Home ಜಿಲ್ಲೆ ಬೆಂಗಳೂರು ಶಿಕ್ಷಣದ ಜೊತೆಗೆ ಬದುಕಿನ ಮೌಲ್ಯಗಳ ಕಲಿಕೆ ಅಗತ್ಯ

ಶಿಕ್ಷಣದ ಜೊತೆಗೆ ಬದುಕಿನ ಮೌಲ್ಯಗಳ ಕಲಿಕೆ ಅಗತ್ಯ

ಗೌರಿಬಿದನೂರು, ಮಾ.೩೧- ಆಧುನಿಕ ಜಗತ್ತಿನಲ್ಲಿ ಮಕ್ಕಳ ಶಿಕ್ಷಣ ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗದೆ ಭವಿಷ್ಯಕ್ಕೆ ಆಸರೆಯಾಗುವ ಮೌಲ್ಯಗಳನ್ನು ಕಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ ಎಂದು ಹಿರಿಯ ಕೆಎಎಸ್ ಅಧಿಕಾರಿ ಬಿ.ಎನ್. ವರಪ್ರಸಾದರೆಡ್ಡಿ ತಿಳಿಸಿದರು.


ನಗರದ ಹೊರವಲಯದ ಕಲ್ಲೂಡಿ ಸಮೀಪದಲ್ಲಿರುವ ಸ್ವರ್ಣಗೌರಿ ಕಲ್ಯಾಣ ಮಂಟಪದಲ್ಲಿ ಯುರೋ ಕಿಡ್ಸ್ ವತಿಯಿಂದ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಭವಿಷ್ಯದಲ್ಲಿ ಗೌರಿಬಿದನೂರು ತಾಲ್ಲೂಕಿಗೆ ಉಜ್ವಲವಾದ ಭವಿಷ್ಯವಿದ್ದು, ಈ ನೆಲದಲ್ಲಿ ಹುಟ್ಟಿ ಬೆಳೆದ ಮಕ್ಕಳೇ ಅದೃಷ್ಟವಂತರಾಗಿದ್ದಾರೆ. ಪ್ರತೀ ಪೋಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಕಲಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಯುರೋ ಕಿಡ್ಸ್ ಶಾಲೆಯ ಆಡಳಿತ ಮಂಡಳಿಯು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಈ ಸಂಸ್ಥೆಯ ಬಗ್ಗೆ ತಮ್ಮಲ್ಲಿರುವ ಭರವಸೆ ಈಡೇರುವ ನಿರೀಕ್ಷೆ ನಮ್ಮೆಲ್ಲರದ್ದಾಗಿದೆ. ಇಂತಹ ಸಮಾಜಮುಖಿ ಶೈಕ್ಷಣಿಕ ಸಂಸ್ಥೆಗಳನ್ನು ಪ್ರೋತ್ಸಾಹ ಮಾಡುವ ಮೂಲಕ ಈ ನೆಲದ ಮೌಲ್ಯವನ್ನು ಎಲ್ಲೆಡೆ ಪಸರಿಸಬೇಕಾಗಿದೆ ಎಂದು ಹೇಳಿದರು.


ಜಿ.ಪಂ ಮಾಜಿ ಅಧ್ಯಕ್ಷರಾದ ಸಿ.ಆರ್.ನರಸಿಂಹಮೂರ್ತಿ ಮಾತನಾಡಿ, ಈ ಭಾಗದ ಪೋಷಕರಿಗೆ ಮತ್ತು ಅವರ ಮಕ್ಕಳಿಗೆ ನಗರದಲ್ಲಿ ಆಸರೆಯಾಗಿರುವ ಯುರೋ ಕಿಡ್ಸ್ ಪೂರ್ವ ಪ್ರಾಥಮಿಕ ಶಾಲೆಯ ಕಾರ್ಯ ಶ್ಲಾಘನೀಯವಾಗಿದೆ. ಮಕ್ಕಳಿಗೆ ಬಾಲ್ಯದಿಂದಲೇ ಶಿಕ್ಷಣದ ಜೊತೆಗೆ ಜೀವನದ ಮೌಲ್ಯಗಳನ್ನು ಕಲಿಸುವ ಪ್ರಯತ್ನ ಮಾಡಬೇಕಾಗಿದೆ. ಪೋಷಕರ ಪಾಲಿಗೆ ವರದಾನವಾಗಿರುವ ಮಕ್ಕಳ ಉಜ್ವಲ ಭವಿಷ್ಯವು ಯುರೋ ಕಿಡ್ಸ್ ಶಾಲೆಯಿಂದ ಆರಂಭವಾಗುವ ಭರವಸೆ ನಮ್ಮೆಲ್ಲರದ್ದಾಗಿದೆ. ಈ ನಿಟ್ಟಿನಲ್ಲಿ ಇಲ್ಲಿನ ಶಿಕ್ಷಕರು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.


ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರಾದ ಬ್ರಹ್ಮೇಶ್ ಮಾತನಾಡಿ, ಈ ಭಾಗದ ಮಕ್ಕಳಿಗೆ ಶಿಕ್ಷಣದ ಜೊತೆಯಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ಭವಿಷ್ಯಕ್ಕೆ ಆಸರೆಯಾಗುವ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸುವ ಪುಟ್ಟ ಪ್ರಯತ್ನವೂ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಪೋಷಕರ ಆಶಯದಂತೆ ನಮ್ಮ ಸಂಸ್ಥೆಯ ಮಾರ್ಗದರ್ಶನದಲ್ಲಿ ಮಕ್ಕಳ ಭವಿಷ್ಯಕ್ಕೆ ನೆರವಾಗುವ ಮೌಲ್ಯ ಶಿಕ್ಷಣವನ್ನು ನೀಡಲಾಗುತ್ತಿದೆ. ಇದರೊಂದಿಗೆ ಪ್ರಕೃತಿಯಲ್ಲಿನ ನೈಜ ಅನುಭವವನ್ನು ಮಕ್ಕಳ ಬದುಕಿಗೆ ಪರಿಚಯಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.


ವೇದಿಕೆಯಲ್ಲಿ ಶಾಲೆಯ ಪುಟಾಣಿ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಜ್ಜೆ ಹಾಕುವ ಮೂಲಕ ಪ್ರೇಕ್ಷಕರ ಮನಸೋರೆಗೊಂಡರು.


ಶೈಕ್ಷಣಿಕ ಪ್ರಗತಿ ಸಾಧಿಸಿದ ಮಕ್ಕಳಿಗೆ ಗಣ್ಯರಿಂದ ಪ್ರಶಸ್ತಿ ಪತ್ರ ನೀಡಿ ಅಭಿನಂಧಿಸಿದರು.


ಸಮಾರಂಭದಲ್ಲಿ ಹಿರಿಯ ಶೈಕ್ಷಣಿಕ ಮಾರ್ಗದರ್ಶಕರಾದ ಮೀನಾಕ್ಷಿ ಆಲೂರ್, ಸೇರಿದಂತೆ ಶಾಲಾ ಆಡಳಿತ ಮಂಡಳಿಯ ನಿರ್ದೇಶಕರಾದ ನರಸಿಂಹಮೂರ್ತಿ, ಶಾಲೆಯ ಶಿಕ್ಷಕಿಯರು ಮತ್ತು ಪೋಷಕರು ಭಾಗವಹಿಸಿದ್ದರು.