂದರೆಯಾಗದAತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ರಾಜ್ಯದ ಸಚಿವರು, ವಿರೋಧ ಪಕ್ಷದ ನಾಯಕರು ಹಾಗೂ ಗಣ್ಯರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ವೇದಿಕೆ ಸಮಾರಂಭ ಅರ್ಥಪೂರ್ಣವಾಗಿಸುವ ದಿಸೆಯಲ್ಲಿ ತಯಾರಿಗಳು ನಡೆದಿವೆ. ಜಿಲ್ಲೆಯ ಪತ್ರಕರ್ತರು ಸಮ್ಮೇಳನದ ಯಶಸ್ವಿಗೆ ಸಹಕರಿಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ದೇವಪ್ಪ, ಅಡಾಕ್ ಸಮಿತಿ ಸದಸ್ಯರಾದ ಅಪ್ಪಾರಾವ್ ಸೌದಿ ಹಾಗೂ ಶಿವಕುಮಾರ ಸ್ವಾಮಿ ಮನವಿ ಮಾಡಿದ್ದಾರೆ.

ಪತ್ರಕರ್ತರ ನೋಂದಣಿ: ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಪತ್ರಕರ್ತರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಮ್ಮೇಳನದಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧೆಡೆಯ ೨,೩೦೦ ಪತ್ರಕರ್ತರು ಆನ್‌ಲೈನ್‌ನಲ್ಲಿ ಹೆಸರು ನೋಂದಣಿ ಮಾಡಿಸಿದ್ದಾರೆ.
ಆನ್‌ಲೈನ್ ನೋಂದಣಿ ದಿನಾಂಕ ಮುಕ್ತಾಯಗೊಂಡಿದ್ದು, ಪತ್ರಕರ್ತರು ಏ. ೧೧ ರಂದು ನೇರವಾಗಿ ಆಗಮಿಸಿ, ಹೆಸರು ನೋಂದಾಯಿಸಿ ಸಮ್ಮೇಳನದಲ್ಲಿ ಪಾಲ್ಗೊಳ್ಳಬಹುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಆನಂದ ದೇವಪ್ಪ ತಿಳಿಸಿದ್ದಾರೆ.

ಆಹ್ವಾನ: ಬಸವಕಲ್ಯಾಣ ತಾಲ್ಲೂಕಿನ ಹಾರಕೂಡ ಮಠದಲ್ಲಿ ಮಠದ ಅಧಿಪತಿ ಚನ್ನವೀರ ಶಿವಾಚಾರ್ಯರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಸೋಮವಾರ ಸಮ್ಮೇಳನಕ್ಕೆ ಆಹ್ವಾನ ನೀಡಿದರು.

ಸಚಿವರೊಂದಿಗೆ ಚರ್ಚೆ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಪತ್ರಕರ್ತರು ಭಾಲ್ಕಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರೊಂದಿಗೆ ಸಮ್ಮೇಳನ ಸಿದ್ಧತೆ ಕುರಿತು ಚರ್ಚೆ ನಡೆಸಿದರು.