Home ಜಿಲ್ಲೆ ಹೊಮಿಯೊಪತಿ-ಅಯುರ್ವೇದ ವೈದ್ಯರ ಹುದ್ದೆ ಭರ್ತಿ ಮಾಡಿ: ಡಾ.ಬೆಲ್ದಾಳೆ

ಹೊಮಿಯೊಪತಿ-ಅಯುರ್ವೇದ ವೈದ್ಯರ ಹುದ್ದೆ ಭರ್ತಿ ಮಾಡಿ: ಡಾ.ಬೆಲ್ದಾಳೆ

ಬೀದರ್ :ಮಾ.೨೫: ಆಯುರ್ವೇದ ಹಾಗೂ ಹೋಮಿಯೋಪಥಿ ವೈದ್ಯರ ಹುದ್ದೆಗಳನ್ನು ಸೃಜಿಸಿ, ಅವುಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕು ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ನೂತನ ಸರ್ಕಾರಿ ಹೋಮಿಯೋಪಥಿ ಕಾಲೇಜು ಪ್ರಾರಂಭಿಸಬೇಕು ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ವಿಧಾನ ಸಭಾ ಅಧಿವೇಶನದಲ್ಲಿ ಮಾತನಾಡಿ ಗಮನ ಸೆಳೆದರು.

ಆಯುಷ್ ಇಲಾಖೆಯು ಪ್ರತಿ ಹೋಬಳಿ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಹೋಮಿಯೋಪಥಿ ಮತ್ತು ಆಯುರ್ವೇದ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸುವುದು ಅತ್ಯಂತ ಅವಶ್ಯಕವಾಗಿದೆ. ಗ್ರಾಮೀಣ ಹಾಗೂ ದೂರದ ಪ್ರದೇಶಗಳಲ್ಲಿ ಸಮರ್ಪಕ ಆರೋಗ್ಯ ಸೇವೆಗಳ ಕೊರತೆ ಇರುವುದರಿಂದ, ಈ ಪರ್ಯಾಯ ವೈದ್ಯಕೀಯ ಪದ್ಧತಿಗಳನ್ನು ಬಲಪಡಿಸುವುದು ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲವನ್ನು ಕಲ್ಪಿಸಲಿದೆ ಎಂದು ತಿಳಿಸಿದರು.

ಆಯುರ್ವೇದ ಹಾಗೂ ಹೋಮಿಯೋಪಥಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಆಯುರ್ವೇದ ವೈದ್ಯರು ಹಾಗೂ ತಜ್ಞ ವೈದ್ಯರ ಹುದ್ದೆಗಳನ್ನು ಸೃಜಿಸಿ, ಅವುಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕು. ವಿಶೇಷವಾಗಿ, ಎಂ.ಬಿ.ಬಿ.ಎಸ್. ಪದವೀಧರ ವೈದ್ಯರು ಸೇವೆಗೆ ಮುಂದೆ ಬಾರದ ಪ್ರದೇಶಗಳಲ್ಲಿ ಬಿ.ಹೆಚ್.ಎಂ.ಎಸ್. ಮತ್ತು ಬಿ.ಎ.ಎಂ.ಎಸ್. ಪದವೀಧರರನ್ನು ನೇಮಕಾತಿ ಮಾಡುವ ಮೂಲಕ ಆರೋಗ್ಯ ಸೇವೆಗಳ ಲಭ್ಯತೆಯನ್ನು ಹೆಚ್ಚಿಸಬಹುದು.

ಇದಲ್ಲದೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ನೂತನ ಸರ್ಕಾರಿ ಹೋಮಿಯೋಪಥಿ ಹಾಗೂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯವನ್ನು ಪ್ರಾರಂಭಿಸುವುದು ಬಹಳ ಅಗತ್ಯವಾಗಿದೆ. ಇದರಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣಾವಕಾಶಗಳು ಲಭ್ಯವಾಗುವುದರ ಜೊತೆಗೆ, ಪ್ರದೇಶದ ಆರೋಗ್ಯ ವ್ಯವಸ್ಥೆಯೂ ಮತ್ತಷ್ಟು ಬಲಗೊಳ್ಳಲಿದೆ.

ಈ ಎಲ್ಲ ವಿಷಯಗಳ ಕುರಿತು ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಗಮನ ಸೆಳೆದು, ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಶಾಸಕರು ವಿನಂತಿಸಿದರು.