
ಬೆಂಗಳೂರು,ಮಾ.೩-ಗುತ್ತಿಗೆದಾರರೊಬ್ಬರ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಮಹಿಳೆಯೊಬ್ಬರು ಸಾವನ್ನಪ್ಪಿ ಮೂವರು ಗಾಯಗೊಂಡಿರುವ ದಾರುಣ ಘಟನೆ ಸುಬ್ರಮಣ್ಯನಗರದ ಗಾಯತ್ರಿನಗರದಲ್ಲಿ ನಡೆದಿದೆ.
ಗಾಯತ್ರಿನಗರದ ಸವಿತಾ (೫೩) ಮೃತಪಟ್ಟವರು,ಅವರ ಪತಿ ಗುತ್ತಿಗೆದಾರರಾಗಿದ್ದ ರಮೇಶ್ ಬಾಬು ಮತ್ತವರ ತಾಯಿ ಸಣ್ಣಮ್ಮ ಹಾಗೂ ಪುತ್ರ ಗಾಯಗೊಂಡಿದ್ದು,ಅವರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಮೇಶ್ ಬಾಬು ಅವರ ಕುಟುಂಬವು ನಾಲ್ಕು ಅಂತಸ್ತಿನ ಮನೆಯಲ್ಲಿ ವಾಸವಾಗಿದ್ದು, ಮನೆಯ ಮೊದಲ ಹಾಗೂ ಎರಡನೇ ಮಹಡಿಯನ್ನು ಬಾಡಿಗೆಗೆ ಕೊಟ್ಟಿದ್ದರು. ಮೂರು ಮತ್ತು ನಾಲ್ಕನೇ ಮಹಡಿಯಲ್ಲಿ ರಮೇಶ್ ಬಾಬು ತಾಯಿ,ಪತ್ನಿ ಮಗನ ಜೊತೆ ವಾಸವಾಗಿದ್ದರು.
ಮೂರನೇ ಮಹಡಿಯ ಅಡುಗೆ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಘಟನೆಯಲ್ಲಿ ರಮೇಶ್ ಬಾಬು ಪತ್ನಿ ಸವಿತಾ ಬೆಂಕಿಗೆ ಸಿಲುಕಿದರೆ,ಉಳಿದ ಮೂವರು ಉಸಿರುಗಟ್ಟಿ ಪ್ರಜ್ಞೆ ಕಳೆದುಕೊಂಡಿದ್ದರು.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಕಾರ್ಯಾಚರಣೆ ಕೈಗೊಂಡು ಸಮಯ ಪ್ರಜ್ಞೆ ಮೆರೆದು ಪ್ರಜ್ಞೆ ತಪ್ಪಿದ ಮೂವರನ್ನು ರಕ್ಷಣೆ ಮಾಡಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಸವಿತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ,
ಘಟನಾ ಸ್ಥಳಕ್ಕೆ ಮಲ್ಲೇಶ್ವರಂ ಎಸಿಪಿ ವೇಣುಗೋಪಾಲ ಹಾಗೂ ಸುಬ್ರಮಣ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





























