
ಕೋಲಾರ,ಮಾ,೨೬- ಕೆ.ಸಿ.ವ್ಯಾಲಿ ಯೋಜನೆಯ ನೀರನ್ನು ಮೂರು ಬಾರಿ ಸಂಸ್ಕರಿಸಿ ಕೆರೆಗಳಿಗೆ ಹರಿಸಿ ಎಂಬ ಜಿಲ್ಲೆಯ ಜನರ ಬೇಡಿಕೆಯನ್ನು ಸರ್ಕಾರ ಪರಿಗಣಿಸದೇ ಕಡೆಗಣಿಸುತ್ತಿರುವುದು ಮತ್ತು ಎರಡು ಬಾರಿಯ ಶುದ್ದೀಕರಣವೇ ಸಾಕು ಎಂದು ಸಮರ್ಥಿಸಿಕೊಳ್ಳುತ್ತಿರುವುದು ಜಿಲ್ಲೆಗೆ ಮಾಡುತ್ತಿರುವ ಮಹಾ ದ್ರೋಹ ಎಂದು ನೀರಾವರಿ ಹೋರಾಟ ಸಮಿತಿಯ ಸಂಚಾಲಕ ವಿ.ಕೆ.ರಾಜೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಯೋಜನೆಯು ಜಿಲ್ಲೆಯ ಕೆರೆಗಳಿಗೆ ತುಂಬಿಸಿ ಅಂತರ್ಜಲಮಟ್ಟ ಸುಧಾರಣೆಗಾಗಿ ಮಾತ್ರ ಈ ನೀರನ್ನು ಕೆರೆಗಳಿಗೆ ಹರಿಸುತ್ತಿದ್ದೇವೆ ಎಂದು ನ್ಯಾಯಾಲಯಕ್ಕೆ ಸಮರ್ಥಿಸಿಕೊಂಡ ಸರ್ಕಾರ ಜಿಲ್ಲೆಯಲ್ಲಿನ ಕೃಷಿ ಬೆಳೆಗಳಲ್ಲಿನ ವಿಷಕಾರಿ ಅಂಶ ಜನರನ್ನು ಆತಂಕಕ್ಕೀಡುಮಾಡಿದೆ.
ಜಿಲ್ಲೆಯಲ್ಲಿ ಯಾವುದೇ ನದಿ ಮೂಲಗಳಿಲ್ಲದ ನಾವು ಕೇವಲ ಅಂತರ್ಜಲವನ್ನೆ ಬಳಸಿಕೊಂಡು ಕೊಳವೆ ಬಾವಿಗಳ ಮುಖಾಂತರ ಕುಡಿಯಲು ಮತ್ತು ಕೃಷಿಗೆ ಬಳಸುತ್ತಿದ್ದೇವೆ ಎಂಬುದು ಸಮರ್ಥಿಸಿಕೊಂಡ ಜನಪ್ರನಿಧಿಗಳು ಮರೆತು ಮಾತನಾಡುತ್ತಿದ್ದಾರೆ. ಮತ್ತು ಇವರ್‍ಯಾರೂ ಜಿಲ್ಲೆಯಲ್ಲಿ ವಾಸ್ತವ್ಯವನ್ನು ಹೂಡಿರುವುದಿಲ್ಲ. ಹಾಗಾಗಿ ಸ್ಥಳೀಯ ಜನರ ಸಮಸ್ಯೆಗಳಿಗೆ ಕಿವಿಗೊಡುತ್ತಿಲ್ಲ.
ರಾಷ್ಟ್ರೀಯ ಹಸಿರು ಪೀಠದ (ಔಂ ೬೭೩/೨೦೧೮) ಆದೇಶದಲ್ಲಿ ಬಹಳ ಸ್ಪಷ್ಟವಾಗಿ ಕೊಳಚೆ ಮತ್ತು ಕೈಗಾರಿಕಾ ನೀರನ್ನು ನೂರಕ್ಕೆ ನೂರರಷ್ಟು ಶುದ್ದೀಕರಿಸಿ ಕೆರೆಗಳಿಗೆ ಹರಿಸಬೇಕೆಂಬ ಆದೇಶವಿದ್ದರೂ ಮತ್ತು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಮರೆತು ಎರಡು ಬಾರಿಯ ಶುದ್ದೀಕರಣದ ನೀರೇ ಸಾಕೆಂದು ಜನಾಭಿಪ್ರಾಯಕ್ಕೆ ಬೆಲೆಕೊಡದೆ ತಮ್ಮ ನಿಲುವನ್ನು ಪ್ರದರ್ಶಿಸುತ್ತಿದ್ದಾರೆ. ಬಹುತೇಕ ಜಿಲ್ಲೆಯ ಜನಪ್ರನಿಧಿಗಳಿಗೆ ಮೂರನೇ ಹಂತದ ಶುದ್ದೀಕರಣ ಅಗತ್ಯವಿದೆ ಎಂದು ಮನದಟ್ಟಾಗಿದೆ. ತಮ್ಮ ಮನದಾಳವನ್ನು ಬಿಚ್ಚಿಟ್ಟಿದ್ದಾರೆ. ಅದರಲ್ಲಿ ಶ್ರೀನಿವಾಸಪುರದ ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ರವರು ತಮ್ಮ ನಿಲುವನ್ನು ಬದಲಾಯಿಸಿ ಮೂರನೇ ಹಂತದ ಶುದ್ಧೀಕರಣ ಅಗತ್ಯವೆಂಬುದನ್ನು ಪ್ರತಿಪಾದಿಸಿ ಮುಖ್ಯಮಂತ್ರಿಗಳ ಮೇಲೆ ಬಜೆಟ್‌ನಲ್ಲಿ ಹಣ ಮೀಸಲಿಡಬೇಕೆಂದು ಒತ್ತಾಯ ಮಾಡಿದ್ದರು. ಹಿರಿಯ ಶಾಸಕರ ಮನವಿಯನ್ನು ಸರ್ಕಾರ ಪರಿಗಣಿಸಲಿಲ್ಲ.
ಸರ್ಕಾರ ಕೇವಲ ಎರಡು ಹಂತಗಳಲ್ಲಿ ಸಂಸ್ಕರಿಸಿದ ನೀರನ್ನು ಹರಿಸುತ್ತಿದೆ. ಈ ನೀರಿನಲ್ಲಿ ಕಣ್ಣಿಗೆ ಕಾಣದ ಅಪಾಯಕಾರಿ ಬ್ಯಾಕ್ಟೀರಿಯಾಗಳು ಮತ್ತು ರಾಸಾಯನಿಕ ಅಂಶಗಳು ಉಳಿದುಕೊಂಡಿವೆ. ಇಡೀ ಜಿಲ್ಲೆಯ ಜನರು ’ಮೂರನೇ ಹಂತದ ಶುದ್ಧೀಕರಣ’ ಬೇಕು ಎಂದು ಕೇಳುತ್ತಿದ್ದರೆ, ಸರ್ಕಾರ ಅದನ್ನು ನಿರಾಕರಿಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಕೇವಲ ಅಂಕಿ-ಅಂಶಗಳ ಆಟ ಆಡಿ ಜನರ ಜೀವದ ಜೊತೆ ಚೆಲ್ಲಾಟವಾಡುವುದು ಬಿಡಬೇಕು.
ಸರ್ಕಾರದ ವಿಜ್ಞಾನಿಗಳು ಮತ್ತು ಸಚಿವರು ಈ ನೀರು ಸುರಕ್ಷಿತ ಎನ್ನುವುದಾದರೆ, ಅವರೇ ಮೊದಲು ಈ ನೀರನ್ನು ಕುಡಿದು ಅಥವಾ ತಮ್ಮ ಮನೆಯ ಬಳಕೆಗೆ ಉಪಯೋಗಿಸಿ ಜಿಲ್ಲೆಯ ಜನರಿಗೆ ಮಾದರಿಯಾಗಲಿ ಎಂಬುದು ಜನರ ಆಶಯ. ಪ್ರಜಾಪ್ರಭುತ್ವದಲ್ಲಿ ಜನರ ತೆರಿಗೆ ಹಣದಿಂದ ಮೂರು ಹಂತದ ಶುದ್ದೀಕರಣ ಮಾಡಿ ಎಂಬುದು ತೆರಿಗೆದಾರರ ನಿಲುವಾಗಿದ್ದು, ಈಡೇರಿಸಬೇಕಾದ ಕರ್ತವ್ಯ ಸರ್ಕಾರ ಮತ್ತು ಜನಪ್ರತಿನಿಧಿಗಳದ್ದಾಗಿದೆ.






















