
ಮರ್ಕಾಪುರಂ(ಆಂಧ್ರ ಪ್ರದೇಶ):ಮಾ.೨೬-ಆಂಧ್ರಪ್ರದೇಶದ ಮಾರ್ಕಪುರಂ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಾಯವರಂ ಬಳಿಯ ಪಲಕಲಾ ಎಂಬಲ್ಲಿ ಟಿಪ್ಪರ್ ಲಾರಿ ಮತ್ತು ಖಾಸಗಿ ಬಸ್ ಡಿಕ್ಕಿಯಾಗಿ ಬಸ್‌ನಲ್ಲಿದ್ದ ೧೪ ಮಂದಿ ಸಜೀವ ದಹನವಾಗಿದ್ದಾರೆ. ಡಿಕ್ಕಿಯ ರಭಸಕ್ಕೆ ವಾಹನಗಳು ಹೊತ್ತಿ ಉರಿದಿವೆ.
ಇಂದು ಬೆಳಗಿನ ಜಾವ ಈ ಭೀಕರ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ೧೫ ಮಂದಿ ಗಾಯಗೊಂಡಿದ್ದಾರೆ.ಬಸ್ ಮತ್ತು ಟಿಪ್ಪರ್ ಎರಡೂ ಸಂಪೂರ್ಣ ಸುಟ್ಟು ಕರಕಲಾಗಿವೆ. ಗಾಯಾಳುಗಳನ್ನು ಮಾರ್ಕಾಪುರಂನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬಸ್ ಹರಿಕೃಷ್ಣ ಟ್ರಾವೆಲ್ಸ್‌ಗೆ ಸೇರಿದ್ದೆಂದು ಗುರುತಿಸಲಾಗಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.
ಹೈದರಾಬಾದ್‌ನಿಂದ ಪಾಮುರು ಕಡೆಗೆ ಸಂಚರಿಸುತ್ತಿದ್ದ ಬಸ್ ಪಲಕಲಾ ಕ್ವಾರಿಗಳ ಬಳಿ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ಸಮಯದಲ್ಲಿ ಬಸ್‌ನಲ್ಲಿ ಸುಮಾರು ೩೦ ಪ್ರಯಾಣಿಕರು ಇದ್ದರು ಎಂದು ತಿಳಿದು ಬಂದಿದೆ. ಬಸ್‌ನಲ್ಲಿ ಹಿಂಭಾಗ ಕುಳಿತಿದ್ದ ಹಲವರು ಸಾವನ್ನಪ್ಪಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.
ಶಾಸಕ ಕಂದುಲ ನಾರಾಯಣ ರೆಡ್ಡಿ, ಮಾರ್ಕಾಪುರಂ ಜಂಟಿ ಕಲೆಕ್ಟರ್ ಶ್ರೀನಿವಾಸುಲು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ನಾಯ್ಡು ದಿಗ್ಬಮೆ:
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಅಪಘಾತಕ್ಕೆ ತೀವ್ರ ದು:ಖ ವ್ಯಕ್ತಪಡಿಸಿದ್ದಾರೆ. ಬಸ್‌ನಲ್ಲಿದ್ದ ಹಲವಾರು ಪ್ರಯಾಣಿಕರು ಜೀವಂತವಾಗಿ ಸುಟ್ಟು ಹೋಗಿರುವುದು ತೀವ್ರ ದುಃಖ ತಂದಿದೆ. ಬಸ್ ತೆಲಂಗಾಣದ ನಿರ್ಮಲ್‌ನಿಂದ ನೆಲ್ಲೂರಿಗೆ ಪ್ರಯಾಣಿಸುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗಾಯಾಳುಗಳಿಗೆ ಸಾಧ್ಯವಾದಷ್ಟು ಉತ್ತಮ ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದೇನೆ. ಅಪಘಾತದ ಕಾರಣಗಳ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಲಾಗಿದ್ದು, ಆದಷ್ಟು ಬೇಗ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
























