
ಬೆಂಗಳೂರು,ಮಾ.೨೪-ಎಂಡಿಎಂಎ, ಗಾಂಜಾ ಮಾರಾಟ ಸಾಗಾಣೆ ಮಾಡುತ್ತಿದ್ದ ಓರ್ವ ಸೇರಿ ಐವರು ಡ್ರಗ್ ಫೆಡ್ಲರ್ ನನ್ನು ಬಂಧಿಸಿರುವ ಸಿಸಿಬಿ ಪೊಲೀಸರು ೧೧.೪ ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.
ಬಂಧಿತ ಆರೋಪಿಗಳಿಂದ ೩ ಕೆ.ಜಿ ೯೧೨ ಗ್ರಾಂ ಎಂಡಿಎಂಎ, ೩೪೩ ಕೆ.ಜಿ ೧೭೦ ಗ್ರಾಂ ಗಾಂಜಾ, ೧ ಟಾಟಾ ಐಚರ್ ಗೂಡ್ಸ್ ವಾಹನ ಹಾಗೂ
೧ ಮೊಬೈಲ್ ಸೇರಿ ೧೧.೪ ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳಿಗೆ ಮೈಸೂರು ರಸ್ತೆಯ ನಾಯಂಡಹಳ್ಳಿ ಸಿಗ್ನಲ್ ಬಳಿ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಸಾಗಿಸುತ್ತಿರುವ ಉಪ್ಪಾರಪೇಟೆನ ಆರ್ ಕೆ ಪುರಂನ ಲಾಡ್ಜ್ ವೊಂದರಲ್ಲಿ ಹಾಗೂ ಚನ್ನಸಂದ್ರ ಮುಖ್ಯ ರಸ್ತೆಯಲ್ಲಿ ನಿಷೇಧಿತ ಮಾದಕ ವಸ್ತುಗಳಾದ ಎಂಡಿಎಂಎ ಮತ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿ, ಹೊರರಾಜ್ಯದ ಓರ್ವ ಡ್ರಗ್ ಫೆಡ್ಲರ್ ಸೇರಿ ಐವರನ್ನು ಬಂಧಿಸಲಾಗಿದೆ.
ಆರೋಪಿಗಳು ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ, ವಿದೇಶಿ ಮೂಲದ ಅಪರಿಚಿತ ವ್ಯಕ್ತಿಯೋರ್ವನಿಂದ, ರಾಜ್ಯದ ಅಪರಿಚಿತ ವ್ಯಕ್ತಿಗಳಿಂದ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮತ್ತು ಗಾಂಜಾವನ್ನು ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡಿರುತ್ತಾರೆ
ಆರೋಪಿಗಳಿಗೆ ನಿಷೇಧಿತ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಅಪರಿಚಿತ ವ್ಯಕ್ತಿಗಳ ಪತ್ತೆ ಕಾರ್ಯ ಮುಂದುವರೆದಿದ್ದು, ಪ್ರಕರಣಗಳ ತನಿಖೆಯು ಪ್ರಗತಿಯಲ್ಲಿದೆ.
ಈ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಐವರು ಆರೋಪಿಗಳನ್ನು ವಿವಿಧ ದಿನಾಂಕಗಳಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು ಐವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಈ ಕಾರ್ಯಾಚರಣೆಗಳನ್ನು ಸಿಸಿಬಿಯ ಹೆಚ್ಚುವರಿ ಪೊಲೀಸ್ ಆಯುಕ್ತ ಅಜಯ್ ಹಿಲೋರಿ,ಡಿಸಿಪಿಗಳಾದ ರಾಜ ಇಮಾಮ್ ಕಾಸಿಂ,ಯತೀಶ್.ಎನ್, ಸೈದುಲು ಅಡಾವತ್ ಮಾರ್ಗದರ್ಶನದಲ್ಲಿ ಅಧಿಕಾರಿ ಸಿಬ್ಬಂದಿಯ ತಂಡಗಳು ಯಶಸ್ವಿಯಾಗಿ ಕೈಗೊಂಡಿವೆ ಎಂದು ಹೇಳಿದರು.
























