ಶಾಲೆ ದೇವಾಲಯವಾಗಬೇಕು; ವಿದ್ಯಾರ್ಥಿಗಳು ಉನ್ನತ ಶಿಕ್ಷಣದತ್ತ ಸಾಗಲಿ: ಶಾಸಕ ಜಗದೀಶ್ ಗುಡಗುಂಟಿ

ಜಮಖಂಡಿ ಮಾ. 3: ಶಾಲೆ ಒಂದು ದೇವಾಲಯವಾಗಬೇಕು; ಅಲ್ಲಿ ಭ್ರಾತೃತ್ವ ಬೆಳೆದು ವಿದ್ಯಾರ್ಥಿಗಳು ಉನ್ನತ ಶಿಕ್ಷಣದತ್ತ ಮನಸ್ಸು ಮಾಡಬೇಕು. ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರೂ ಶಿಕ್ಷಣದ ಮೂಲಕ ಉತ್ತಮ ಪ್ರಜೆಯಾಗಬೇಕು ಎಂದು ಶಾಸಕ ಜಗದೀಶ್ ಗುಡಗುಂಟಿ ಹೇಳಿದರು.
ತಾಲೂಕಿನ ಮುತ್ತೂರು ಗ್ರಾಮದಲ್ಲಿ ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಸಹಯೋಗದಲ್ಲಿ ದುಂಡಪ್ಪ ಗಂಗಪ್ಪ ಹಿಪ್ಪರಗಿ ಸರ್ಕಾರಿ ಪ್ರೌಢ ಶಾಲೆ (ಆರ್‍ಎಂಎಸ್‍ಎ) ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜೀವನ ಅತಿ ವೇಗವಾಗಿ ಸಾಗುತ್ತಿದೆ. ಅದರೊಂದಿಗೆ ಹೆಜ್ಜೆ ಹಾಕುವ ಸಾಮಥ್ರ್ಯ ವಿದ್ಯಾರ್ಥಿಗಳಲ್ಲಿ ಬೆಳೆಬೇಕು. ಮಕ್ಕಳಿಗೆ ಸರ್ವತೋಮುಖ ಬೆಳವಣಿಗೆ ನೀಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಸಂಶೋಧನಾತ್ಮಕ ಕಲಿಕೆ ಶಿಕ್ಷಕರಲ್ಲಿ ಇರಬೇಕು; ಶಿಕ್ಷಕರೇ ನಿಜವಾದ ದೇವರು ಎಂದು ಹೇಳಿದರು.
ಅಧಿಕಾರ ಬರುತ್ತದೆ-ಹೋಗುತ್ತದೆ; ಆದರೆ ಅಧಿಕಾರದಲ್ಲಿರುವಾಗ ಸಮರ್ಪಕ ಕರ್ತವ್ಯ ನಿರ್ವಹಿಸಬೇಕು. ಜಾತ್ಯಾತೀತ-ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದೇವೆ. ಶಾಲೆಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲಾಗುವುದು. ಸಂಸ್ಥೆಗೆ ಭೂದಾನ ನೀಡಿದ ಹಿಪ್ಪರಗಿ ಕುಟುಂಬವನ್ನು ಅಭಿನಂದಿಸುತ್ತೇನೆ ಎಂದರು.
ರಾಚೋಟೇಶ್ವರ ಮಠದ ಗುರುಸಿದ್ಧೇಶ್ವರ ಶ್ರೀಗಳು, ಸಿದ್ಧಾರೂಢ ಮಠದ ಪರಿಪೂರ್ಣಾನಂದ ಭಾರತಿ ಶ್ರೀಗಳು, ರುದ್ರಾಕ್ಷಿ ಮಠದ ಭೈರವನಾಥ ಶ್ರೀಗಳು ಹಾಗೂ ಸಿದ್ಧಾರೂಢ ಶರಣರು ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಗ್ರಾಪಂ ಆಡಳಿತಾಧಿಕಾರಿ ಆನಂದ ರತ್ನಾಕರ, ಬಿಇಒ ಅಶೋಕ ಬಸಣ್ಣವರ, ವರ್ಧಮಾನ ನ್ಯಾಮಗೌಡ, ಗ್ಯಾರಂಟಿ ಅನುಷ್ಠಾನ ತಾಲೂಕು ಅಧ್ಯಕ್ಷ ಮಲ್ಲಪ್ಪ ಗಿರಡ್ಡಿ, ಸಂತೋಷ ತಳಕೇರಿ, ನರಸಿಂಹ ಕಲ್ಲೊಳ್ಳಿ, ಬಸವಂತ ಹಿಪ್ಪರಗಿ, ಸುರೇಶಗೌಡ ಪಾಟೀಲ, ಮುಖ್ಯಗುರುಮಾತೆ ಎನ್.ಎಂ. ಚೌರ, ಭೀಮು ಹಿಪ್ಪರಗಿ, ಮಲ್ಲು ದಾನಗೌಡ, ಭೂದಾನಿ ಸದಾಶಿವ ಹಿಪ್ಪರಗಿ, ಪಿ.ಟಿ. ಪಾಟೀಲ, ಬಿ.ಜಿ. ಪಾಟೀಲ, ಶಶಿ ಗಲಗಲಿ, ಸುಜೀತಗೌಡ ಪಾಟೀಲ, ಮಹೇಂದ್ರ ಮಗದುಮ, ಮಹಾವೀರ ಪಾಟೀಲ, ಪಿಡಿಒ ಗೋಪಾಲ ಕುರ್ತುಕೋಟಿ, ಅರುಣ ದೇವಮಾನೆ, ನಿಖಿಲ್ ಮಹಾಬಳಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬಿಇಒ ಅಶೋಕ ಬಸಣ್ಣವರ ಸ್ವಾಗತಿಸಿದರು. ಮುತ್ತಣ್ಣ ಹಿಪ್ಪರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಚಿದಾನಂದ ಜಡಿಮಠ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಕ ವಿನೋದ ದೇಶಪಾಂಡೆ ವಂದಿಸಿದರು.