
ಬೀದರ್: ಮಾ.3:ರಾಜ್ಯದ ವಿವಿಧ ಭಾಗಗಳಲ್ಲಿ ಹಿಂದೂ ಸಮುದಾಯದ ಮನೆಗಳು, ಶಾಂತಿಯುತ ಮೆರವಣಿಗೆಗಳು ಹಾಗೂ ವ್ಯಕ್ತಿಗಳ ಮೇಲೆ ನಿರಂತರ ದಾಳಿ ನಡೆಯುತ್ತಿರುವ ಘಟನೆಗಳ ಬಗ್ಗೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ತೀವ್ರ ಆತಂಕ ವ್ಯಕ್ತಪಡಿಸಿದೆ. ಈ ಕುರಿತು ಗೃಹ ಸಚಿವರು, ಪೆÇಲೀಸ್ ಮಹಾನಿರ್ದೇಶಕರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಫೆಬ್ರವರಿ 22ರಂದು ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ನಡೆಯುತ್ತಿದ್ದ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆದಿದ್ದು, ಕರ್ತವ್ಯದಲ್ಲಿದ್ದ ಎಸ್‍ಪಿ ಸಿದ್ದಾರ್ಥ್ ಗೋಯಲ್ ಸೇರಿದಂತೆ ಕೆಲವರು ಗಾಯಗೊಂಡಿದ್ದಾರೆ.
ಫೆಬ್ರವರಿ 24ರಂದು ಚಿಕ್ಕಮಗಳೂರು (ತಿಲಕ್ ಪಾರ್ಕ್ ಸಮೀಪ) ಹಾಗೂ ಉತ್ತರ ಕನ್ನಡ ಜಿಲ್ಲೆಯ ಬೈಲೂರು, ಮುರುಡೇಶ್ವರ ಪ್ರದೇಶಗಳಲ್ಲಿ ಹಿಂದೂ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ಆತಂಕ ಸೃಷ್ಟಿಸಿರುವುದಾಗಿ ಆರೋಪಿಸಲಾಗಿದೆ. ಕೆಲವು ಆರೋಪಿಗಳನ್ನು ಸ್ಥಳೀಯರು ಹಿಡಿದು ಪೆÇಲೀಸರಿಗೆ ಒಪ್ಪಿಸಿರುವುದಾಗಿ ತಿಳಿಸಲಾಗಿದೆ.
ಇದೇ ದಿನ ಶಿವಮೊಗ್ಗ ಜಿಲ್ಲೆಯ ಊರಗಡೂರಿನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯ ಹತ್ಯೆ ನಡೆದಿರುವುದಾಗಿ ಹಾಗೂ ಫೆಬ್ರವರಿ 25ರಂದು ಚಿತ್ರದುರ್ಗದಲ್ಲಿ ಮೊಬೈಲ್ ಅಂಗಡಿ ಮಾಲೀಕ ಹಾಗೂ ಹಿಂದೂ ನಾಯಕ ವಿಕ್ರಮ್ ಚೌದ್ರಿಗೆ ಚಾಕು ಇರಿತ ನಡೆದಿರುವ ಘಟನೆಗಳನ್ನೂ ಸಮಿತಿ ಉಲ್ಲೇಖಿಸಿದೆ.
ಈ ಎಲ್ಲಾ ಘಟನೆಗಳ ಬಗ್ಗೆ ವೇಗವಾದ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು, ಅಪರಾಧಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಪರಾರಿಯಾಗಿರುವ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡ ರಚಿಸಬೇಕು ಹಾಗೂ ಮೆರವಣಿಗೆಗಳು ಮತ್ತು ಮನೆಗಳಿಗೆ ಸಮರ್ಪಕ ಪೆÇಲೀಸ್ ಭದ್ರತೆ ಒದಗಿಸಬೇಕು ಎಂದು ಸಮಿತಿ ಆಗ್ರಹಿಸಿದೆ.
ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದ ಕಾಪಾಡಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಜಿಲ್ಲಾ ಸಂಯೋಜಕರು ಶ್ರೀಕಾಂತ ಮೋದಿ, ಸಹ ಸಂಯೋಜಕರು ಗೋಪಾಲಕೃಷ್ಣ, ಶ್ರಿಮತಿ ಹೆಮಂತಾ ಜೋಶಿ, ಶ್ರಿಮತಿ ಮಾಯಾವತಿ ಕೋಟೆ, ಶ್ರಿಮತಿ ಜೋತಿ ಅನೀಲಕುಮಾರ, ಸಂಜುಕುಮಾರ ಸಜ್ಜನ, ನೀಲಕಂಠ ಉಳ್ಳಾಗಡ್ಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



























