ಮಾ. ೬ ಗುತ್ತಿಗೆದಾರರ ಸಂಘದಿಂದ ಮುಷ್ಕರಕ್ಕೆ ಕರೆ

ಬೆಂಗಳೂರು,ಮಾ.೩:ರಾಜ್ಯ ಸರ್ಕಾರದ ವಿರುದ್ಧ ಬಾಕಿ ಬಿಲ್‌ಗಳ ಪಾವತಿಗೆ ಆಗ್ರಹಿಸಿ ಕರ್ನಾಟಕ ಸ್ಟೇಟ್ಸ್ ಕಂಟ್ರಾಕ್ಟರ್ ಅಸೋಸಿಯೇಷನ್ ಮಾರ್ಚ್ ೬ರಂದು ಸಾಂಕೇತಿಕ ಮುಷ್ಕರಕ್ಕೆ ಕರೆ ನೀಡಿದೆ. ಇಂದು ವಿಜಯನಗರದ ಕ್ಲಬ್‌ನಲ್ಲಿ ಗ್ರೇಟರ್ ಬೆಂಗಳೂರು ನಗರ ಪಾಲಿಕೆಗಳ ಗುತ್ತಿಗೆದಾರರ ಸಂಘದ ಜೊತೆ ಪೂರ್ವಭಾವಿ ಸಭೆ ನಡೆಯಿತು.


ಸಭೆಯಲ್ಲಿ ಬೆಂಗಳೂರು ಜಿಲ್ಲೆಯ ಗುತ್ತಿಗೆದಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಜಿಬಿಎ ವ್ಯಾಪ್ತಿಯಲ್ಲಿ ಒಟ್ಟಾರೆ ೨೬೦೦ ಕೋಟಿ ಬಾಕಿ ಪಾವತಿಯಾಗಬೇಕಿದ್ದು, ಈವರೆಗೆ ಹಂತ ಹಂತವಾಗಿ ೧೦೦೦ ಕೋಟಿ ಮಾತ್ರ ಪಾವತಿಸಲಾಗಿದೆ. ಇನ್ನೂ ೧೬೦೦ ಕೋಟಿ ಬಾಕಿ ಉಳಿದಿದ್ದು, ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಯಿತು.


ವಿವಿಧ ಇಲಾಖೆಗಳಲ್ಲಿ ಒಟ್ಟಾರೆ ೩೭ ಸಾವಿರ ಕೋಟಿ ಬಾಕಿ ಉಳಿದಿದ್ದು, ಮೂರು ವರ್ಷಗಳಿಂದ ಹಣ ಪಾವತಿ ಆಗಿಲ್ಲ ಎಂದು ಆರೋಪಿಸಿದರು. ಮುಖ್ಯಮಂತ್ರಿಗಳಿಗೆ ನೂರು ಪುಟಗಳ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಸಭೆ ಮಾಡುವುದಾಗಿ ಹೇಳಿ ಮುಂದೂಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಐದು ವರ್ಷಗಳ ಹಿಂದೆ ಪೂರ್ಣಗೊಂಡ ಕಾಮಗಾರಿಗಳ ಭದ್ರತಾ ಠೇವಣಿ ಹಣವೂ ಇನ್ನೂ ವಾಪಸ್ ನೀಡಿಲ್ಲ. ಗುತ್ತಿಗೆದಾರರು ಸಾಲದಲ್ಲಿ ಮುಳುಗಿದ್ದು, ಆತ್ಮಹತ್ಯೆ ಪ್ರಕರಣಗಳೂ ನಡೆದಿವೆ ಎಂದು ಅವರು ತಿಳಿಸಿದರು.


ಪ್ಯಾಕೇಜ್ ಟೆಂಡರ್ ವಿರೋಧ
ಎಂಟು-ಹತ್ತು ವಾರ್ಡ್‌ಗಳನ್ನು ಸೇರಿಸಿ ಪ್ಯಾಕೇಜ್ ಟೆಂಡರ್ ಕರೆದು ಜಾರಿಗೊಳಿಸುತ್ತಿರುವುದಕ್ಕೆ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ. ಜಿಬಿಎಯಲ್ಲೂ ಪ್ಯಾಕೇಜ್ ಟೆಂಡರ್ ಮಾಡಬಾರದು ಎಂದು ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದರು.


ಮಾರ್ಚ್ ೬ರಂದು ಒಂದು ದಿನದ ಸಾಂಕೇತಿಕ ಮುಷ್ಕರ
ಮಾರ್ಚ್ ೬ರಂದು ಒಂದು ದಿನ ಮಾತ್ರ ಕೆಲಸ ನಿಲ್ಲಿಸಿ ಸಾಂಕೇತಿಕ ಮುಷ್ಕರ ನಡೆಸಲಾಗುವುದು. ಆ ದಿನ ವಿವಿಧ ಇಲಾಖೆಗಳ ಕೆಲಸಗಳನ್ನು ಕೈಬಿಡಲಾಗುವುದು. ಸುಮಾರು ೧೫-೨೦ ಸಾವಿರ ಗುತ್ತಿಗೆದಾರರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ..


ಏಪ್ರಿಲ್‌ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಪಾದಯಾತ್ರೆ ಎಚ್ಚರಿಕೆ

ಬೇಡಿಕೆಗಳನ್ನು ಈಡೇರಿಸದಿದ್ದರೆ ಏಪ್ರಿಲ್ ತಿಂಗಳಲ್ಲಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗುವುದಾಗಿ ಸಂಘ ಎಚ್ಚರಿಸಿದೆ. ಅಗತ್ಯವಿದ್ದರೆ ಮುಖ್ಯಮಂತ್ರಿಗಳ ತವರು ಕ್ಷೇತ್ರದಿಂದಲೇ ಬೆಂಗಳೂರಿಗೆ ಪಾದಯಾತ್ರೆ ನಡೆಸುವ ನಿರ್ಧಾರವನ್ನೂ ಕೈಗೊಳ್ಳಲಾಗಿದೆ. ಚಾಮುಂಡೇಶ್ವರಿ ತಾಯಿ ಆಶೀರ್ವಾದದಿಂದ ಪಾದಯಾತ್ರೆ ಆರಂಭಿಸುವ ಯೋಜನೆ ರೂಪಿಸಲಾಗಿದೆ ಎಂದು ಸಂಘದ ನಾಯಕರು ತಿಳಿಸಿದ್ದಾರೆ.
ಸರ್ಕಾರ ತಕ್ಷಣವೇ ಬಾಕಿ ಹಣ ಬಿಡುಗಡೆ ಮಾಡಿ ಗುತ್ತಿಗೆದಾರರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸಂಘ ಒತ್ತಾಯಿಸಿದೆ…