Home ಜಿಲ್ಲೆ ಬೆಂಗಳೂರು ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆಗೆ ಸಿದ್ಧತೆ

ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆಗೆ ಸಿದ್ಧತೆ

ಕೋಲಾರ,ಮಾ,೨೮-ಭಾರತದ ಮಾಜಿ ಉಪಪ್ರಧಾನಿ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ಅವರ ೧೧೯ನೇ ಜನ್ಮದಿನಾಚರಣೆಯನ್ನು ಇದೇ ಏಪ್ರಿಲ್ ೫ ರಂದು ಜಿಲ್ಲೆಯಾದ್ಯಂತ ಅತ್ಯಂತ ಅರ್ಥಪೂರ್ಣವಾಗಿ ಮತ್ತು ಸಡಗರದಿಂದ ಆಚರಿಸಲು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಅಧಿಕಾರಿಗಳಿಗೆ ಹಾಗೂ ಸಂಘಟನಾ ಮುಖಂಡರಿಗೆ ಕರೆ ನೀಡಿದರು.


ನಗರ ಹೊರವಲಯದ ಜಿಲ್ಲಾಧಿ ಕಾರಿಗಳ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಈ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ.ನಗರದ ಪ್ರಮುಖ ರಸ್ತೆಗಳಲ್ಲಿ ಬಾಬು ಜಗಜೀವನ್ ರಾಮ್ ಅವರ ಜೀವನ ಮತ್ತು ಸಾಧನೆಗಳನ್ನು ಬಿಂಬಿಸುವ ಆಕಷಕ ಸ್ತಬ್ಧಚಿತ್ರಗಳೊಂದಿಗೆ ಮೆರವಣಿಗೆ ನಡೆಸಲಾಗುವುದು. ಪ್ರತಿ ಗ್ರಾಮ ಪಂಚಾಯತ್ ಮಟ್ಟದಿಂದಲೂ ಸ್ತಬ್ಧಚಿತ್ರಗಳು ಪಾಲ್ಗೊಳ್ಳುವಂತೆ ಕ್ರಮ ವಹಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ಸೂಚಿಸಿದರು.


ನಗರದ ಚನ್ನಯ್ಯ ರಂಗಮಂದಿರದಲ್ಲಿ ಸಭಾ ಕಾರ್ಯಕ್ರಮ ಕೈಗೊಳ್ಳಲಾಗುವುದು. ಜಯಂತಿಯ ಅಂಗವಾಗಿ ಶಾಲಾ-ಕಾಲೇಜುಗಳಲ್ಲಿ ಬಾಬುಜೀ ಅವರ ಜೀವನ ಚರಿತ್ರೆಯ ಕುರಿತು ವಿಶೇಷ ಉಪನ್ಯಾಸ ಹಾಗೂ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲು ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಲಾಯಿತು.


ಸಮಾಜದ ಹಾಗೂ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಸನ್ಮಾನಿಸಲು ನಿರ್ಧರಿಸಲಾಯಿತು.
ಜಯಂತಿಯ ದಿನದಂದು ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಲು ಅಬಕಾರಿ ಇಲಾಖೆಗೆ ಸೂಚನೆ ನೀಡಲಾಯಿತು.


ಬಾಬು ಜಗಜೀವನ್ ರಾಮ್ ಭವನದ ಉದ್ಘಾಟನೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.


“ಬಾಬು ಜಗಜೀವನ್ ರಾಮ್ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ, ಅವರು ಇಡೀ ರಾಷದ ನಾಯಕರು. ಅವರ ತ್ಯಾಗ ಮತ್ತು ದೇಶಕ್ಕೆ ನೀಡಿದ ಕೊಡುಗೆಯನ್ನು ಯುವ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಡಾ. ಎಂ.ಆರ್. ರವಿ ಅವರು ಅಭಿಪ್ರಾಯಪಟ್ಟರು.


ಸಭೆಯಲ್ಲಿ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್ ಪಿ ಬಾಗೇವಾಡಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷಧಿಕಾರಿ ಹೆಚ್. ಸಿ. ಜಗದೀಶ್, ಅಪರ ಜಿಲ್ಲಾಧಿಕಾರಿ ಎಸ್. ಎಂ. ಮಂಗಳ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸನ್ ಹಾಗೂ ವಿವಿಧ ದಲಿತ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದು, ಆಚರಣೆಯನ್ನು ಯಶಸ್ವಿಗೊಳಿಸಲು ಹಲವು ರಚನಾತ್ಮಕ ಸಲಹೆಗಳನ್ನು ನೀಡಿದರು.