
ಔರಾದ್ :ಮಾ.3: ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಕರು ಮತ್ತು ಪಾಲಕರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ತಹಸೀಲ್ದಾರ್ ಮಹೇಶ ಪಾಟೀಲ್ ಹೇಳಿದರು.
ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಸೋಮವಾರ ನಡೆದ ತಾಲೂಕಿನ ಪ್ರೌಢ ಶಾಲಾ ಮುಖ್ಯಗುರುಗಳ ಸಭೆಯಲ್ಲಿ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಳ್ಳುವ ಆತಂಕ ಮತ್ತು ಭಯವನ್ನು ದೂರ ಮಾಡುವುದು ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದರು. ಪರೀಕ್ಷೆ ಎಂಬುದು ಜೀವನದ ಅಂತಿಮ ಗುರಿಯಲ್ಲ; ಅದು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಒಂದು ಹಂತ ಮಾತ್ರ ಎಂಬ ಮನೋಭಾವವನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವುದು, ಅವರ ಶಕ್ತಿಸಾಮಥ್ರ್ಯಗಳನ್ನು ಗುರುತಿಸಿ ಉತ್ತೇಜಿಸುವುದು ಶಿಕ್ಷಕರ ಮುಖ್ಯ ಕರ್ತವ್ಯವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ವಿಭಿನ್ನ ಸಾಮಥ್ರ್ಯ ಹೊಂದಿರುತ್ತಾನೆ. ಶೇ. 40ರೊಳಗಿನ ಅಂಕಗಳನ್ನು ಪಡೆಯುವ ಅಥವಾ ಅನುತ್ತೀರ್ಣರಾಗುವ ಸಾಧ್ಯತೆ ಇರುವ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ವಿಶೇಷ ತರಗತಿಗಳು, ಮರುಪಾಠ ಮತ್ತು ವೈಯಕ್ತಿಕ ಮಾರ್ಗದರ್ಶನ ನೀಡಬೇಕು. ವಾರದ ಅವಧಿಯಲ್ಲಿ ಪ್ರಗತಿ ಪರಿಶೀಲನೆ ನಡೆಸಿ, ದುರ್ಬಲ ವಿಷಯಗಳ ಮೇಲೆ ಹೆಚ್ಚು ಗಮನ ಹರಿಸಬೇಕು ಎಂದು ಸೂಚಿಸಿದರು.
ತಾಪಂ ಇಒ ಕಿರಣ ಪಾಟೀಲ್ ಮಾತನಾಡಿ, ಜಿಪಂ ಸಿಇಒ ಅವರ ಮಾರ್ಗದರ್ಶನದಲ್ಲಿ ಫಲಿತಾಂಶ ಸುಧಾರಣೆಗೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಮಾದರಿ ಪರೀಕ್ಷೆಗಳ ಆಯೋಜನೆ, ವಿಷಯವಾರು ಕಾರ್ಯಾಗಾರಗಳು ಮತ್ತು ಶಿಕ್ಷಕರ ತರಬೇತಿ ಕಾರ್ಯಕ್ರಮಗಳು ನಡೆಯುತ್ತಿವೆ. ಈ ವರ್ಷ ಉತ್ತಮ ಸಾಧನೆ ಮಾಡುವ ಸಂಕಲ್ಪ ತೆಗೆದುಕೊಳ್ಳಬೇಕು ಎಂದು ಹೇಳಿದರು. ಪಾಲಕರ ಪಾತ್ರವೂ ಅತ್ಯಂತ ಮಹತ್ವದ್ದು. ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗುವವರೆಗೆ ಮನೆಯಲ್ಲಿ ಟಿವಿ, ಮೊಬೈಲ್ ಮತ್ತು ಇತರೆ ಮನರಂಜನಾ ಸಾಧನಗಳ ಬಳಕೆಯನ್ನು ನಿಯಂತ್ರಿಸುವ ಮೂಲಕ ಮಕ್ಕಳ ಅಧ್ಯಯನದ ಕಡೆಗೆ ಹೆಚ್ಚು ಗಮನ ಹರಿಸಬೇಕು. ಮಕ್ಕಳೊಂದಿಗೆ ಸ್ನೇಹಪೂರ್ವಕವಾಗಿ ಮಾತನಾಡಿ, ಅವರ ಸಂದೇಹಗಳನ್ನು ಕೇಳಿ ಪರಿಹರಿಸಬೇಕು. ಒತ್ತಡವನ್ನು ಹೆಚ್ಚಿಸುವ ಬದಲು ಪೆÇ್ರೀತ್ಸಾಹದ ಮಾತುಗಳ ಮೂಲಕ ಆತ್ಮಸ್ಥೈರ್ಯ ತುಂಬಬೇಕು ಎಂದು ತಿಳಿಸಿದರು.
ಈ ವೇಳೆ ಸಭೆಯಲ್ಲಿ ನಾನಾ ಶಾಲೆಗಳ ಮುಖ್ಯಗುರುಗಳು ತಮ್ಮ ಶಾಲೆಗಳಲ್ಲಿ ಕೈಗೊಂಡಿರುವ ಕ್ರಮಗಳನ್ನು ಹಂಚಿಕೊಂಡರು. ಕೆಲವರು ಬೆಳಿಗ್ಗೆ ಮತ್ತು ಸಂಜೆ ವಿಶೇಷ ತರಗತಿಗಳನ್ನು ನಡೆಸುತ್ತಿರುವುದಾಗಿ ತಿಳಿಸಿದರೆ, ಇನ್ನು ಕೆಲವರು ಪೆÇೀಷಕರ ಸಭೆಗಳ ಮೂಲಕ ಜಾಗೃತಿ ಮೂಡಿಸುತ್ತಿರುವುದಾಗಿ ಹೇಳಿದರು. ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಉತ್ತಮ ಸ್ಥಾನಕ್ಕೆ ತರುವ ಉದ್ದೇಶದಿಂದ ಎಲ್ಲರೂ ಸಮನ್ವಯದಿಂದ ಕೆಲಸ ಮಾಡುವಂತೆ ಅಧಿಕಾರಿಗಳು ಕರೆ ನೀಡಿದರು.
ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಮತ್ತು ಪಾಲಕರ ಸಹಕಾರ ಒಟ್ಟುಗೂಡಿದರೆ ಉತ್ತಮ ಫಲಿತಾಂಶ ಸಾಧಿಸುವುದು ಸಾಧ್ಯವೆಂದು ಸಭೆಯಲ್ಲಿ ವಿಶ್ವಾಸ ವ್ಯಕ್ತವಾಯಿತು. ಬಿಇಒ ಬಿಜಿ ರಂಗೇಶ, ರಾಜಕುಮಾರ, ಸುನಿಲ ವಾಘಮಾರೆ ಸೇರಿದಂತೆ ಇತರರಿದ್ದರು.
ಬಾಲ್ಯವಿವಾಹ ಸುಳಿವು ಕಂಡಲ್ಲಿ ಅಧಿಕಾರಿಗಳ ಗಮನಕ್ಕೆ ತನ್ನಿ
ಶಾಲೆಗೆ ಬರುವ ಮಕ್ಕಳ ಸ್ಥಿತಿ-ಪರಿಸ್ಥಿತಿಗಳ ಬಗ್ಗೆ ಶಿಕ್ಷಕರಿಗೆ ಸಮಗ್ರ ಮಾಹಿತಿ ಇರುತ್ತದೆ. ಬಾಲ್ಯ ವಿವಾಹ ನಡೆಯುವ ಸುಳಿವು ದೊರೆತರೂ ಅದನ್ನು ಮುಚ್ಚಿಡದೆ ತಕ್ಷಣ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಗಾಯತ್ರಿ ತಿಳಿಸಿದರು. ಮಕ್ಕಳ ಭವಿಷ್ಯ ಹಾಳಾಗದಂತೆ ಕಾನೂನುಬದ್ಧ ಕ್ರಮ ಕೈಗೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಬಿಸಿಯೂಟಕ್ಕೆ ಕಟ್ಟುನಿಟ್ಟಿನ ನಿಗಾ ವಹಿಸಿ
ತಾಲೂಕಿನ ಶಾಲೆಗಳಲ್ಲಿ ಬಿಸಿಯೂಟ ವಿತರಣೆಯಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ಮುಖ್ಯಗುರುಗಳು ಜಾಗ್ರತೆ ವಹಿಸಬೇಕು ಎಂದು ತಹಸೀಲ್ದಾರ್ ಮಹೇಶ ಪಾಟೀಲ್ ಹಾಗೂ ಇಒ ಕಿರಣ ಪಾಟೀಲ್ ಸೂಚಿಸಿದರು. ತಾಲೂಕಿನ ಜಮಾಲಪುರ ಶಾಲೆಯಲ್ಲಿ ನಡೆದ ಘಟನೆಯಂತೆ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಆಹಾರದ ಗುಣಮಟ್ಟ, ಸ್ವಚ್ಛತೆ ಹಾಗೂ ಸಂಗ್ರಹಣೆ ಕ್ರಮಗಳನ್ನು ನಿಯಮಿತವಾಗಿ ಪರಿಶೀಲಿಸಿ, ಯಾವುದೇ ದೂರುಗಳು ಬಂದಲ್ಲಿ ತಕ್ಷಣ ಸಂಬಂಧಿತ ಅಧಿಕಾರಿಗಳಿಗೆ ಪತ್ರ ಬರೆದು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.



























